ಸೋಮವಾರಪೇಟೆ, ಫೆ. 17: ಸಮೀಪದ ಸಿದ್ದಲಿಂಗಪುರ ಗ್ರಾಮದಲ್ಲಿರುವ ಶ್ರೀಮಂಜುನಾಥ ಕ್ಷೇತ್ರದಲ್ಲಿ ಶ್ರದ್ಧಾಭಕ್ತಿಯೊಂದಿಗೆ ಶಿವರಾತ್ರಿ ಉತ್ಸವ ನಡೆಯಿತು. ಬೆಳಗ್ಗೆ ಸನ್ನಿಧಿಯಲ್ಲಿ ಗುರುಗಳಾದ ರಾಜೇಶ್ನಾಥ್ ನೇತೃತ್ವದಲ್ಲಿ ಅರ್ಚಕ ಜಗದೀಶ್ ಉಡುಪ ಪೌರೋಹಿತ್ಯದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದ ನಂತರ ವಿವಿಧ ಪೂಜಾ ಕೈಂಕರ್ಯಗಳು ನಡೆದವು.
ಬೆಳಗ್ಗಿನಿಂದಲೇ ಶಿವಲಿಂಗಕ್ಕೆ ಜಲಾಭಿಷೇಕ, ರುದ್ರಾಭಿಷೇಕ, ಕ್ಷೀರಾಭಿಷೇಕ, ಪುಷ್ಪಾಭಿಷೇಕ, ಎಳನೀರು ಅಭಿಷೇಕ ಹಾಗೂ ಭಸ್ಮಾಭಿಷೇಕ ಸೇರಿದಂತೆ ವಿವಿಧ ಅಭಿಷೇಕಗಳು ಒಟ್ಟು ಎಂಟು ಯಾಮಗಳಲ್ಲಿ ನಡೆದವು.
ರಾತ್ರಿ ಹತ್ತು ಗಂಟೆಯಿಂದ ಬೆಳಗಿನ ಜಾವದವರೆಗೆ ರಾಜೇಶ್ನಾಥ್ ಗುರೂಜಿ ನೇತೃತ್ವದಲ್ಲಿ ಭಕ್ತಿಗೀತೆ, ಭಜನೆ ಕಾರ್ಯಕ್ರಮ ನಡೆಯಿತು. ಶಿವಲಿಂಗವನ್ನು ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿದ ನಂತರ ಸಿದ್ದಲಿಂಗಪುರಕ್ಕೆ ತರಲಾಯಿತು. ಶಿವರಾತ್ರಿಯಂದು ಬೆಳಗ್ಗೆ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಯಿತು ಎಂದು ಶ್ರೀ ಕ್ಷೇತ್ರದ ಅಧ್ಯಕ್ಷ ನಾಪಂಡ ಮುತ್ತಪ್ಪ ಹೇಳಿದರು.
ಕಳೆದ 3600 ವರ್ಷಗಳ ಹಿಂದೆ ಸಿದ್ದಲಿಂಗಪುರದ ವ್ಯಾಪ್ತಿಯಲ್ಲಿ ಸಿದ್ದಪುರುಷರು ಕಾಡಿನಲ್ಲಿ ಲಿಂಗವನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ಸಲ್ಲಿಸುತ್ತಿದ್ದ ಈ ಕ್ಷೇತ್ರ ಇದೀಗ ಮಂಜುನಾಥ ಕ್ಷೇತ್ರವಾಗಿ ರೂಪುಗೊಂಡಿದೆ. ಅಲ್ಲದೆ ನವನಾಗನ ಕ್ಷೇತ್ರವಾಗಿರುವದರಿಂದ ಕೊಡಗಿನಲ್ಲೇ ಅತೀ ದೊಡ್ಡ ಮಂಜುನಾಥ ಕ್ಷೇತ್ರವಾಗಲಿದೆ. ಈ ಕುರಿತು ಸ್ಥಳದಲ್ಲಿ ದೊರೆತಿರುವ ಶಿಲಾಶಾಸನಗಳು ಪುಷ್ಠೀಕರಿಸಿವೆ ಎಂದು ಕದ್ರಿ ಮಂಜುನಾಥ ದೇವಾಲಯದ ಗುರುಗಳಾದ ರಾಜೇಶ್ನಾಥ್ ಮಾಹಿತಿ ನೀಡಿದರು.
ಪೂಜಾ ಕಾರ್ಯದಲ್ಲಿ ಕೂತಿ ಗ್ರಾಮದ ಈಶ್ವರ ದೇವಸ್ಥಾನದ ಅರ್ಚಕರಾದ ವಾದಿರಾಜ ಭಟ್, ವ್ಯಾಸರಾಜ್ ಭಟ್, ಗುಂಡ್ಲುಪೇಟೆಯ ವಿವೇಕ್, ಕೂಡಿಗೆಯ ನವೀನ್ ಭಟ್ ಮತ್ತಿತರರು ಪಾಲ್ಗೊಂಡಿದ್ದರು.