ಬೆಂಗಳೂರು, ಫೆ. 16: ಕರ್ನಾಟಕ ರಾಜ್ಯದ 2018-19ನೇ ಸಾಲಿನ ಅಯ - ವ್ಯಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದಾರೆ. ಹಣಕಾಸು ಮಂತ್ರಿಯಾಗಿ 13ನೇ ಹಾಗೂ ರಾಜ್ಯದ ಮುಖ್ಯಮಂತ್ರಿಯಾಗಿ 6ನೇ ಬಜೆಟ್ ಅನ್ನು ಮಂಡಿಸಿದ್ದು, ಕೃಷಿ ವಲಯ, ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವದರೊಂದಿಗೆ ಎಲ್ಲಾ ವರ್ಗದವರನ್ನು ಸಮಾಧಾನಿಸುವ ಪ್ರಯತ್ನ ಮಾಡಲಾಗಿದೆ. ರೈತರ ಸಂಕಷ್ಟಕ್ಕೆ ನೆರವು ಸೇರಿದಂತೆ ಮಹಾನಗರಿ ಬೆಂಗಳೂರು ಅಭಿವೃದ್ಧಿಪಡಿಸುವ ಅಂಶಗಳು ಬಜೆಟ್‍ನಲ್ಲಿ ಅಡಕವಾಗಿವೆ. ಒಟ್ಟು ರೂ. 2,09,181 ಕೋಟಿ ವೆಚ್ಚದ ಬಜೆಟ್ ಮಂಡನೆಯಾಗಿದ್ದು, ಈ ಪೈಕಿ ರಾಜಸ್ವ ವೆಚ್ಚ ರೂ.1,62,637 ಕೋಟಿಗಳಾಗಿವೆ. ಬಂಡವಾಳ ವೆಚ್ಚ 35,458 ಕೋಟಿಯದ್ದಾಗಿದ್ದು, ರೂ. 11,086 ಕೋಟಿ ಸಾಲ ಮರುಪಾವತಿಗೆ ಮೀಸಲಿರಿಸಲಾಗಿದೆ.

ಕೃಷಿ ವಲಯ

ರೈತನ ಮಗನಾಗಿ ನಾನು ಬಜೆಟ್ ಮಂಡಿಸುತ್ತಿರುವದಾಗಿ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಷಿ ವಲಯಕ್ಕೆ ನೀಡಿರುವ ಅನುದಾನದ ಪ್ರಮುಖ ವಿವರ ಇಲ್ಲಿದೆ.

2018-19ನೇ ಸಾಲಿನಲ್ಲಿ ಕೃಷಿ ಇಲಾಖೆಗೆ ರೂ. 5080 ಕೋಟಿ ನೀಡಲಾಗಿದೆ. ಪಶುಸಂಗೋಪನೆಗೆ ರೂ.2245 ಕೋಟಿ ರೂಪಾಯಿ ಅನುದಾನ, ಜಲಸಂಪನ್ಮೂಲ ಇಲಾಖೆಗೆ ರೂ.15,929 ಕೋಟಿ ಅನುದಾನ, ಸಣ್ಣ ನೀರಾವರಿಗೆ ರೂ.2090 ಕೋಟಿ ಅನುದಾನ ನೀಡಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕುಗಳಲ್ಲಿ ನಿಧನ ಹೊಂದಿದ ರೈತರ ರೂ. 1 ಲಕ್ಷದವರೆಗಿನ ಸಾಲ ಮನ್ನಾ ಮಾಡುವದಾಗಿ ತಿಳಿಸಿದ್ದಾರೆ.

ತೋಟಗಾರಿಕೆಗೆ ರೂ.1091 ಕೋಟಿ ಅನುದಾನ, ರೇಷ್ಮೆ ಇಲಾಖೆಗೆ ರೂ.429 ಕೋಟಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿನ 1000 ಹಮಾಲರಿಗೆ ವಸತಿ ಸೌಲಭ್ಯ

ರೈತರಿಗೆ ಶೇ.3ರ ಬಡ್ಡಿದರದಲ್ಲಿ 10 ಲಕ್ಷ ರೂಪಾಯಿ ಸಾಲ ಘೋಷಿಸಲಾಗಿದೆ. ಶೇಂಗಾ ಬೆಳೆಗಾರರಿಗೆ ರೂ.50 ಕೋಟಿ ವಿಶೇಷ ಪ್ಯಾಕೇಜ್.

ಸಿರಿಧಾನ್ಯ ಬೆಳೆಗಾರರಿಗೆ ರೂ.24 ಕೋಟಿ ಪ್ಯಾಕೇಜ್. ಸಿರಿಧಾನ್ಯ ಬೆಳೆಗಳ ಯೋಜನೆ 60 ಲಕ್ಷ ಹೆಕ್ಟೇರ್‍ಗೆ ವಿಸ್ತರಣೆ. ಹಾವು ಕಡಿತದಿಂದ ಮೃತಪಟ್ಟ ರೈತನಿಗೆ 2 ಲಕ್ಷ ರೂಪಾಯಿ ನೆರವು ಘೋಷಿಸಲಾಗಿದೆ. ರೈತರು ಬೆಳೆದ ಮರಗಳನ್ನು ಡಿಪೋಗಳಲ್ಲಿ ಅರಣ್ಯ ಇಲಾಖೆ ಹಾಗೂ ಎಪಿಎಂಸಿ ಸಮನ್ವಯದೊಂದಿಗೆ ಬಹಿರಂಗ ಹರಾಜಿನಲ್ಲಿ ಮಾರಾಟಕ್ಕೆ ವ್ಯವಸ್ಥೆ.

ಕೃಷಿ ಭಾಗ್ಯ ಯೋಜನೆಗೆ ರೂ. 600 ಕೋಟಿ ಅನುದಾನ, ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ಚಾಮರಾಜನಗರ ಜಿಲ್ಲೆಯಲ್ಲಿ ನೂತನ ಕೃಷಿ ಕಾಲೇಜು ಸ್ಥಾಪನೆ. ಜಿವಿಕೆಯಲ್ಲಿ ನಂಜುಂಡಸ್ವಾಮಿ ಸಂಶೋಧನಾ ಪೀಠ ಸ್ಥಾಪನೆ, ವಿಜಯಪುರ ಜಿಲ್ಲೆ ಮುದ್ದೇಬಿಹಾಳದಲ್ಲಿ ನೂತನ ಕೃಷಿ ಸಂಶೋಧನಾ ಕೇಂದ್ರ.

ರೈತರಿಗೆ ನೇರ ಆದಾಯ ಒದಗಿಸುವ ರೈತ ಬೆಳಕು ಯೋಜನೆ ಮೂಲಕ ಗರಿಷ್ಠ ರೂ.10 ಸಾವಿರವರೆಗೆ ಸಹಾಯಧನ. ಇದರಿಂದ ಸುಮಾರು 70 ಲಕ್ಷ ರೈತರಿಗೆ

(ಮೊದಲ ಪುಟದಿಂದ) ಅನುಕೂಲ. ಕುರಿ, ಮೇಕೆ ಸಾಕಾಣಿಕೆಗೆ ಮಾಡಿದ ಸಾಲಮನ್ನಾ. ರಾಜ್ಯದ 16 ಜಿಲ್ಲೆಗಳಲ್ಲಿ ಕುರಿ ರೋಗ ತಪಾಸಣಾ ಕೇಂದ್ರ ಸ್ಥಾಪನೆ.

ಶಿಕ್ಷಣ ಕ್ಷೇತ್ರ

ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್‍ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ರೂ. 26864 ಕೋಟಿ ಅನುದಾನ ನೀಡಿದ್ದಾರೆ. ಅದರಲ್ಲಿ ಪ್ರಾಥಮಿಕ - ಪ್ರೌಢ ಶಿಕ್ಷಣ ರೂ. ರೂ.22350 ಕೋಟಿ ಮೀಸಲಿರಿಸಲಾಗಿದೆ, ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯ ಒದಗಿಸಲಾಗಿದೆ. ರಾಜ್ಯದ 19.60 ಲಕ್ಷ ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯಲಿದ್ದಾರೆ,

100 ಪೂರೈಸಿದ ಸರ್ಕಾರಿ ಶಾಲೆಗಳ ನವೀಕರಣಕ್ಕೆ ಆದ್ಯತೆ ನೀಡಲಾಗಿದ್ದು, 100 ಸಂಯೋಜಿತ ಕರ್ನಾಟಕ ಪಬ್ಲಿಕ್ ಶಾಲೆ ನಿರ್ಮಾಣ. ಪ್ರತಿ ಶಾಲೆÉಗೆ 5 ಲಕ್ಷದಂತೆ 5 ಕೋಟಿ ರೂ. ವೆಚ್ಚ. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಹಂತಹಂತವಾಗಿ ಸಿಸಿಟಿವಿ ಅಳವಡಿಕೆ. 10 ಲಕ್ಷ ವಿದ್ಯಾರ್ಥಿಗಳಿಗೆ ಡಿಜಿಟಲ್ ಗ್ರಂಥಾಲಯ ಸೌಲಭ್ಯಕ್ಕೆ ರೂ. 5 ಕೋಟಿ ಮೀಸಲು, ರೂ. 7.5 ಕೋಟಿ ವೆಚ್ಚದಲ್ಲಿ ಸಂಚಾರಿ ವಿಜ್ಞಾನ ಪ್ರಯೋಗಾಲಯ ಸ್ಥಾಪನೆ ಘೋಷಿಸಲಾಗಿದೆ.

ಉನ್ನತ ಶಿಕ್ಷಣ ಕ್ಷೇತ್ರಕ್ಕೆ ರೂ. 4514 ಕೋಟಿ ಮೀಸಲಿಟ್ಟಿರುವ ಸಿಎಂ ಚಿಕ್ಕಮಗಳೂರಿನಲ್ಲಿ ಕುವೆಂಪು ವಿವಿ ಸ್ನಾತಕೋತ್ತರ ಕೇಂದ್ರ ಸ್ಥಾಪನೆ ಮಾಡುವದಾಗಿ ಹೇಳಿದ್ದಾರೆ, ಮೈಸೂರು ವಿವಿಯಲ್ಲಿ ಬಸವ ಅಧ್ಯಯನ ಕೇಂದ್ರ ಸ್ಥಾಪನೆ. ಬಸವ ಅಧ್ಯಯನ ಕೇಂದ್ರ ಸ್ಥಾಪನೆಗೆ ರೂ. 2 ಕೋಟಿ ಅನುದಾನ. ಉನ್ನತ ಶಿಕ್ಷಣ ಪಡೆಯುವ ಪದವಿ ಪೂರ್ವ, ಪದವಿ, ಸ್ನಾತಕೋತ್ತರ ವಿದ್ಯಾರ್ಥಿನಿಯರಿಗೆ ಉಚಿತ ಪ್ರವೇಶ, ಧಾರವಾಡ ಕರ್ನಾಟಕ ವಿವಿಯಲ್ಲಿ ಕೊಂಕಣಿ ಅಧ್ಯಯನ ಪೀಠಕ್ಕೆ 1 ಕೋಟಿ ಮೀಸಲಿಡಲಾಗಿದೆ, 5 ಹೊಸ ಮಹಿಳಾ ಪದವಿಪೂರ್ವ ಕಾಲೇಜು ಸ್ಥಾಪನೆ, 25 ವಿದ್ಯಾರ್ಥಿನಿ ನಿಲಯ, 4 ಬಿ.ಎಡ್ ಹಾಗೂ ಡಿ.ಎಡ್ ಕಾಲೇಜುಗಳ ಸ್ಥಾಪನೆ, 25 ಹೊಸ ಮೊರಾರ್ಜಿ ದೇಸಾಯಿ ಶಾಲೆ ಆರಂಭ. ಬಿ.ಎಡಿ ಮತ್ತು ಡಿ.ಎಡ್ ವ್ಯಾಸಂಗ ಮಾಡುತ್ತಿರುವ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ರೂ.25 ಸಾವಿರ ಪ್ರೋತ್ಸಾಹ ಧನ ಘೋಷಿಸಲಾಗಿದೆ.

ನರ್ಸಿಂಗ್ ಕಾಲೇಜುಗಳ ಮೇಲ್ದರ್ಜೆಗೆ ರೂ. 30 ಕೋಟಿ ಅನುದಾನ ನೀಡಲಾಗಿದೆ. ಐಐಟಿ, ಐಐಎಸ್‍ಸಿಯಂತಹ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವ ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳಿಗೆ ತಲಾ ರೂ. 2 ಲಕ್ಷ ಸಹಾಯಧನ ಘೋಷಿಸಲಾಗಿದೆ.

ಆರೋಗ್ಯದತ್ತ ಗಮನ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರೂ.6,645 ಕೋಟಿಯನ್ನು ಮೀಸಲಿಟ್ಟಿದ್ದಾರೆ.

ಈ ವರ್ಷದ ಅಂತ್ಯದೊಳಗೆ ರಾಜ್ಯದಾದ್ಯಂತ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ತರುವದಾಗಿ ಘೋಷಣೆ ಮಾಡಿದ್ದಾರೆ.

ಅಪೌಷ್ಠಿಕತೆ ನಿರ್ಮೂಲನೆ ಮಾಡಲು ಹಲವಾರು ಯೋಜನೆಗಳನ್ನು ಕೈಗೊಳ್ಳಲಾಗಿದೆ. ಹವಾಮಾನ, ಸಿಡಿಲು, ಮುನ್ನೆಚ್ಚರಿಕಾ ಆ್ಯಪ್ ನಿರ್ಮಾಣ ಮಾಡಲಿದ್ದು, ವನ್ಯಜೀವಿಗಳ ಧಾಳಿಯಿಂದ ಮೃತಪಟ್ಟವರಿಗೆ ಪರಿಹಾರ ಧನವನ್ನು ನೀಡಲಾಗುತ್ತದೆ.

ವೃದ್ಧಾಪ್ಯ ಯೋಜನೆ, ನಿರ್ಗತಿಕ ವಿಧವಾ ವೇತನ ಪಿಂಚಣಿಯಲ್ಲಿ ಹೆಚ್ಚಳ ಮಾಡಲಾಗುತ್ತದೆ. ರಾಜ್ಯ ಆರೋಗ್ಯ ಪರಿಷತ್ತು ಸ್ಥಾಪನೆ, ರಾಜ್ಯದ ಎಲ್ಲಾ ಜನತೆಗೆ ಆರೋಗ್ಯ ಕರ್ನಾಟಕ ಯೋಜನೆ, ವರ್ಷದ ಅಂತ್ಯದೊಳಗೆ ಯೋಜನೆ ಜಾರಿ ಮಾಡಲಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಕ್ರಮ.

ಮಾಧ್ಯಮದ ಮೇಲೆ ಕರುಣೆ

ಈ ಬಾರಿಯ ಬಜೆಟ್‍ನಲ್ಲಿ ಪತ್ರಕರ್ತರಿಗೂ ಮನ್ನಣೆ ನೀಡಿದ್ದಾರೆ.

ಮಾಧ್ಯಮ ಸಂಜೀವಿನ ಯೋಜನೆ ಆರಂಭಗೊಳಿಸುವದಾಗಿ ಘೋಷಣೆ ಮಾಡಿದ್ದಾರೆ.

ಮಾಧ್ಯಮ ಸಂಜೀವಿನ ಯೋಜನೆಯಡಿಯಲ್ಲಿ ರೂ. ಕೋಟಿ ವೆಚ್ಚದಲ್ಲಿ ಪತ್ರಕರ್ತರ ಭವನ ನಿರ್ಮಾಣ, ಪತ್ರಿಕೆಗಳನ್ನು ಮನೆಮನೆಗೆ ಹಂಚುವವರ ಕ್ಷೇಮಾಭಿವೃದ್ಧಿಗೆ ರೂ. 2 ಕೋಟಿ ಕ್ಷೇಮ ನಿಧಿ ಸ್ಥಾಪನೆ, ವೃತ್ತಿ ನಿರತ ಪತ್ರಕರ್ತರು ಅಪಘಾತಕ್ಕೆ ಒಳಗಾದರೆ ಮತ್ತು ಅಕಾಲಿಕ ಮರಣವನ್ನಪ್ಪಿದ ಸಂದರ್ಭದಲ್ಲಿ ರೂ.5 ಲಕ್ಷವರೆಗಿನ ಜೀವ ವಿಮೆ ನೀಡುವದಾಗಿ ಘೋಷಿಸಿದ್ದಾರೆ.

ಇದಲ್ಲದೆ, ಈಗಾಗಲೇ ಪತ್ರಕರ್ತರಿಗೆ ನೀಡಲಾಗುತ್ತಿರುವ ರಾಜೀವ್ ಆರೋಗ್ಯ ಯೋಜನೆಯನ್ನು ಬಲವರ್ಧನೆಗೊಳಿಸಿ ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಕಳೆದ 5 ವರ್ಷಗಳಲ್ಲಿ ಪತ್ರಕರ್ತರಿಗೆ ನೀಡಲಾಗುತ್ತಿರುವ ಮಾಸಾಶನವನ್ನು ರೂ. 3 ಸಾವಿರದಿಂದ ರೂ. 10 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಪತ್ರಕರ್ತರ ಪಾಲಿನ ಶುಲ್ಕವನ್ನು ಇಲಾಖೆಯೇ ಭರಿಸಲಿದ್ದು, ಮಾನ್ಯತೆ ಪಡೆದ ಜಿಲ್ಲಾ ಪತ್ರಕರ್ತರಿಗೆ ಜಿಲ್ಲಾ ಮಟ್ಟದಲ್ಲಿ ಸಂಚರಿಸಲು ಉಚಿತ ಬಸ್ ಪಾಸ್ ವಿತರಿಸಲಾಗುತ್ತದೆ.

ಪರಿಶಿಷ್ಟ ವಿದ್ಯಾರ್ಥಿಗಳಿಗೆ

ಐ.ಐ.ಟಿ, ಐ.ಐ.ಎಂ , ಐ.ಎಂ.ಎ., ಐ.ಐ.ಎಸ್.ಸಿ, ಎನ್.ಐ.ಟಿ ಮುಂತಾದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಪ.ಜಾತಿ, ಪ.ಪಂಗಡ ವಿದ್ಯಾರ್ಥಿಗಳಿಗೆ ಒಂದು ಬಾರಿ ನೀಡುವ ಪ್ರೋತ್ಸಾಹಧನ 2 ಲಕ್ಷ ರೂಪಾಯಿಗಳಿಗೆ ಹೆಚ್ಚಳ. * ಪರಿಶಿಷ್ಟ ಜಾತಿ ಹುಡುಗ ಬೇರೆ ಜಾತಿಯ ಹುಡುಗಿಯನ್ನು ಮದುವೆ ಮಾಡಿಕೊಂಡರೆ, ಹಾಲಿ ನೀಡುತ್ತಿರುವ ಪ್ರೋತ್ಸಾಹಧನ 3 ಲಕ್ಷ ರೂಪಾಯಿಗಳಿಗೆ ಹಾಗೂ ಪರಿಶಿಷ್ಟ ಜಾತಿಯ ಹುಡುಗಿ ಬೇರೆ ಜಾತಿಯ ಹುಡುಗನನ್ನು ಮದುವೆ ಮಾಡಿಕೊಂಡರೆ ನೀಡುವ ಪ್ರೋತ್ಸಾಹಧನ 5 ಲಕ್ಷ ರೂಪಾಯಿಗಳಿಗೆ ಹೆಚ್ಚಳ. ಇದೇ ಮಾದರಿಯಲ್ಲಿ ದೇವದಾಸಿಯರ ಮಕ್ಕಳ ಮದುವೆಗೂ ಸೌಲಭ್ಯ. * ಬಿ.ಬಿ.ಎಂ.ಪಿ., ಮಹಾನಗರಪಾಲಿಕೆ, ನಗರಸಭೆ, ಪುರಸಭೆಗಳ ಸದಸ್ಯನಾಗಿ ಪೌರ ಕಾರ್ಮಿಕರಿಗೆ ಸೇರಿದ ಒಬ್ಬ ವ್ಯಕ್ತಿಯ ನಾಮನಿರ್ದೇಶನಕ್ಕೆ ಕ್ರಮ. * ಹಿಂದುಳಿದ ವರ್ಗಗಳು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ಹಾಲಿ ಇರುವ ಕೆನೆಪದರ ಆದಾಯ ಮಿತಿ 8 ಲಕ್ಷ ರೂಪಾಯಿಗೆ ಹೆಚ್ಚಳ. * ಪೂರ್ಣಾವಧಿ ಪಿ.ಎಚ್ ಡಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಮಾಸಿಕ ವ್ಯಾಸಂಗ ವೇತನ, ಫೆಲೋಶಿಪ್ 10,000 ರೂಪಾಯಿಗೆ ಹೆಚ್ಚಳ.