ಮಡಿಕೇರಿ, ಫೆ. 17 : ಸ್ವಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಮೂಲಕ ನಮ್ಮಲ್ಲಿ ಹುದುಗಿರುವ ಅದ್ವಿತೀಯ ಶಕ್ತಿಯನ್ನು ಅರಿತುಕೊಳ್ಳುವ ಅಗತ್ಯವಿದೆ ಎಂದು ಆಧ್ಯಾತ್ಮ ಚಿಂತಕ ಶ್ರೀನಿವಾಸ್ ಅರ್ಕ ಅವರು ಅಭಿಪ್ರಾಯಪಟ್ಟರು.

ಸಾರ್ವತ್ರಿಕ ಮಾನವೀಯ ಮೌಲ್ಯಗಳು ಮತ್ತು ವೃತ್ತಿ ನೈತಿಕತೆ ತರಬೇತಿಯ ಸರಣಿ ಕಾರ್ಯಕ್ರಮ ಭಾಗವಾಗಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ‘ಸ್ವಪ್ರಜ್ಞೆ ಅರಿವು’ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಮನುಷ್ಯನಲ್ಲಿ ಯೂ ದಿವ್ಯ ಶಕ್ತಿ ಅಡಗಿದ್ದು, ಅದನ್ನು ನಾವು ಅರಿತುಕೊಳ್ಳಲು ಕಾಳಜಿ ವಹಿಬೇಕಿದೆ ಎಂದರು.

ಮನುಷ್ಯನಿಗೆ ಕೇವಲ ಐದು ಇಂದ್ರೀಯಗಳಿದ್ದು, ಒಂದೊಂದು ಗುಣಸಾಮಥ್ರ್ಯಗಳನ್ನು ಹೊಂದಿದೆ ಎಂದು ನಾವು ಇದುವರೆಗೆ ತಿಳಿದಿರುತ್ತೇವೆ. ಆದರೆ, ನಮ್ಮಲ್ಲಿ ಅದಕ್ಕಿಂತಲೂ ಹೆಚ್ಚಿನ ಇಂದ್ರೀಯ ಗಳಿವೆ. ಅದು ಪರಸ್ಪರ ಹಾಗೂ ವಿಭಿನ್ನ ವ್ಯಕ್ತಿಗಳೊಂದಿಗೆ ಸಂವಹನದಲ್ಲಿ ತೊಡಗುತ್ತಿರುತ್ತವೆ. ಸಾರ್ವತ್ರಿಕವಾಗಿ ಇಂತಹ ದಿವ್ಯ ಶಕ್ತಿಗಳ ಸಂವಹನ ಪರಸ್ಪರ ಸಂವಹನದಲ್ಲಿ ತೊಡಗುತ್ತಿರುತ್ತವೆ. ಅದನ್ನು ಅರಿತುಕೊಳ್ಳುವ ಪ್ರಯತ್ನ ಮಾಡಿದರೆ ನಮಗೆ ಅಧ್ಬುತ ಅನುಭವವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಕಾಲೇಜು ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ, ನಿರಂತರ ಪ್ರಯತ್ನದಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆತ್ಮವಿಶ್ವಾಸ ದಿಂದ ಕಾರ್ಯನಿರ್ವಹಿಸಿದರೆ ಜೀವನ ಯಶಸ್ಸಿನತ್ತ ಸಾಗುತ್ತದೆ. ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಈಗಿನಿಂದಲೇ ನಿರಂತರ ಪ್ರಯತ್ನ ನಡೆಸಬೇಕು ಎಂದು ಸಲಹೆ ನೀಡಿದರು.

ಕೌಶಲ್ಯಾಭಿವೃದ್ಧಿ ಸಮಿತಿಯ ಸಂಯೋಜಕರು ಹಾಗೂ ಹಿಂದಿ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಹೆಗಡೆ, ಆಂತರಿಕ ಗುಣಮಟ್ಟ ಖಾತರಿ ಘಟಕ (ಐಕ್ಯುಎಸಿ) ಸಂಯೋಜಕರು ಹಾಗೂ ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥ ಎಂ.ಎನ್. ರವಿಶಂಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.