ಸಿದ್ದಾಪುರ, ಫೆ. 16: ಸಿದ್ದಾಪುರ ಸಮೀಪ ಬೀಟಿಕಾಡು ಕಾಫಿ ತೋಟದಲ್ಲಿ ಕಾಣಿಸಿಕೊಂಡಿರುವ ಹುಲಿಯನ್ನು ಪಟಾಕಿ ಸಿಡಿಸುವ ಮೂಲಕ ಕಾರ್ಯಾಚರಣೆ ನಡೆಸಿ ಅರಣ್ಯಕ್ಕೆ ಅಟ್ಟುವ ಬಗ್ಗೆ ಕ್ರಮ ಕೈಗೊಳ್ಳಲಾಗುವದೆಂದು ವೀರಾಜಪೇಟೆ ತಾಲೂಕು ಡಿ.ಸಿ.ಎಫ್. ಮರಿಯ ಕ್ರಿಷ್ಟಿರಾಜ್ ತಿಳಿಸಿದರು. ಇತ್ತೀಚೆಗೆ ಜಾನುವಾರು ಹಾಗೂ ಕೋಣವೊಂದರ ಮೇಲೆ ಹುಲಿ ಧಾಳಿ ನಡೆಸಿ ಸಾಯಿಸಿ ತಿಂದಿದ್ದಲ್ಲದೆ ವಸತಿ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಹುಲಿಯನ್ನು ಸೆರೆಹಿಡಿಯಲು ಕಾರ್ಮಿಕರು ಹಾಗೂ ಗ್ರಾಮಸ್ಥರು ಅರಣ್ಯ ಇಲಾಖೆಯ ಮೇಲಾಧಿಕಾರಿಗಳನ್ನು ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ‘ಶಕ್ತಿ’ಯು ವೀರಾಜಪೇಟೆ ತಾಲೂಕು ಡಿ.ಸಿ.ಎಫ್. ಮರಿಯ ಕ್ರಿಷ್ಟಿರಾಜ್ ಅವರ ಗಮನ ಸೆಳೆದಾಗ ಬೀಟಿಕಾಡಿನ ಕಾಫಿ ತೋಟಗಳಲ್ಲಿ ಹುಲಿ ಇರುವ ಬಗ್ಗೆ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಹುಲಿಯ ಚಲನವಲನಗಳನ್ನು ಕಂಡು ಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ತಿಳಿಸಲಾಗಿದ್ದು, ಹುಲಿಯನ್ನು ಅರಣ್ಯಕ್ಕೆ ಅಟ್ಟಿಸಲಾಗುವದೆಂದರು. ಕಳೆದ ಕೆಲವು ದಿನಗಳಿಂದ ಹುಲಿಯು ಯಾವದೇ ಜಾನುವಾರುಗಳ ಮೇಲೆ ಧಾಳಿ ನಡೆಸಿದ ಬಗ್ಗೆ ವರದಿಯಾಗಿಲ್ಲ. ಆದರೂ ಕೂಡ ಬೀಟಿಕಾಡು ಸಮೀಪದ ಕಾಫಿ ತೋಟವೊಂದರಲ್ಲಿ ಮುಂಜಾಗ್ರತೆ ಕ್ರಮವಾಗಿ ಬೋನ್ ಇರಿಸಲಾಗಿದೆ ಎಂದರು. ಹುಲಿಯನ್ನು ಸೆರೆಹಿಡಿಯಲು ಮೇಲಾಧಿಕಾರಿಗಳ ಅನುಮತಿ ಕೋರಲಾಗಿದೆ. ಮುಂದಿನ ದಿನಗಳಲ್ಲಿ ಜಾನುವಾರುಗಳ ಮೇಲೆ ಧಾಳಿ ನಡೆಸಿದಲ್ಲಿ ಹುಲಿಯ ಸೆರೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದರು. ಒಟ್ಟಿನಲ್ಲಿ ಹುಲಿಯು ಗ್ರಾಮದಲ್ಲಿ ಆತಂಕ ಸೃಷ್ಟಿಸಿದ್ದು, ಕಾರ್ಮಿಕರು ಭಯದಲ್ಲೇ ದಿನದೂಡುವಂತಾಗಿದೆ.