ಗೋಣಿಕೊಪ್ಪ ವರದಿ, ಫೆ. 18: ಜಿಲ್ಲೆಯಲ್ಲಿ ಗುಣಮಟ್ಟದ ಕೃಷಿ ಪದ್ದತಿಯೊಂದಿಗೆ ಫಸಲನ್ನು ಉತ್ತಮ ಬೆಲೆಗೆ ಮಾರಟ ಮಾಡುವ ಕಡೆಗೆ ರೈತರು ಗಮನಹರಿಸಬೇಕು ಎಂದು ಪುತ್ತರಿ ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಸುಬ್ರಮಣಿ ಹೇಳಿದರು. ವೀರಾಜಪೇಟೆ ಸಂಬಾರ ಮಂಡಳಿ ಮತ್ತು ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಮಾಡಿಟಿ ಫ್ಯೂಚರ್ ಮಾರ್ಕೆಟ್ ಕಾರ್ಯಾಗಾರ ವನ್ನು ಉದ್ಘಾಟಿಸಿ ಮಾತನಾಡಿದರು. ಬಹುತೇಕ ದೇಶಗಳಲ್ಲಿ ಕಳಪೆ ಗುಣಮಟ್ಟದ ಬೆಳೆಗಳನ್ನು ಬೆಳೆಯಲಾಗುತ್ತಿದೆ ಆದರೆ ಜಿಲ್ಲೆಯಲ್ಲಿ ಗುಣಮಟ್ಟದ ಬೆಳೆಗಳನ್ನು ಬೆಳೆದ ರೈತನಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ರೈತರು ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸೃಷ್ಟಿಸುವ ಬಗ್ಗೆ ಚಿಂತನೆ ನಡೆಸಬೇಕಿದೆ ಮತ್ತು ಬ್ರಾಂಡ್ ಮಾಡಿ ಮಾರುಕಟ್ಟೆಗೆ ಪ್ರವೇಶಿಸಿದರೆ ಉತ್ತಮ ಬೆಲೆ ಸಿಗುತ್ತದೆ ಎಂದು ಹೇಳಿದರು. ಮಲ್ಟಿ ಎಕ್ಸ್‍ಚೇಂಜ್ ಇಂಡಿಯಾ ಪ್ರೈ.ಲಿನ ಸಹಾಯಕ ವ್ಯವಸ್ಥಾಪಕ ಅನೂಪ್ ರಿಜ್‍ವಾನಿ ಕಾರ್ಯಾಗಾರ ದಲ್ಲಿ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸುವ ಬಗ್ಗೆ ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ 50 ಅಧಿಕ ರೈತರು ಭಾಗವಹಿಸಿ ಮಾಹಿತಿ ಯನ್ನು ಪಡೆದರು. ವೀರಾಜಪೇಟೆ ಸಂಬಾರ ಮಂಡಳಿ ಮುಖ್ಯಸ್ಥ ಜೋಜೊ ಮ್ಯಾಥ್ಯು, ಸಿಬ್ಬಂದಿ ವಿವೇಕ್, ವಿಜಯ್ ಕುಮಾರ್ ಉಪಸ್ಥಿತರಿದ್ದರು.