ಕೊಡಗಿನ ಗಡಿಯಿಂದ ತೆರಳಿದ ಹೋರಾಟಗಾರರು
ಗೋಣಿಕೊಪ್ಪಲು : ಕೊಡಗು ರೈಲ್ವೆ ಮಾರ್ಗ ವಿರೋಧಿ ಹೋರಾಟ ವೇದಿಕೆ ರೈಲ್ವೆ ಮಾರ್ಗವನ್ನು ವಿರೋಧಿಸುವ ವಿವಿಧ ಸಂಘ ಸಂಸ್ಥೆಗಳ ಒಕ್ಕೂಟವು ಮೈಸೂರಿನ ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಆಯೋಜನೆಗೊಂಡಿದ್ದ ಸಮಾವೇಶ, ಪ್ರತಿಭಟನೆಗೆ ದಕ್ಷಿಣ ಕೊಡಗಿನ ಹೋರಾಟಗಾರರು ತಿತಿಮತಿ ಆನೆಚೌಕೂರು ಭಾಗದಿಂದ ಕರ್ನಾಟಕ ಸಾರಿಗೆ, ಖಾಸಗಿ ಬಸ್, ಟೆಂಪೋ ಟ್ರಾವೆಲರ್ ಜೀಪ್ ಹಾಗೂ ಕಾರುಗಳಲ್ಲಿ ಪ್ರತಿಭಟನಾಕಾರರು ತೆರಳಿದರು.
ಬೆಳಿಗ್ಗೆ 8 ಗಂಟೆಯಿಂದಲ್ಲೇ ಆನೆಚೌಕೂರು ಗೇಟ್ ಬಳಿ ಜಮಾವಣೆಗೊಂಡ ವಾಹನಗಳು ಒಂದರ ಹಿಂದೆ ಒಂದರಂತೆ ಸರತಿ ಸಾಲಿನಲ್ಲಿ ಸಾಗಿದವು. 15 ಖಾಸಗಿ ಬಸ್ಗಳು, 8 ಸರ್ಕಾರಿ ಬಸ್ಗಳು 3 ಮ್ಯಾಕ್ಸಿ ಕ್ಯಾಬ್, 2 ಜೀಪು ಹಾಗೂ 40 ಕಾರುಗಳಲ್ಲಿ ಪ್ರತಿಭಟನಕಾರರು ತೆರಳಿದರು. ಗಡಿ ಭಾಗ ಕುಟ್ಟ, ಮಂಚಳ್ಳಿ ಭಾಗದಿಂದ ಖಾಸಗಿ ಬಸ್ಸಿನಲ್ಲಿ 11 ಮಂದಿ ಪ್ರಯಾಣ ಬೆಳಸಿದರೆ, ಹಳ್ಳಿಗಟ್ಟು ಸೀತಾ ಕಾಲೋನಿಯ 41 ಮಂದಿ ಗಿರಿಜನರು ಸರ್ಕಾರಿ ಬಸ್ಸಿನಲ್ಲಿ ಪ್ರಯಾಣ ಬೆಳಸಿದರು. ಪ್ರತಿ ಬಸ್ಸಿನಲ್ಲಿ ಸರಾಸರಿ 22 ರಂತೆ ಹಾಗೂ ಉಳಿದ ವಾಹನದಲ್ಲಿ ನೂರಾರು ಮಂದಿ ದಕ್ಷಿಣ ಕೊಡಗಿನ ಮೂಲಕ ಪ್ರತಿಭಟನೆಗೆ ತೆರಳಿದ್ದಾರೆ ಎಂದು ಸ್ಥಳದಲ್ಲಿದ್ದ ವೃತ್ತ ನಿರೀಕ್ಷಕ ದಿವಾಕರ್ ಮಾಧ್ಯಮಕ್ಕೆ ಮಾಹಿತಿ ನೀಡಿದರು.
ಗಡಿ ಭಾಗದಿಂದ ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ, ಹೋರಾಟ ಸಮಿತಿಯ ಪ್ರಮುಖರಾದ ಮಾಚಿಮಾಡ ರವೀಂದ್ರ, ರಾಜೀವ್ ಬೋಪಯ್ಯ ವಿವಿಧ ಭಾಗದಿಂದ ಆಗಮಿಸಿದ್ದ ಟಿಶೆಟ್ಟಿಗೇರಿಯ ಮಾಣೀರ ವಿಜಯ್ ನಂಜಪ್ಪ, ಬಾಳೆಲೆಯ ಅಳಮೇಂಗಡ ಬೋಸ್, ಹಿಂದೂ ಮಲೆಯಾಳಿ ಸಮಾಜದ ಅಧ್ಯಕ್ಷ ಶರತ್ ಕಾಂತ್, ಪೊನ್ನಂಪೇಟೆ ಗ್ರಾ.ಪಂ. ಸದಸ್ಯ ಅಡ್ಡಂಡ ಸುನಿಲ್ ಮತ್ತಿತ್ತರ ಪ್ರಮುಖರು ಪ್ರಯಾಣ ಬೆಳಸಿದರು. ಕುಟ್ಟ, ಬಲ್ಯಮಂಡೂರು, ಪೊನ್ನಂಪೇಟೆ, ಹಳ್ಳಿಗಟ್ಟು, ಕಾನೂರು, ಮೂರ್ನಾಡು, ಬಿರುನಾಣಿ, ಬಾಳೆಲೆ, ನಾಲ್ಕೇರಿ, ಕೊಟ್ಟಗೇರಿ, ತಿತಿಮತಿ, ಶ್ರೀಮಂಗಲ, ಗೋಣಿಕೊಪ್ಪ, ವೀರಾಜಪೇಟೆ ಭಾಗಗಳಿಂದ ವಾಹನಗಳಲ್ಲಿ ತೆರಳಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಜೊತೆಗೆ ಮಹಿಳೆಯರು, ಪುಟಾಣಿಗಳು, ವೃದ್ದರು ತೆರಳಿರುವುದು ವಿಶೇಷವಾಗಿತ್ತು. ಪ್ರತಿ ವಾಹನಗಳ ಮುಂಬಾಗ ಕಪ್ಪು ಭಾವುಟ ಅಳವಡಿಸಲಾಗಿತ್ತು. ವೃತ್ತ ನಿರೀಕ್ಷಕ ರಾಜು, ಎಎಸ್ಐ ಗಣಪತಿ, ಸಿಬ್ಬಂದಿಗಳಾದ ಸುಬ್ರಮಣಿ, ಪ್ರಮೋದ್, ಸುಗಂಧ ಮತ್ತಿತರÀರು ಬಂದೋಬಸ್ತ್ನಲ್ಲಿ ಪಾಲ್ಗೊಂಡಿದ್ದರು. ಶಿಸ್ತುಬದ್ಧವಾಗಿ, ಶಾಂತಿಯುತವಾಗಿ ನಡೆದು ಸಾಂಸ್ಕøತಿಕ ನಗರಿಯ ಜನತೆಗೆ ಅಚ್ಚರಿ ಮೂಡಿಸಿತು. ಪ್ರತಿಭಟನಾ ಕಾರರು ಮೈಸೂರಿನ ಪ್ರಮುಖ ಬೀದಿಗಳಲ್ಲಿ ಘೋಷಣೆ ಗಳೊಂದಿಗೆ ತೆರಳಿದ ಸಂದರ್ಭ ಬೆರಳೆಣಿಕೆಯ ಪೊಲೀಸ್ ಮಾತ್ರ ಕಂಡು ಬಂದಿದ್ದು ವಿಶೇಷವಾಗಿತ್ತು. ನೂರಾರು ಸ್ವಯಂಸೇವಕರು ರ್ಯಾಲಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಸಫಲರಾಗಿದ್ದು ಇದಕ್ಕೆ ಕಾರಣ ಎನ್ನಬಹುದು. ಬಸ್ಗಳು ಹಾಗೂ ಅಧಿಕ ಖಾಸಗಿ ವಾಹನಗಳು ವಸ್ತು ಪ್ರದರ್ಶನ ಮೈದಾನದ ಸುತ್ತಮುತ್ತ ನಿಲುಗಡೆಗೊಂಡಿದ್ದವು. ಮೆರವಣಿಗೆ ಯಲ್ಲಿ ಪುಟ್ಟ ಮಕ್ಕಳಿಂದ ಹಿಡಿದು 90 ರ ತನಕದ ಹಿರಿಯ ಕಿರಿಯ ಜೀವಗಳು ಪಾಲ್ಗೊಂಡಿದ್ದು, ಹೋರಾಟದ ಕಿಚ್ಚಿಗೆ ಇನ್ನೂ ಮೆರುಗು ತಂದಿತ್ತು. ಮೈಸೂರು ಕೊಡವ ಸಮಾಜದ ಅಚ್ಚುಕಟ್ಟಾದ ವ್ಯವಸ್ಥೆ ಬೆಂಗಳೂರು, ಮೈಸೂರು, ಮಂಡ್ಯ, ಕೊಡಗು ಸೇರಿದಂತೆ ವಿವಿಧೆಡೆಯ ಯುವಕ, ಯುವತಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕಪ್ಪು ಬಟ್ಟೆ, ಪಟ್ಟಿ ಧರಿಸುವುದರೊಂದಿಗೆ ಘೋಷಣಾ ಫಲಕಗಳನ್ನು ಹಿಡಿದು ಮೆರವಣಿಗೆ ನಡೆಸಿದ್ದು ಎದ್ದು ಕಾಣುತ್ತಿತ್ತು. ಸ್ಥಳೀಯ ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ರೈಲ್ವೇ ಮಾರ್ಗ ವಿರೋಧಿ ಹೋರಾಟ ವೇದಿಕೆಯ ಪ್ರಮುಖರಾದ ಕರ್ನಲ್ ಮುತ್ತಣ್ಣ, ಚೆಪ್ಪುಡಿರ ಶರಿ ಸುಬ್ಬಯ್ಯ, ಜಮ್ಮಡ ಗಣೇಶ್ ಅಯ್ಯಣ್ಣ, ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಹಾಗೂ ಜಿಲ್ಲೆಯ ವಿವಿಧೆಡೆಯಿಂದ ವಿಶೇಷ ಬಸ್ ವ್ಯವಸ್ತೆ ಮಾಡುವ ನಿಟ್ಟಿನಲ್ಲಿ ಸಂಘಟಕರಾದ ಮಾಚಿಮಾಡ ರವೀಂದ್ರ, ಮಲ್ಲಮಾಡ ಪ್ರಭು ಪೂಣಚ್ಚ, ರಾಜೀವ ಬೋಪಯ್ಯ ಮತ್ತು ಕೊಡವ ಸಮಾಜದ ಪ್ರಮುಖರು ಸಾವಿರಾರು ಮಂದಿ ಯನ್ನು ಮೈಸೂರಿಗೆ ಕರೆದೊಯ್ಯುವಲ್ಲಿ ಹಾಗೂ ಬೆಂಗಳೂರು ಕಡೆಯಿಂದ ಕರೆತಂದು ಒಂದೆಡೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಗರದ ನೂರಾರು ಯುವಕರ ತಂಡ ಮೆರವಣಿಗೆ ಸಂದರ್ಭ ತಮ್ಮ ಬೈಕ್ಗಳಲ್ಲಿ ಜಾಥಾ ನಡೆಸಿದ್ದು ಕಂಡುಬಂತು. ಸಭಾಂಗಣದ ಆವರಣದಲ್ಲಿ ಸಹಿ ಫಲಕ ಅಳವಡಿಸುವದರೊಂದಿಗೆ ಸಹಸ್ರಾರು ಮಂದಿ ತಮ್ಮ ಸಹಿಯನ್ನು ಹಾಕಲು 4 ಫಲಕಗಳನ್ನು ಅಳವಡಿಸಿದ್ದರು. ಕೊಡಗು ಜಿಲ್ಲೆಯ ಕುಶಾಲನಗರ, ಮಡಿಕೇರಿ, ಗೋಣಿಕೊಪ್ಪ, ವೀರಾಜಪೇಟೆ, ಪೊನ್ನಂಪೇಟೆ, ಕುಟ್ಟ ಸೇರಿದಂತೆ ಎಲ್ಲೆಡೆಗಳಿಂದ ಮಹಿಳೆಯರು ಹಾಗೂ ಪುರುಷರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕೊಡಗು ಜಿಲ್ಲೆಯ ಪರಿಸರ ಹಾಗೂ ಜೀವನದಿಯನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲೆಡೆಗಳಿಂದ ಸೇರಿದಂತೆ ದೇಶ ವಿದೇಶಗಳಿಂದ ಕಾರ್ಯಕ್ರಮದ ಯಶಸ್ಸಿಗೆ ಹಾರೈಕೆಗಳು ಬಂದಿದ್ದವು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಊಟದ ವ್ಯವಸ್ತೆ ಕಲ್ಪಿಸಲಾಗಿತ್ತು. ಒಟ್ಟಾರೆ ಕೊಡಗಿನ ಜನತೆಯ ಸಂದೇಶ ಸರಕಾರಕ್ಕೆ ತಲುಪಿಸುವಲ್ಲಿ ಕೊಡಗು ರೈಲ್ವೇ ವಿರೋಧಿ ಹೋರಾಟ ಸಮಿತಿಯ ಸಂಘಟಕರು ಪರಿಶ್ರಮಪಟ್ಟಿದ್ದು ಎಂದು ಪ್ರತಿಭಟನಾ ರೂಪದಲ್ಲಿ ಪೂರ್ಣಗೊಂಡಿತ್ತು.
- ವರದಿ: ಎಂ.ಎನ್. ಚಂದ್ರಮೋಹನ್, ಹರೀಶ್ ಮಾದಪ್ಪ