ಸೋಮವಾರಪೇಟೆ,ಫೆ.18: ತಾಲೂಕಿನ ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ, ಪ್ರವಾಸೋದ್ಯಮ ಇಲಾಖೆಗೆ ಒಳಪಟ್ಟ ಪ್ರವಾಸಿ ತಾಣ ಮಕ್ಕಳಗುಡಿ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡು ಸುಮಾರು 7 ಎಕರೆ ಪ್ರದೇಶ ಸುಟ್ಟುಹೋಗಿದೆ.

10 ಎಕರೆ ಪ್ರದೇಶವನ್ನು ಒಳಗೊಂಡಿರುವ ಮಕ್ಕಳಗುಡಿ ಬೆಟ್ಟ ಪ್ರವಾಸಿತಾಣವಾಗಿ ಗುರುತಿಸಿ ಕೊಂಡಿದ್ದು, ದಿನನಿತ್ಯ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಇಂದು ಸಂಜೆ 4 ಗಂಟೆ ವೇಳೆಗೆ ಈ ಭಾಗದಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು, ಗಾಳಿಯ ರಭಸಕ್ಕೆ ಕೆಲವೇ ಗಂಟೆಗಳಲ್ಲಿ 7 ಎಕರೆ ಪ್ರದೇಶ ಅಗ್ನಿಗಾಹುತಿಯಾಗಿದೆ.

ಬೆಟ್ಟಕ್ಕೆ ಹೊಂದಿಕೊಂಡಂತೆ ಇರುವ ರೋಷನ್ ಪೂವಯ್ಯ, ಮೋಹನ್ ಅವರುಗಳ ಕಾಫಿ ತೋಟಕ್ಕೂ ಬೆಂಕಿ ಆವರಿಸಿದ್ದು, ಸ್ಥಳೀಯರು ತಕ್ಷಣ ಬೆಂಕಿ ನಂದಿಸಿದ್ದಾರೆ. ವಿಷಯ ತಿಳಿದ ಸೋಮವಾರಪೇಟೆ ಅಗ್ನಿಶಾಮಕ ಠಾಣಾಧಿಕಾರಿ ಎನ್.ಎ. ಲವ, ನಾಗೇಶ್ ಸೇರಿದಂತೆ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಬೆಂಕಿ ಇನ್ನೂ ಹೆಚ್ಚಿನ ಪ್ರದೇಶಕ್ಕೆ ಹಬ್ಬುವದನ್ನು ತಡೆದಿದ್ದು, ಬೆಟ್ಟ ಪ್ರದೇಶದಲ್ಲಿನ ಬೆಂಕಿಯನ್ನು ನಂದಿಸಿದ್ದಾರೆ.