ಮಡಿಕೇರಿ, ಫೆ. 18: ಕಳೆದ 2 ದಶಕಗಳಿಂದ ಕೊಡಗು ಜಿಲ್ಲೆಯ ನಾಗರಹೊಳೆಯಿಂದ ಮೈಸೂರು ಜಿಲ್ಲೆಯ ನಾಗಾಪುರಕ್ಕೆ ಸ್ಥಳಾಂತರಗೊಂಡ ಆದಿವಾಸಿಗಳಿಗೆ ಅರಣ್ಯ ಇಲಾಖೆಯಿಂದ ವಂಚನೆಯಾಗಿದೆ ಎಂದು ಆರೋಪಿಸಿರುವ ನಾಗಾಪುರ ಪುನರ್ವಸತಿ ಕೇಂದ್ರದ ವಿವಿಧ ಘಟಕಗಳ ಪ್ರಮುಖರು ರಾಜ್ಯ ಸರ್ಕಾರದ ಅನ್ಯಾಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯಲು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಆದಿವಾಸಿಗಳು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಲು ತಯಾರಿಸಿರುವ ವರದಿಯನ್ನು ನಗರದ ಪತ್ರಿಕಾ ಭವನದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಆದಿವಾಸಿ ವ್ಯವಸಾಯ ಆಂದೋಲನದ ಸಂಚಾಲಕ ಎಂ.ಬಿ. ಪ್ರಭು ಪುನರ್ವಸತಿ ಕೇಂದ್ರದ ನಿವಾಸಿಗಳ ಸಂಕಷ್ಟದ ಬದುಕಿನ ಬಗ್ಗೆ ವಿವರಿಸಿದರು.

1997 ಸೆ. 9 ರಂದು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯ ಮುಖ್ಯಸ್ಥರು, ಅರಣ್ಯ ಸಚಿವರು ಮತ್ತು ನಾಗರಹೊಳೆಯ ಆದಿವಾಸಿ ಮುಖಂಡರು ಬೆಂಗಳೂರಿನ ಅರಣ್ಯ ಭವನದಲ್ಲಿ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಪ್ಯಾಕೇಜ್ ಬಗ್ಗೆ ಚರ್ಚಿಸಿ ಪ್ರತಿ ಕುಟುಂಬಕ್ಕೆ 5 ಎಕರೆ ಕೃಷಿ ಭೂಮಿ, ಉರುವಲು ಸೌದೆ ಸಂಗ್ರಹವನ, ದನಕರುಗಳು ಮೇಯಲು ಹುಲ್ಲುಗಾವಲು, ವಾಸದ ಮನೆ, ಕುಡಿಯುವ ನೀರು, ಶೈಕ್ಷಣಿಕ ಸೌಲಭ್ಯ, ವಿದ್ಯುತ್ ಸಂಪರ್ಕ ಮತ್ತು ಮೂರು ವರ್ಷಗಳ ಕಾಲ ಕೃಷಿ ಚಟುವಟಿಕೆಗಳಿಗೆ ತರಬೇತಿ ಮತ್ತು ಪ್ರೋತ್ಸಾಹ ನೀಡಲು ಹಾಗೂ ಅರ್ಹ ವಿದ್ಯಾವಂತರಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಒದಗಿಸುವ ಭರವಸೆಯನ್ನು ನೀಡಲಾಯಿತು. ಇದೇ ಕಾರಣಕ್ಕೆ 250 ಕುಟುಂಬಗಳು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಪ್ರದೇಶಕ್ಕೆ ಸ್ಥಳಾಂತರಗೊಂಡರು.

ಭಾರತ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮೂಲಕ ರಾಜೀವ್‍ಗಾಂಧಿ ರಾಷ್ಟ್ರೀಯ ಉದ್ಯಾನವನದ ಆದಿವಾಸಿಗಳ ಪುನರ್ವಸತಿ ಯೋಜನೆಯನ್ನು 300 ಕೋಟಿಗೂ ಅಧಿಕ ಹಣ ಖರ್ಚು ಮಾಡಿ 1931 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ನಾಗಾಪುರ, ಸೊಳ್ಳೆಪುರ, ಶೆಟ್ಟಹಳ್ಳಿ, ಹೆಬ್ಬಾಳ ಮತ್ತು ಮಾಸ್ತಿಗುಡಿ ಪುನರ್ವಸತಿ ಕೇಂದ್ರಗಳನ್ನು ರಾಜ್ಯ ಸರ್ಕಾರದ ಅರಣ್ಯ ಇಲಾಖೆ ಹುಣಸೂರಿನ ವನ್ಯಜೀವಿ ವಿಭಾಗದ ಮೂಲಕ ಅನುಷ್ಠಾನಗೊಳಿಸಲಾಯಿತು.

ಆದರೆ ಆದಿವಾಸಿ ಪುನರ್ವಸತಿಗೆಂದು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ ಬಹುತೇಕ ಅರಣ್ಯ ಪ್ರದೇಶ ಅರಣ್ಯಾಧಿಕಾರಿಗಳ ಕರ್ತವ್ಯ ಲೋಪದಿಂದಾಗಿ ಅನ್ಯರ ಪಾಲಾಗಿದೆ ಎಂದು ಪ್ರಭು ಆರೋಪಿಸಿದರು.

ಭೂಮಿ ಮತ್ತು ಬದುಕುವ ಹಕ್ಕನ್ನು ನೀಡಿ ರಾಷ್ಟ್ರೀಯ ಮುಖ್ಯವಾಹಿನಿಗೆ ಕರೆ ತರಬೇಕಾದ ರಾಜ್ಯ ಸರ್ಕಾರ ಸುಳ್ಳು ನೆಪ ಹೇಳಿ ಕಾಲಹರಣ ಮಾಡಿ ಆದಿವಾಸಿಗಳಿಗೆ ಬದುಕುವ ಭರವಸೆಗಳ ಬಾಗಿಲನ್ನು ಶಾಶ್ವತವಾಗಿ ಮುಚ್ಚುತ್ತಿದೆ. ಇದನ್ನು ಖಂಡಿಸಿ ರಾಜೀವ್‍ಗಾಂಧಿ ರಾಷ್ಟ್ರೀಯ ಉದ್ಯಾನವನದ ಆದಿವಾಸಿಗಳು ಜ.26 ರಿಂದ ನಿರಂತರವಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಮಹಿಳೆಯರು, ಮಕ್ಕಳು ಹಾಗೂ ಕುಟುಂಬದ ಮುಖ್ಯಸ್ಥರು ಪುನರ್ವಸತಿ ಕೇಂದ್ರದಲ್ಲಿ ಅಹೋರಾತ್ರಿ ಸತ್ಯಾಗ್ರಹ ಮುಂದುವರೆಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಡಳಿತದ ಪ್ರಮುಖರಿಗೆ ಮನವಿ ಸಲ್ಲಿಸಲಾಗಿದೆ ಎಂದು ಪ್ರಭು ತಿಳಿಸಿದರು.

ರಾಜ್ಯ ಸರಕಾರ ವಿಳಂಬ ಧೋರಣೆ ತೋರುತ್ತಿರುವದರಿಂದ ಮತ್ತು ಪುನರ್ ವಸತಿ ಕೇಂದ್ರದ ಪರಿಕಲ್ಪನೆ ವಿಫಲವಾಗಿರುವ ಕಾರಣ ಮನವಿ ಪತ್ರವನ್ನು ಪ್ರಧಾನಿಗಳಿಗೆ ಸಲ್ಲಿಸಲು ನಿರ್ಧರಿಸಿರುವದಾಗಿ ಹೇಳಿದರು.

ಗೋಷ್ಠಿಯಲ್ಲಿ ನಾಗಾಪುರ ಪುನರ್ವಸತಿ ಕೇಂದ್ರ ಘಟಕÀ-1ರ ಅಧ್ಯಕ್ಷ ಬಿ.ಕೆ. ಸೋಮ, ಘಟಕÀ-2ರ ಅಧ್ಯಕ್ಷ ಜೆ.ಕೆ. ತಿಮ್ಮಯ್ಯ, ಘಟಕ-3ರ ಅಧ್ಯಕ್ಷ ಜೆ.ಎ. ಹರೀಶ್, ಘಟಕ-4ರ ಅಧ್ಯಕ್ಷ ಜೆ.ಎ. ಸಣ್ಣಪ್ಪ ಹಾಗೂ ಜೆ.ಕೆ. ಮಣಿ ಉಪಸ್ಥಿತರಿದ್ದರು.