ವೀರಾಜಪೇಟೆ, ಫೆ.18: ನಿವೇಶನ ರಹಿತರಿಗೆ, ನಿರ್ಗತಿಕರಿಗೆ, ಬಡವರಿಗೆ ಕಾಂಗ್ರೆಸ್ ಸರಕಾರ ಪ್ರಥಮ ಹಾಗೂ ಮೊದಲ ಆದ್ಯತೆ ನೀಡಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸುತ್ತಿದೆ. ಫಲಾನುಭವಿಗಳು ಹಕ್ಕು ಪತ್ರವನ್ನು ದುರುಪಯೋಗ ಪಡಿಸದೆ ಮನೆ ಕಟ್ಟಿಕೊಳ್ಳಬೇಕು. ಕಾಂಗ್ರೆಸ್ ಸರಕಾರ ಪ್ರತಿಯೊಬ್ಬರಿಗೆ ಸೂರು ಯೋಜನೆಯಲ್ಲಿ ಹಕ್ಕು ಪತ್ರ ವಿತರಣೆ ಮಾಡಲಾಗುತ್ತಿದ್ದು ಇದು ಮುಂದುವರೆಯುವದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತರಾಂ ಹೇಳಿದರು.

(ಮೊದಲ ಪುಟದಿಂದ)ಇಲ್ಲಿ ನೂತನ ಮಿನಿ ವಿಧಾನ ಸೌಧ ಉದ್ಘಾಟಿಸಿ ಮಾತನಾಡಿದ ಅವರು, ಕೊಡಗಿನ ಅಭಿವೃದ್ಧಿಗಾಗಿ ಕಾಂಗ್ರೆಸ್ ಸರಕಾರ ವಿಶೇಷ ಕಾಳಜಿ ಹೊಂದಿದ್ದು ಮೂರು ವರ್ಷಗಳ ಅವಧಿಯಲ್ಲಿ ರೂ. 300 ಕೋಟಿ ಹಾಗೂ ವಿಶೇಷ ಪ್ಯಾಕೇಜ್‍ನಡಿಯಲ್ಲಿ ರೂ 100 ಕೋಟಿ ನೀಡಿದೆ. ಕೊಡಗಿಗೆ ಉಸ್ತುವಾರಿಯಾಗಿ ಬರುವ ಮೊದಲು ಕೊಡಗಿನಲ್ಲಿ ಅಭಿವೃದ್ಧಿ ಕಾಮಗಾರಿ ಎಲ್ಲ ರೀತಿಯಿಂದಲೂ ಕುಂಠಿತಗೊಂಡಿದ್ದು, ಈಗ ಎರಡು ವರ್ಷಗಳಿಂದ ಅಭಿವೃದ್ಧಿ ಕಾಮಗಾರಿ ನಿರಂತರವಾಗಿ ಸಾಗುತ್ತಿದೆ. ಅಭಿವೃದ್ದಿ ಕಾಮಗಾರಿಗಳಿಗೆ ಜನ ಪ್ರತಿನಿಧಿಗಳು ಕೈ ಜೋಡಿಸಬೇಕು ಎಂದರು.

ಸೂರು ಯೋಜನೆಯಲ್ಲಿ ಪಕ್ಷ ಹಾಗೂ ಸರಕಾರ ಫಲಪ್ರದವಾಗಿದೆ. ವೀರಾಜಪೇಟೆ ತಾಲೂಕಿನಲ್ಲಿ ನಿವೇಶನ ಕೋರಿ ಒಟ್ಟು 3900 ಅರ್ಜಿಗಳು ಬಂದಿದ್ದು ಈ ಪೈಕಿ 2459 ಅರ್ಜಿಗಳು ಸ್ವೀಕೃತವಾಗಿದ್ದು ಈ ತನಕ 2350 ನಿವೇಶನ ರಹಿತರಿಗೆ ಹಕ್ಕು ಪತ್ರ ನೀಡಲಾಗಿದ್ದು, ಹಕ್ಕು ಪತ್ರ ವಿತರಣೆ ಮುಂದುವರೆಯಲಿದೆ, ಜಿಲ್ಲೆಯಾದ್ಯಂತ ಎಲ್ಲ ನಿವೇಶನ ರಹಿತರಿಗೆ ಹಕ್ಕು ಪತ್ರ ನೀಡಲಾಗಿದೆ. ಈ ಹಿಂದಿನ ಸರಕಾರಕ್ಕೆ ನೀಡುವ ಅವಕಾಶಗಳಿದ್ದರೂ ಹಕ್ಕು ಪತ್ರ ನೀಡಲಿಲ್ಲ ಈಗ ಕಾಂಗ್ರೆಸ್ ಸರಕಾರ ಈ ಯೋಜನೆಯನ್ನು ತ್ವರಿತಗತಿಯಿಂದ ಮುಂದುವರೆಸಿದೆ ಎಂದರು.

ವೇದಿಕೆಯಲ್ಲಿ ಅರಣ್ಯ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಮಿಟ್ಟು ಚಂಗಪ್ಪ, ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ, ಕೊಡವ ಅಕಾಡೆಮಿಯ ಅಧ್ಯಕ್ಷ ಪಿ.ಕೆ.ಪೊನ್ನಪ್ಪ, ಜಿಲ್ಲಾಧಿಕಾರಿ ಶ್ರೀವಿದ್ಯಾ, ತಹಸಿಲ್ದಾರ್ ಆರ್.ಗೋವಿಂದರಾಜು, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಎಸ್.ಎಂ.ಪ್ರಭು, ಸಹಾಯಕ ಎಂ.ಇ.ಸುರೇಶ್, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ, ಶ್ರೀಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿ.ಕಲ್ಪನಾ ತಿಮ್ಮಯ್ಯ, ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ನಾಮಕರಣ ಸದಸ್ಯರುಗಳಾದ ಮಹಮ್ಮದ್ ರಾಫಿ, ಪಿ.ರಂಜಿ ಪೂಣಚ್ಚ, ಡಿ.ಪಿ ರಾಜೇಶ್, ಮಾಜಿ ಅಧ್ಯಕ್ಷ ವಿ.ಕೆ.ಸತೀಶ್ ಕುಮಾರ್, ತಾಲೂಕು ಪಂಚಾಯಿತಿ ಸದಸ್ಯ ಮಾಳೇಟಿರ ಪ್ರಶಾಂತ್, ಉಸ್ತುವಾರಿ ಆಪ್ತ ಹರೀಶ್ ಬೋಪಣ್ಣ ಮತ್ತಿತರರು ಹಾಜರಿದ್ದರು.

ಮಿನಿವಿಧಾನಸೌಧಕ್ಕೆ ಆಗಮಿಸಿದ ಸಚಿವರನ್ನು ಕೊಡಗಿನ ಸಾಂಪ್ರದಾಯಿಕ ಬೊಳಕಾಟ್ ಹಾಗೂ ಕೋಲಾಟದ ಮೂಲಕ ಸ್ವಾಗತಿಸಲಾಯಿತು. ಇದೇ ಸಮಾರಂಭದಲ್ಲಿ 121 ಫಲಾನುಭವಿಗಳಿಗೆ ಹಕ್ಕು ಪತ್ರಗಳÀನ್ನು ವಿತರಿಸಲಾಯಿತು.

ವಿ.ಎ. ರಿಯಾಜ್ ರಿಯಾಜ್ ಸ್ವಾಗತಿಸಿ, ತಹಶೀಲ್ದಾರ್ ಗೋವಿಂದ ರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಜಾಲ್ರ್ಸ್ ಡಿಸೋಜ ನಿರೂಪಿಸಿ, ಕಂದಾಯ ಪರಿವೀಕ್ಷಕ ಕೃಷ್ಣ ವಂದಿಸಿದರು.