ನಿರ್ಣಯಗಳು

ಕೊಡಗು ರೈಲ್ವೇ ವಿರೋಧಿ ಹೋರಾಟ ಸಮಿತಿಯಡಿಯಲ್ಲಿ ಮೈಸೂರಿನಲ್ಲಿ ನಡೆದ ಸಮಾವೇಶದಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಕೊಡಗು ಜಿಲ್ಲೆ ಕೋಟಿಗಟ್ಟಲೆ ಜನರ ಬದುಕಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿರುವ ಕೊಡಗು ಜಿಲ್ಲೆಯ ಬಗ್ಗೆ ಸರಕಾರಗಳು ಒತ್ತು ಕೊಡಬೇಕಾಗಿದೆ. ಭಾರತದ ಸಂವಿಧಾನ ಹಾಗೂ ಕಾನೂನಾತ್ಮಕವಾಗಿ ಕೊಡಗು ಜಿಲ್ಲೆಯನ್ನು ಉಳಿಸುವ ನಿಟ್ಟಿನಲ್ಲಿ ಕೊಡಗಿನ ಜನತೆ ಒಗ್ಗಟ್ಟು ಪ್ರದರ್ಶನ ಮಾಡುವುದು, ಜೀವನದಿ ಕಾವೇರಿ ಹಾಗೂ ಕೊಡಗು ಜಿಲ್ಲೆಗೆ ಮಾರಕವಾಗುವ ಯೋಜನೆಗಳ ವಿರುದ್ಧ ಮತ್ತು ರೈಲ್ವೆ ಮಾರ್ಗ, ಬಹುಪಥ ರಸ್ತೆ ನಿರ್ಮಾಣ ಕಾರ್ಯವನ್ನು ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಲಾಗುವುದು, ಜಿಲ್ಲೆಯ ವಿಶೇಷತೆಯನ್ನು ಪರಿಗಣಿಸಿ ಕೊಡಗು ಮೂಲಕ ಹಾದುಹೋಗಲಿರುವ ರೈಲು ಮಾರ್ಗ ಹಾಗೂ ಹೆದ್ದಾರಿ ರಸ್ತೆ ಯೋಜನೆಗಳನ್ನು ತಡೆ ಹಿಡಿಯುವಂತೆ ಪ್ರಧಾನ ಮಂತ್ರಿ ಮತ್ತು ರಾಜ್ಯದ ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡುವುದು, ಕೊಡಗಿನಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಭೂಪರಿವರ್ತನೆ ಮಾಡುವದಕ್ಕೆ ಕಡಿವಾಣ ಹಾಕುವದು, ಪರಿಸರ ಸ್ನೇಹಿ ಯೋಜನೆ ರೂಪಿಸುವುದು ಸೇರಿದಂತೆ ಸಂರಕ್ಷಣೆಗೆ ಕೈಜೋಡಿಸುವದು ಸೇರಿದಂತೆ 5 ನಿರ್ಣಯಗಳನ್ನು ಕೈಗೊಳ್ಳಲಾಯಿತು.ಕೊಡಗಿಗೆ ಯಾವದೇ ಸಂದರ್ಭ ರೈಲ್ವೇ ಯೋಜನೆ ಅವಶ್ಯಕತೆಯಿಲ್ಲ. ರಾಜ್ಯ ಸರಕಾರದಿಂದ ಯೋಜನೆ ರದ್ದುಪಡಿಸಲು ಕ್ರಮಕೈಗೊಳ್ಳಬೇಕು. ರೈಲ್ವೇಯಿಂದ ಜಿಲ್ಲೆಗಾಗಲಿ ನೆರೆಯ ಗ್ರಾಮಗಳಿಗಾಗಲಿ ಯಾವದೇ ರೀತಿಯ ಪ್ರಯೋಜವಿಲ್ಲ ಹೋರಾಟ ಮುಂದುವರೆಸಿ ಬೆಂಗಳೂರಿನಿಂದ ಮಡಿಕೇರಿ ತನಕ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಬೇಕಿದೆ. ಈ ಮೂಲಕ ಪ್ರತಿ ಮನೆಗಳಿಗೆ ಮಾಹಿತಿ ಒದಗಿಸಬೇಕಾಗಿದೆ ಎಂದರು.

ಆತಂಕದ ದಿನಗಳಿವೆ : ಚಂದ್ರಮೋಹನ್

ಕಾವೇರಿ ನದಿ ಸ್ವಚ್ಚತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್.ಚಂದ್ರಮೋಹನ್ ಮಾತನಾಡಿ, ಕಾವೇರಿ ನದಿ ಸಂರಕ್ಷಣೆಗೆ ಮುಂದಾಗದಿದ್ದಲ್ಲಿ ಆತಂಕದ ದಿನಗಳು ಎದುರಾಗಲಿವೆ. ಪ್ರಸಕ್ತ ನಡೆದ ಹೋರಾಟದ ಮೂಲಕ ಸರಕಾರಗಳಿಗೆ ಸ್ಪಷ್ಟ ಸಂದೇಶ ನೀಡುವಲ್ಲಿ ಯಶಸ್ವಿಯಾಗಿದ್ದು ಪರಿಸರ ಮಾರಕ ಯೋಜನೆಗಳ ಬಗ್ಗೆ ಸರಕಾರಗಳು ಎಚ್ಚರವಹಿಸಬೇಕಾಗಿದೆ ಎಂದರು.

ಈ ಸಂದರ್ಭ ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಮಾತನಾಡಿ, ಜಿಲ್ಲೆಯ ಹೋರಾಟಗಳಿಗೆ ತಮ್ಮ ಎಲ್ಲಾ ರೀತಿಯ ಬೆಂಬಲ ವ್ಯಕ್ತಪಡಿಸಿದರು.

ಅಖಿಲ ಭಾರತ ಸಾಧುಸಂತರ ಸಂಘದ ತಮಿಳುನಾಡು ಪ್ರತಿನಿಧಿ ಶ್ರೀ ಯುಕ್ತಾನಂದ ಸ್ವಾಮೀಜಿ ಮಾತನಾಡಿ, ಕೊಡಗು ಜಿಲ್ಲೆಗೆ ಸಮಸ್ಯೆ ಉಂಟಾದಲ್ಲಿ ಆ ಮೂಲಕ ತಮಿಳುನಾಡು ರಾಜ್ಯಕ್ಕೂ ಕಂಟಕ ಎದುರಾಗುತ್ತದೆ. ಈ ಬಗ್ಗೆ ತಮ್ಮ ಸಂಘದ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸುವದರೊಂದಿಗೆ ಕೊಡಗು ಜಿಲ್ಲೆಯ ಹೋರಾಟಕ್ಕೆ ಬೆಂಬಲ ಘೋಷಿಸಿದರು.

ಕೇರಳದ ವಯನಾಡಿನ ಪರಿಸರವಾದಿ ಮೀರಾ ರಾಜೇಶ್, ಮೈಸೂರು ಕೊಡವ ಸಮಾಜದ ಹಿರಿಯರಾದ ಇಟ್ಟಿರ ಡಾಟಿ, ಲೌವ್ಲಿ ಪೊಂಜಂಡ, ಪ್ರಮುಖರಾದ ಎಂ.ಎಂ.ರವೀಂದ್ರ ಮಾತನಾಡಿದರು.

ಇದೇ ಸಂದರ್ಭ ಬುಡಕಟ್ಟು ಕೃಷಿಕರ ಸಂಘದ ಸದಸ್ಯರಿಂದ ದುಡಿಕೊಟ್ಟು ಪಾಟ್, ಕೋಲಾಟ ನೃತ್ಯ ಪ್ರದರ್ಶನ ನಡೆಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ಕ್ರೀಡಾಪಟು ಅಶ್ವಿನಿ ಪೊನ್ನಪ್ಪ, ತೀತಮಾಡ ಅರ್ಜುನ್ ದೇವಯ್ಯ, ನಿವೃತ್ತ ಪೊಲೀಸ್ ಅಧಿಕಾರಿ ಬಿದ್ದಾಟಂಡ ಅಶೋಕ್ ಕುಮಾರ್, ಹೋರಾಟ ಸಮಿತಿ ಪ್ರಮುಖರಾದ ಚೆಪ್ಪುಡಿರ ಶರಿ ಸುಬ್ಬಯ್ಯ, ಕಳ್ಳಿಚಂಡ ರಾಬಿನ್, ಲೋಹಿತ್, ಕಾವೇರಿ ಸೇನೆ ಜಿಲ್ಲಾ ಸಂಚಾಲಕ ರವಿ ಚಂಗಪ್ಪ, ಮಂಡ್ಯ ಭಾಗದ ರೈತ ಸಂಘದ ಪ್ರಮುಖರು, ಮೈಸೂರು ವಿವಿಯ ಮಾಜಿ ಉಪಕುಲಪತಿ ರಂಗಪ್ಪ, ಗೋಣಿಕೊಪ್ಪ ಹಿಂದು ಮಲೆಯಾಳಿ ಸಮಾಜದ ಪ್ರಮುಖರು, ಮೈಸೂರು ಮತ್ತು ಬೆಂಗಳೂರು ಭಾಗದ ಕೊಡವ ಸಮಾಜದ ಪ್ರತಿನಿಧಿಗಳು, ಕೊಡಗು ಜಿಲ್ಲೆಯ ಎಲ್ಲಾ ಭಾಗದ ಕೊಡವ ಸಮಾಜ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಅಮ್ಮಕೊಡವ ಸಮಾಜ, ಕೊಡವ ಮುಸ್ಲಿಂ ಅಸೋಸಿಯೇಶನ್, ಹೆಗ್ಗಡೆ ಸಮಾಜ, ಕಾವೇರಿ ಶಿಕ್ಷಣ ಸಂಸ್ಥೆ, ಕಾವೇರಿ ಮಹಿಳಾ ಸಂಘ, ಅಖಿಲ ಕೊಡವ ಸಮಾಜ, ಕೊಡಗು ಕೇರಳ ಹಿಂದೂ ಸಂಘ, ಗೌಡ ಸಮಾಜ ಹಾಗೂ ಇತರ ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು. ರೈಲ್ವೇ ವಿರೋಧಿ ಹೋರಾಟ ಸಮಿತಿ ಸಂಚಾಲಕ ಜಮ್ಮಡ ಗಣೇಶ್ ಅಯ್ಯಣ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.