ಕುಶಾಲನಗರ, ಫೆ. 18: ಜಿಲ್ಲೆಯ ಸಹಸ್ರಾರು ನಾಗರಿಕರು ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ತಮ್ಮ ಅಸ್ತಿತ್ವಕ್ಕೆ ಮಾರಕವಾದ ರೈಲ್ವೆ ಯೋಜನೆ ವಿರುದ್ಧ ಪ್ರತಿಭಟನೆ ನಡೆಸುವದರೊಂದಿಗೆ ಹೋರಾಟದ ಕಹಳೆ ಮೊಳಗಿಸಿದರು. ಪ್ರತಿಭಟನಾಕಾರರು ಮೈಸೂರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ತೆರಳುವದರೊಂದಿಗೆ ಸರಕಾರಕ್ಕೆ ತಮ್ಮ ಆಕ್ರೋಶÀದ ಸಂದೇಶ ರವಾನಿಸಿದರು.ಕೊಡಗು ರೈಲ್ವೆ ಮಾರ್ಗ ವಿರೋಧಿ ಹೋರಾಟ ಸಮಿತಿ ಆಶ್ರಯದಲ್ಲಿ ಮೈಸೂರಿನ ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ನೆರೆದ ಸಭಿಕರನ್ನು ಉದ್ದೇಶಿಸಿ ವಿವಿಧ ಸಂಘಟನೆಗಳ ಪ್ರಮುಖರು

ಕೊಡಗಿನ ಮೂಲ ಸ್ವರೂಪಕ್ಕೆ ಧಕ್ಕೆ ತರುವ ಯೋಜನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈಲ್ವೆ ಮಾರ್ಗ ಮಾರಕ :

ಕರ್ನಲ್ ಮುತ್ತಣ್ಣ

ಕೊಡಗಿನ ಸಸ್ಯ ಸಂಪತ್ತಿಗೆ ಮಾರಕವಾದ ರೈಲ್ವೆ ಮಾರ್ಗ ಜಿಲ್ಲೆಯೊಳಗೆ ನಿರ್ಮಾಣಗೊಂಡಲ್ಲಿ ಅಂದಾಜು 2 ಲಕ್ಷಕ್ಕೂ ಅಧಿಕ ಮರಗಳು ಧರೆಗುರುಳುವದರೊಂದಿಗೆ ಜೀವನದಿ ಕಾವೇರಿ ಬರಡಾಗುವದು ಖಚಿತ ಎಂದು ಕೊಡಗು ರೈಲ್ವೆ ಮಾರ್ಗ

ವಿರೋಧಿ

ಹೋರಾಟ

ಸಮಿತಿ

ಸಂಚಾಲಕ

ಕರ್ನಲ್ ಮುತ್ತಣ್ಣ ಆತಂಕ ವ್ಯಕ್ತಪಡಿಸಿದರು.

ಮೈಸೂರಿನ ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೀವನದಿ ಕಾವೇರಿಯ ಉಗಮಸ್ಥಾನವಾದ ಕೊಡಗು ಜಿಲ್ಲೆಯಲ್ಲಿ ಪರಿಸರ ನಾಶದಿಂದ ಕಾವೇರಿ ನೀರಿನ ಹರಿವಿನ ಮಟ್ಟ ಕುಸಿಯುತ್ತಿದೆ. ಕಳೆದ 20 ವರ್ಷಗಳಿಂದ ಜಿಲ್ಲೆಯಲ್ಲಿರುವ ಅರಣ್ಯ ಪ್ರದೇಶದ ಮೇಲಿನ ಅತಿಕ್ರಮಣದಿಂದಾಗಿ ಪರಿಸರ ಅಸಮತೋಲನ ಉಂಟಾಗಿದೆ, ಜಿಲ್ಲೆಯ ಸಂರಕ್ಷಣೆಯ ಸಮಾವೇಶಕ್ಕೆ ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಮಂದಿ ಪರಿಸರ ಪ್ರೇಮಿಗಳು ಆಗಮಿಸಿ ಬೆಂಬಲ ವ್ಯಕ್ತಪಡಿಸಿದ್ದು ಇದೊಂದು ಐತಿಹಾಸಿಕ ದಿನವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ನೀರಿನ ಆಭಾವ : ಹೆಬ್ಳೀಕರ್

ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪರಿಸರವಾದಿ ಸುರೇಶ್ ಹೆಬ್ಳೀಕರ್ ಮಾತನಾಡಿ, ಜಾಗತೀಕರಣದ ಹಿನ್ನಲೆಯಲ್ಲಿ ಕಳೆದ 15 ವರ್ಷಗಳಿಂದ ಎಲ್ಲೆಡೆ ನೀರಿನ ಅಭಾವ ಹೆಚ್ಚುತ್ತಲಿದೆ. ಕೊಡಗಿನಲ್ಲಿ ಉಗಮವಾಗಿ ಹರಿಯುತ್ತಿರುವ ಕಾವೇರಿ ನದಿ ರಾಜ್ಯದಲ್ಲಿ 20 ಲಕ್ಷ ಎಕರೆ ಭೂಮಿಗೆ ನೀರುಣಿಸುತ್ತಿದೆ. ಜಿಲ್ಲೆಗೆ ಲಗ್ಗೆಯಿಡುವ ಲಕ್ಷಾಂತರ ಮಂದಿ ಪ್ರವಾಸಿಗರಿಂದ ನೀರು ಹೆಚ್ಚಿನ ಮಟ್ಟದಲ್ಲಿ ಪೋಲಾಗುತ್ತಿದೆ. ಕಾವೇರಿ ನೀರನ್ನು ನಂಬಿ ರಾಜ್ಯ ಸೇರಿದಂತೆ ನೆರೆಯ ರಾಜ್ಯಗಳ ಪ್ರಮುಖ ವಾಣಿಜ್ಯ ನಗರಗಳ ಎಂಎನ್‍ಸಿ ಕಂಪನಿಗಳು, ಕಾರ್ಖಾನೆಗಳು, ಹೋಟೆಲ್‍ಗಳು ಸೇರಿದಂತೆ ಸುಮಾರು 600 ಕ್ಕೂ ಅಧಿಕ ಉದ್ಯಮಗಳು ಕಾರ್ಯ ನಿರ್ವಹಿಸುತ್ತಿದೆ. ಕೊಡಗಿನಲ್ಲಿ ಹೆಚ್ಚು ಮಳೆಯಾದಲ್ಲಿ ಮಾತ್ರ ಈ ಉದ್ಯಮಗಳಿಗೆ ಉಳಿಗಾಲವಿದ್ದು ನೀರಿನ ಅಭಾವ ತಲೆದೋರಿದಲ್ಲಿ ಈ ಉದ್ಯಮಗಳು ತನ್ನ ಅಸ್ವಿತ್ವ ಕಳೆದುಕೊಳ್ಳಲಿವೆ. ಆದ್ದರಿಂದ ದಕ್ಷಿಣ ಭಾರತದ ನೀರಿನ ಸೆಲೆಯಾದ ಪಶ್ಚಿಮ ಘಟ್ಟಗಳಿಗೆ ಯಾವದೇ ರೀತಿಯ ಹಾನಿ ಯುಂಟಾಗದಂತೆ ಎಚ್ಚರವಹಿಸುವದು ಅಗತ್ಯವಾಗಿದೆ. ಅರಣ್ಯ ಪ್ರದೇಶಗಳಿಗೆ ಹಾನಿಯುಂಟು ಮಾಡುವ ಮಾನವ ಕೇಂದ್ರಿತ ಚಟುವಟಿಕೆಗಳು, ಯೋಜನೆಗಳನ್ನು ತಡೆಗಟ್ಟುವದು ಅನಿವಾರ್ಯವಾಗಿದೆ ಎಂದರು.

ಅರಣ್ಯ ಪ್ರದೇಶ ನಾಶಗೊಂಡಲ್ಲಿ ಪುನರ್ ನಿರ್ಮಾಣ ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಮುಂದಿನ ಪೀಳಿಗೆಯ ಬಗ್ಗೆ ಚಿಂತನೆ ಹರಿಸಿ ಪರಿಸರ ಸಂರಕ್ಷಣೆಗೆ ಭಾವನಾತ್ಮಕವಾಗಿ ಮುಂದಾಗ ಬೇಕೆಂದು ಅವರು ಕರೆ ನೀಡಿದರು.

ಕಾಣದ ಕೈಗಳ ಲಾಭಿ : ಮಂಜು ಚಿಣ್ಣಪ್ಪ

ಸಮಾವೇಶದ ಪ್ರಮುಖ ಯುಕೊ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ, ಕೊಡಗು ಕರ್ನಾಟಕಕ್ಕೆ ವಿಲೀನಗೊಂಡ ನಂತರ ಜಿಲ್ಲೆಗೆ ಆಗಿಂದಾಗ್ಗೆ ಗಂಡಾಂತರಗಳು ಎದುರಾಗುತ್ತಿವೆ. ಜಿಲ್ಲೆಗೆ ಮಾರಕವಾದ ಹಲವು ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಇದರಿಂದಾಗಿ ಈಗಾಗಲೇ

(ಮೊದಲ ಪುಟದಿಂದ) ಬಹಳಷ್ಟು ಹಾನಿ ಯುಂಟಾಗಿದ್ದು ಈ ಬಗ್ಗೆ ಎಚ್ಚೆತ್ತುಕೊಂಡು ಮಾರಕ ಯೋಜನೆಗಳ ಬಗ್ಗೆ ಧ್ವನಿ ಎತ್ತಿದರೆ ಅಭಿವೃದ್ಧಿ ವಿರೋಧಿಗಳು ಎಂಬ ಪಟ್ಟ ಕಟ್ಟುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಜಿಲ್ಲೆಯ ಮೂಲಕ ರೈಲು ಮಾರ್ಗ ಯೋಜನೆಯ ಹಿಂದೆ ಕಾಣದ ಕೈಗಳು ಲಾಭಿ ನಡೆಸುತ್ತಿದ್ದು ಈ ಬಗ್ಗೆ ಜಿಲ್ಲೆಯ ಜನತೆ ಪ್ರಾರಂಭದ ಹಂತದಿಂದಲೇ ಈ ಯೋಜನೆಯನ್ನು ವಿರೋಧಿಸಬೇಕಿದೆ ಎಂದರು.

ಸಮಸ್ಯೆ ಕೇವಲ ಕೊಡಗಿಗೆ ಅಲ್ಲ : ರಾಜೀವ್

ಪ್ರಾಸ್ತಾವಿಕ ನುಡಿಗಳಾಡಿದ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ, ಕೊಡಗಿನ ಸಮಸ್ಯೆ ಕೇವಲ ಕೊಡಗಿಗೆ ಸೀಮಿತವಲ್ಲ ಈ ಹೋರಾಟ ದಕ್ಷಿಣ ಭಾರತದ ಮಟ್ಟದಲ್ಲಿ ಒಂದು ಪ್ರಮುಖ ಹೋರಾಟ ಆಗಬೇಕಿದೆ ಎಂದರಲ್ಲದೆ ಕಾವೇರಿ ನೀರನ್ನು ಬಳಸುವ ಪ್ರತಿಯೊಬ್ಬರೂ ಕೈಜೋಡಿಸಬೇಕು. ಜೀವನದಿ ಕಾವೇರಿ ಬರಡಾದರೆ ನ್ಯಾಯಾಲಯದಲ್ಲಿ ಕೂಡ ನ್ಯಾಯ ದೊರಕಲು ಅಸಾಧ್ಯ. ಜಿಲ್ಲೆಯಲ್ಲಿ ಕೃಷಿಗೆ ನೀರು ಬಳಸುವದಕ್ಕೆ ಕಿರುಕುಳ ನೀಡುವ ಅಧಿಕಾರಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ತತ್ಸರ ಸಲ್ಲದು : ದೇವಿ

ಸಮಾಜ ಸೇವಕ ದೇವಿಕ ದೇವಯ್ಯ ಮಾತನಾಡಿ, ಕಾವೇರಿ ನಾಡಿನ ಬಗ್ಗೆ ತಾತ್ಸಾರ ಸಲ್ಲದು. ವಿಶ್ವದಲ್ಲಿಯೇ ಅತಿ ಹೆಚ್ಚಿನ ಮಟ್ಟದಲ್ಲಿ ಕಲುಷಿತಗೊಳ್ಳುತ್ತಿರುವ ಕಾವೇರಿ ಬಗ್ಗೆ ಪ್ರತಿಯೊಬ್ಬರೂ ಚಿಂತನೆ ಹರಿಸಬೇಕಿದೆ. ರಾಜ್ಯದಲ್ಲಿ ಶೇ.65 ರಷ್ಟು ತ್ಯಾಜ್ಯ ನೇರವಾಗಿ ನದಿಗೆ ಸೇರುತ್ತಿರುವದು ದುರಂತ ಎಂದರು.

ಯೋಜನೆ ಅವಶ್ಯಕತೆ ಇಲ್ಲ : ಬ್ರಿಜೇಶ್

ಸುಪ್ರೀಂಕೋರ್ಟ್‍ನ ಹಿರಿಯ ವಕೀಲ ಬ್ರಿಜೇಶ್ ಕಾಳಪ್ಪ ಮಾತನಾಡಿ, ಕೊಡಗಿಗೆ ಯಾವದೇ ಸಂದರ್ಭ ರೈಲ್ವೇ ಯೋಜನೆ ಅವಶ್ಯಕತೆಯಿಲ್ಲ. ರಾಜ್ಯ ಸರಕಾರದಿಂದ ಯೋಜನೆ ರದ್ದುಪಡಿಸಲು ಕ್ರಮಕೈಗೊಳ್ಳಬೇಕು. ರೈಲ್ವೇಯಿಂದ ಜಿಲ್ಲೆಗಾಗಲಿ ನೆರೆಯ ಗ್ರಾಮಗಳಿಗಾಗಲಿ ಯಾವದೇ ರೀತಿಯ ಪ್ರಯೋಜವಿಲ್ಲ ಹೋರಾಟ ಮುಂದುವರೆಸಿ ಬೆಂಗಳೂರಿನಿಂದ ಮಡಿಕೇರಿ ತನಕ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಬೇಕಿದೆ. ಈ ಮೂಲಕ ಪ್ರತಿ ಮನೆಗಳಿಗೆ ಮಾಹಿತಿ ಒದಗಿಸಬೇಕಾಗಿದೆ ಎಂದರು.

ಆತಂಕದ ದಿನಗಳಿವೆ : ಚಂದ್ರಮೋಹನ್

ಕಾವೇರಿ ನದಿ ಸ್ವಚ್ಚತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್.ಚಂದ್ರಮೋಹನ್ ಮಾತನಾಡಿ, ಕಾವೇರಿ ನದಿ ಸಂರಕ್ಷಣೆಗೆ ಮುಂದಾಗದಿದ್ದಲ್ಲಿ ಆತಂಕದ ದಿನಗಳು ಎದುರಾಗಲಿವೆ. ಪ್ರಸಕ್ತ ನಡೆದ ಹೋರಾಟದ ಮೂಲಕ ಸರಕಾರಗಳಿಗೆ ಸ್ಪಷ್ಟ ಸಂದೇಶ ನೀಡುವಲ್ಲಿ ಯಶಸ್ವಿಯಾಗಿದ್ದು ಪರಿಸರ ಮಾರಕ ಯೋಜನೆಗಳ ಬಗ್ಗೆ ಸರಕಾರಗಳು ಎಚ್ಚರವಹಿಸಬೇಕಾಗಿದೆ ಎಂದರು.

ಈ ಸಂದರ್ಭ ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಮಾತನಾಡಿ, ಜಿಲ್ಲೆಯ ಹೋರಾಟಗಳಿಗೆ ತಮ್ಮ ಎಲ್ಲಾ ರೀತಿಯ ಬೆಂಬಲ ವ್ಯಕ್ತಪಡಿಸಿದರು.

ಅಖಿಲ ಭಾರತ ಸಾಧುಸಂತರ ಸಂಘದ ತಮಿಳುನಾಡು ಪ್ರತಿನಿಧಿ ಶ್ರೀ ಯುಕ್ತಾನಂದ ಸ್ವಾಮೀಜಿ ಮಾತನಾಡಿ, ಕೊಡಗು ಜಿಲ್ಲೆಗೆ ಸಮಸ್ಯೆ ಉಂಟಾದಲ್ಲಿ ಆ ಮೂಲಕ ತಮಿಳುನಾಡು ರಾಜ್ಯಕ್ಕೂ ಕಂಟಕ ಎದುರಾಗುತ್ತದೆ. ಈ ಬಗ್ಗೆ ತಮ್ಮ ಸಂಘದ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸುವದರೊಂದಿಗೆ ಕೊಡಗು ಜಿಲ್ಲೆಯ ಹೋರಾಟಕ್ಕೆ ಬೆಂಬಲ ಘೋಷಿಸಿದರು.

ಕೇರಳದ ವಯನಾಡಿನ ಪರಿಸರವಾದಿ ಮೀರಾ ರಾಜೇಶ್, ಮೈಸೂರು ಕೊಡವ ಸಮಾಜದ ಹಿರಿಯರಾದ ಇಟ್ಟಿರ ಡಾಟಿ, ಲೌವ್ಲಿ ಪೊಂಜಂಡ, ಪ್ರಮುಖರಾದ ಎಂ.ಎಂ.ರವೀಂದ್ರ ಮಾತನಾಡಿದರು.

ಇದೇ ಸಂದರ್ಭ ಬುಡಕಟ್ಟು ಕೃಷಿಕರ ಸಂಘದ ಸದಸ್ಯರಿಂದ ದುಡಿಕೊಟ್ಟು ಪಾಟ್, ಕೋಲಾಟ ನೃತ್ಯ ಪ್ರದರ್ಶನ ನಡೆಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ಕ್ರೀಡಾಪಟು ಅಶ್ವಿನಿ ಪೊನ್ನಪ್ಪ, ತೀತಮಾಡ ಅರ್ಜುನ್ ದೇವಯ್ಯ, ನಿವೃತ್ತ ಪೊಲೀಸ್ ಅಧಿಕಾರಿ ಬಿದ್ದಾಟಂಡ ಅಶೋಕ್ ಕುಮಾರ್, ಹೋರಾಟ ಸಮಿತಿ ಪ್ರಮುಖರಾದ ಚೆಪ್ಪುಡಿರ ಶರಿ ಸುಬ್ಬಯ್ಯ, ಕಳ್ಳಿಚಂಡ ರಾಬಿನ್, ಲೋಹಿತ್, ಕಾವೇರಿ ಸೇನೆ ಜಿಲ್ಲಾ ಸಂಚಾಲಕ ರವಿ ಚಂಗಪ್ಪ, ಮಂಡ್ಯ ಭಾಗದ ರೈತ ಸಂಘದ ಪ್ರಮುಖರು, ಮೈಸೂರು ವಿವಿಯ ಮಾಜಿ ಉಪಕುಲಪತಿ ರಂಗಪ್ಪ, ಗೋಣಿಕೊಪ್ಪ ಹಿಂದು ಮಲೆಯಾಳಿ ಸಮಾಜದ ಪ್ರಮುಖರು, ಮೈಸೂರು ಮತ್ತು ಬೆಂಗಳೂರು ಭಾಗದ ಕೊಡವ ಸಮಾಜದ ಪ್ರತಿನಿಧಿಗಳು, ಕೊಡಗು ಜಿಲ್ಲೆಯ ಎಲ್ಲಾ ಭಾಗದ ಕೊಡವ ಸಮಾಜ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಅಮ್ಮಕೊಡವ ಸಮಾಜ, ಕೊಡವ ಮುಸ್ಲಿಂ ಅಸೋಸಿಯೇಶನ್, ಹೆಗ್ಗಡೆ ಸಮಾಜ, ಕಾವೇರಿ ಶಿಕ್ಷಣ ಸಂಸ್ಥೆ, ಕಾವೇರಿ ಮಹಿಳಾ ಸಂಘ, ಅಖಿಲ ಕೊಡವ ಸಮಾಜ, ಕೊಡಗು ಕೇರಳ ಹಿಂದೂ ಸಂಘ, ಗೌಡ ಸಮಾಜ ಹಾಗೂ ಇತರ ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು. ರೈಲ್ವೇ ವಿರೋಧಿ ಹೋರಾಟ ಸಮಿತಿ ಸಂಚಾಲಕ ಜಮ್ಮಡ ಗಣೇಶ್ ಅಯ್ಯಣ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.