ಮಡಿಕೇರಿ, ಫೆ. 18: ಕೊಡಗು ಜಾನಪದ ಪರಿಷತ್ ಸಮಿತಿ ಸಭೆ ಹಾಗೂ ಸನ್ಮಾನ ಕಾರ್ಯಕ್ರಮ ಓಂಕಾರ ಸದನ ಸಭಾಂಗಣದಲ್ಲಿ ನಡೆಯಿತು.

ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪರಿಷತ್‍ನ ಇದುವರೆಗಿನ ಕಾರ್ಯಕ್ರಮಗಳ ಬಗ್ಗೆ ವಿಮರ್ಷೆ ಹಾಗೂ ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಯಿತು.

ಮಡಿಕೇರಿ, ಸೋಮವಾರಪೇಟೆ ಹಾಗೂ ವೀರಾಜಪೇಟೆ ತಾಲೂಕು ಘಟಕಗಳ ಅಧ್ಯಕ್ಷರುಗಳಾದ ಅನಿಲ್ ಹೆಚ್.ಟಿ., ಎಂ.ಎನ್. ಚಂದ್ರ ಮೋಹನ್, ಮಹೇಶ್ ನಾಚಯ್ಯ, ಸೋಮವಾರ ಪೇಟೆ ತಾಲೂಕು ಪ್ರಧಾನ ಕಾರ್ಯದರ್ಶಿ ವಿಜಯ್ ಹಾನಗಲ್, ಹೋಬಳಿ ಘಟಕದ ಕಾರ್ಯದರ್ಶಿ ರುಬೀನಾ, ಮೂರ್ನಾಡು ಘಟಕದ ಅಧ್ಯಕ್ಷ ಪ್ರಶಾಂತ್ ಇವರುಗಳು ತಮ್ಮ ಘಟಕಗಳ ವರದಿಯನ್ನು ಮಂಡಿಸಿದರು.

ವೇದಿಕೆಯಲ್ಲಿ ಪರಿಷತ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್, ಖಜಾಂಚಿ ಸಂಪತ್ ಕುಮಾರ್ ಉಪಸ್ಥಿತರಿದ್ದರು. ಜಿಲ್ಲಾ ಘಟಕದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಉಜ್ವಲ್ ರಂಜಿತ್ ವಾಚಿಸಿದರು.

ಸನ್ಮಾನ: ಇದೇ ಸಂದರ್ಭ ಜಾನಪದ ಲೋಕ ಪ್ರಶಸ್ತಿಗೆ ಭಾಜನರಾದ ಬೈತಡ್ಕ ಜಾನಕಿ ಹಾಗೂ ಸಂಗೀತ ಕ್ಷೇತ್ರದಲ್ಲಿ ಚಿನ್ನದ ಪದಕ ಪಡೆದ ಮಮತಾ ಇವರುಗಳನ್ನು ಜಾನಪದ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.