ಕುಶಾಲನಗರ, ಫೆ 18: ಸೋಮವಾರಪೇಟೆ ತಾಲೂಕಿನ ನೂರಾರು ಫಲಾನುಭವಿಗಳಿಗೆ ಸ್ತಳೀಯ ಗಾಯತ್ರಿ ಕಲ್ಯಾಣ ಮಂಟಪದಲ್ಲಿ 94 ಸಿ ಮತ್ತು 94 ಸಿಸಿ ಕಂದಾಯ ಕಾಯಿದೆ ತಿದ್ದುಪಡಿ ಹಕ್ಕುಪತ್ರ ವಿತರಣಾ ಕುಶಾಲನಗರದಲ್ಲಿ ಭಾನುವಾರ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಕಾರ್ಯಕ್ರಮ ಉದ್ಘಾಟಿಸಿ ಹಕ್ಕುಪತ್ರ ವಿತರಿಸಿದರು. ನಂತರ ಮಾತನಾಡಿದ ಅವರು, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೊಡಗು ಜಿಲ್ಲೆಯಲ್ಲಿ ವಿವಿಧ ಯೋಜನೆ ಆಡಿ 9 ಸಾವಿರಕ್ಕೂ ಅಧಿಕ ಹಕ್ಕುಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ. ಪೈಸಾರಿ ಜಾಗಗಳಲ್ಲಿ ಮನೆ ಕಟ್ಟಿಕೊಂಡಿರುವವರ ಬಹುದಿನಗಳ ಬೇಡಿಕೆಯಾದ ಹಕ್ಕುಪತ್ರ ವಿತರಣೆಗೆ ಸರ್ಕಾರ ಮೊದಲ ಆದ್ಯತೆ ನೀಡಿದೆ. ಈ ದಿಸೆಯಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವಿಶೇಷ ಆಸಕ್ತಿ ವಹಿಸಿ ಕಾರ್ಯನಿರ್ವಹಿಸಿದ್ದಾರೆ. ಯಾವುದೇ ಕಾರಣಕ್ಕೂ ಹಕ್ಕುಪತ್ರ ಮಾರುವ ದುಸ್ಸಾಹಸ ಮಾಡದಂತೆ ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಮಾತನಾಡಿ, ತಾಲೂಕಿನ ವಿವಿಧೆಡೆ ಪೈಸಾರಿ ಜಾಗದಲ್ಲಿ ವಾಸಿಸುತ್ತಿದ್ದ ಬಡ ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಮೂಲಕ ಅವರ ಬಹುದಿನಗಳ ಬೇಡಿಕೆ ಈಡೇರಿಸಲಾಗಿದೆ. ಹಕ್ಕುಪತ್ರಕ್ಕೆ ಸಂಬಂಧಿಸಿದ ದಾಖಲೆಗಳು ಸಂಪೂರ್ಣ ಗಣಕೀಕೃತ ಆಗಿದ್ದು, ಮಾರಾಟ ಮಾಡಿದಲ್ಲಿ ಅದು ಅಪರಾಧವಾಗುತ್ತದೆ. ಇದೇ ರೀತಿ ಸಿ ಮತ್ತು ಡಿ ಲ್ಯಾಂಡ್‍ಗೂ ಹಕ್ಕುಪತ್ರ ನೀಡಲು ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು. ಸುಮಾರು 400 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯರಾದ ಕೆ.ಆರ್. ಮಂಜುಳಾ, ಪಿ.ಎಂ. ಲತೀಫ್, ಕೆ.ಪಿ. ಚಂದ್ರಕಲಾ, ಸುನಿತಾ ಮಂಜುನಾಥ್, ಕುಮದಾ ಧರ್ಮಪ್ಪ, ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ತಹಶೀಲ್ದಾರ್ ಮಹೇಶ್, ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ, ಕಾಂಗ್ರೆಸ್ ಮುಖಂಡ ಮಿಟ್ಟು ಚಂಗಪ್ಪ ಮತ್ತಿತರರು ಇದ್ದರು.