ಸಿದ್ದಾಪುರ, ಫೆ. 18: ಕಾಡಾನೆ ಹಾವಳಿಯಿಂದ ಬೆಳೆಗಾರರು, ರೈತರು ಹಾಗೂ ಕಾರ್ಮಿಕರನ್ನು ರಕ್ಷಿಸಬೇಕೆಂದು ಒತ್ತಾಯಿಸಿ ತಾ. 23 ರಂದು ಮಡಿಕೇರಿಯ ಗಾಂಧಿ ಮೈದಾನದಿಂದ ಅರಣ್ಯ ಭವನದವರೆಗೆ ಜಾಥಾ ನಡೆಯಲಿದೆ.

ಕೊಡಗು ಜಿಲ್ಲಾ ರೈತ ಸಂಘ ಹಾಗೂ ಕೊಡಗು ಜಿಲ್ಲಾ ರೈತರು ಮತ್ತು ಕಾರ್ಮಿಕರ ಅರಣ್ಯ ಹೋರಾಟ ಸಮಿತಿಯ ವತಿಯಿಂದ ಬಲಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು.

ಇಲ್ಲಿನ ಎಸ್.ಎನ್.ಡಿ.ಪಿ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಾಥಾ ಹಾಗೂ ಬಲಪ್ರದರ್ಶನ ಕಾರ್ಯಕ್ರಮದ ಬಗ್ಗೆ ಚರ್ಚಿಸಿ, ಜಿಲ್ಲಾದ್ಯಂತ ಪ್ರಚಾರ ಮಾಡಬೇಕೆಂದು ತೀರ್ಮಾನಿಸಲಾಯಿತು. ಕಾಡಾನೆ ಹಾವಳಿ ಹೆಚ್ಚಾಗಿರುವ ಪ್ರದೇಶದ ಎಲ್ಲಾ ಸಂಘ-ಸಂಸ್ಥೆ, ಗ್ರಾ.ಪಂ., ಮಹಿಳಾ ಸಂಘಟನೆಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ತೀರ್ಮಾನಿಸಲಾಯಿತು. ಈಗಾಗಲೇ ಕಾರ್ಮಿಕ ಸಂಘಟನೆಗಳು ತಾ. 23 ರಂದು ಜಾಥಾದಲ್ಲಿ ಪಾಲ್ಗೊಳ್ಳಲು ಕಾರ್ಮಿಕರಿಗೆ ಸೂಚಿಸಲಾಗಿದ್ದು, ಕಾರ್ಮಿಕರಿಗೆ ಮಡಿಕೇರಿಗೆ ತೆರಳಲು ವಾಹನದ ವ್ಯವಸ್ಥೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಸಮಿತಿಯ ಸಂಚಾಲಕ ಪ್ರವೀಣ್ ಬೋಪಯ್ಯ, ಖಜಾಂಚಿ ನಂದಾ ಗಣಪತಿ, ಕಾರ್ಮಿಕ ಸಂಘಟನೆಯ ಪಿ.ಆರ್. ಭರತ್, ಮಹದೇವ, ಹೆಚ್.ಬಿ. ರಮೇಶ್, ಬೆಳೆಗಾರ ರಾಜ, ವಕೀಲ ಹೇಮಚಂದ್ರ ಇನ್ನಿತರರು ಇದ್ದರು.