ಮಡಿಕೇರಿ, ಫೆ. 18: ಅಖಿಲ ಕರ್ನಾಟಕ ಭೋವಿ ಯುವ ವೇದಿಕೆ ಕ್ರಾಂತಿ ಸಂಘಟನೆಯ ಕೊಡಗು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಮಟ್ಟದ ಭೋವಿ ಜನಾಂಗದ ಐಕ್ಯತಾ ಸಮಾವೇಶ ಮತ್ತು ಭೋವಿ ಸಮುದಾಯದ ಆದಿ ಗುರುಗಳಾದ ಶ್ರೀ ಸಿದ್ಧರಾಮೇಶ್ವರರ 846ನೇ ಜಯಂತ್ಯೋತ್ಸವ ಕಾರ್ಯಕ್ರಮ ತಾ. 23 ರಂದು ನಗರದ ಕಾವೇರಿ ಹಾಲ್‍ನಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಡಿ. ಸುಜಿತ್, ಕೊಡಗು ಜಿಲ್ಲೆಯಲ್ಲಿ ಸುಮಾರು 15 ರಿಂದ 20 ಸಾವಿರ ಜನಸಂಖ್ಯೆ ಇರುವ ಭೋವಿ ಜನಾಂಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದ್ದು, ಜನಾಂಗದ ವಿವಿಧ ಬೇಡಿಕೆಗಳ ಬಗ್ಗೆ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಐಕ್ಯತಾ ಸಮಾವೇಶ ನಡೆಸುತ್ತಿರುವದಾಗಿ ತಿಳಿಸಿದರು. ತಾ. 23 ರಂದು ಅಖಿಲ ಕರ್ನಾಟಕ ಭೋವಿ ಯುವ ವೇದಿಕೆ ಕ್ರಾಂತಿಯ ರಾಜ್ಯಾಧ್ಯಕ್ಷರು ಹಾಗೂ ವಕೀಲ ವೈ. ಕೊಟ್ರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್, ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ, ಮಂಡೆಪಂಡ ಸುನಿಲ್ ಸುಬ್ರಮಣಿ, ಐ.ಎಎನ್.ಟಿ.ಯು.ಸಿ. ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ. ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡ ಶೋಭಾಮೋಹನ್, ಕೆಪಿಸಿಸಿ ಕಾರ್ಯದರ್ಶಿ ಅರುಣ್ ಮಾಚಯ್ಯ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಅಖಿಲ ಕರ್ನಾಟಕ ಭೋವಿ ರಾಜ್ಯ ಗೌರವ ಸಲಹೆಗಾರ ಜಿ.ವಿ. ಸೀತಾರಾಮ್ ಮಾಜಿ ಸಚಿವ ಬಿ.ಎ. ಜೀವಿಜಯ, ರಾಜ್ಯ ಉಚ್ಚ ನ್ಯಾಯಾಲಯದ ನಿಕಟ ಪೂರ್ವ ಸರ್ಕಾರಿ ಅಭಿಯೋಜಕ ಹೆಚ್.ಎಸ್. ಚಂದ್ರಮೌಳಿ, ಜಿಲ್ಲಾಧಿಕಾರಿ ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಮತ್ತಿತರರು ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.

ಭೋವಿ ಸಮುದಾಯ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮಂಜೂರು ಮಾಡಬೇಕು, ಕಲ್ಲು ಗಣಿಗಾರಿಕೆಯನ್ನು ಭೋವಿ ಜನಾಂಗದವರೇ ನಿರ್ವಹಿಸಲು ಅನುಮತಿ ನೀಡಬೇಕು, ಸೂಕ್ತ ಜಾತಿ ಪ್ರಮಾಣ ಪತ್ರ ನೀಡಲು ಕ್ರಮ ಕೈಗೊಳ್ಳಬೇಕು, ವಿದ್ಯಾರ್ಥಿ ನಿಲಯ ಸ್ಥಾಪಿಸಬೇಕು, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಮೂಲಕ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು, ಸ್ಮಶಾನಕ್ಕಾಗಿ ಜಾಗ ಮೀಸಲಿಡಬೇಕು, ಸರಕಾರಿ ಭೂಮಿಯ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು, ವಿಕಲಚೇತನ, ಬುದ್ದಿಮಾಂದ್ಯ ಹಾಗೂ ವಯೋವೃದ್ಧರಿಗೆ ಧನ ಸಹಾಯ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳ ಮೂಲಕ ಸಮಾವೇಶದಲ್ಲಿ ಜನಪ್ರತಿನಿಧಿಗಳ ಗಮನ ಸೆಳೆಯಲಾಗುವದೆಂದು ಸುಜಿತ್ ತಿಳಿಸಿದರು.

ಗೋಷ್ಠಿಯಲ್ಲಿ ಗೌರವಾಧ್ಯಕ್ಷ ಆರ್.ಸಿ. ವಿಜಯ, ಉಪಾಧ್ಯಕ್ಷ ಸುರೇಶ್, ಕಾರ್ಯಾಧ್ಯಕ್ಷ ಟಿ.ಎಂ. ಗಣೇಶ್, ಪ್ರಧಾನ ಕಾರ್ಯದರ್ಶಿ ವಿನಯ್ ಹಾಗೂ ಸೋಮವಾರಪೇಟೆ ಉಪಾಧ್ಯಕ್ಷ ಎಂ.ಕೆ. ಸುಬ್ರಮಣಿ ಉಪಸ್ಥಿತರಿದ್ದರು.