ಮಡಿಕೇರಿ, ಫೆ.18: ಸಂಚಾರಿ ಡಿಜಿಟಲ್ ತಾರಾಲಯ, ಶಾಲೆಯ ಅಂಗಳದಲ್ಲಿ ತಾರಾಲಯ ವೀಕ್ಷಣೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್.ಸೀತಾರಾಂ ಅವರು ನಗರದ ಜೂನಿಯರ್ ಕಾಲೇಜಿನಲ್ಲಿ ಭಾನುವಾರ ಚಾಲನೆ ನೀಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಸಂಚಾರಿ ತಾರಾಲಯಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಮಕ್ಕಳಲ್ಲಿ ವಿಜ್ಞಾನ ವಿಷಯ ಮಹತ್ವದ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಸಂಚಾರಿ ತಾರಾಲಯ ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು.

ವಿದ್ಯಾರ್ಥಿಗಳಿಗೆ ಖಗೋಳ ಶಾಸ್ತ್ರದ ಬಗ್ಗೆ ಮಾಹಿತಿ ನೀಡುವದು ಪ್ರಮುಖವಾಗಿದ್ದು, ಪ್ರೌಢಶಾಲೆ ಹಾಗೂ ಕಾಲೇಜುಗಳಲ್ಲಿ ವಿಜ್ಞಾನ ವಿಷಯವನ್ನು ಪಠ್ಯದಲ್ಲಿ ಓದುತ್ತಾರೆ. ಆ ದಿಸೆಯಲ್ಲಿ ತಾರಾಲಯದ ಮೂಲಕ ವೀಕ್ಷಣೆ ಮಾಡಿ ಖಗೋಳ ಮಂಡಲದ ಬಗ್ಗೆ ಮಾಹಿತಿ ತಿಳಿದುಕೊಳ್ಳುವಲ್ಲಿ ಸಂಚಾರಿ ತಾರಾಲಯ ಸಹಕಾರಿಯಾಗಲಿದೆ ಎಂದು ಸೀತಾರಾಂ ತಿಳಿಸಿದರಲ್ಲದೆ, ರಾಜ್ಯದ 5 ಕಡೆ ಸಂಚಾರಿ ತಾರಾಲಯ ಆರಂಭಿಸಲಾಗಿದ್ದು, ಸರ್ಕಾರಿ ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ವೀಕ್ಷಣೆಗೆ ಅವಕಾಶ ಮಾಡಲಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ 1.50 ಲಕ್ಷ ವಿದ್ಯಾರ್ಥಿಗಳು ಸಂಚಾರಿ ತಾರಾಲಯದ ಮೂಲಕ ಖಗೋಳ ವೀಕ್ಷಣೆ ಮಾಡಿದ್ದಾರೆ ಎಂದು ನುಡಿದರು.

ಸಂಚಾರಿ ತಾರಾಲಯದ ಮೂಲಕ ಮುಂದಿನ ದಿನಗಳಲ್ಲಿ 5 ಲಕ್ಷ ವಿದ್ಯಾರ್ಥಿಗಳು ಖಗೋಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವದು ಎಂದರಲ್ಲದೆ, ಸಂಚಾರಿ ತಾರಾಲಯದಲ್ಲಿ ಸೂರ್ಯನ ನಿಗೂಢ ರಹಸ್ಯ, ಸೂರ್ಯ, ಚಂದ್ರ, ಭೂಮಿ ಹಾಗೂ ನಕ್ಷತ್ರಗಳ ಚಲನವಲನದ ಜೊತೆಗೆ ಹೈಡ್ರೋಜನ್ ಬಾಂಬ್ ಬಳಸುವದರಿಂದ ಭೂಮಿಯ ಮೇಲೆ ಉಂಟಾಗುವ ದುಷ್ಪರಿಣಾಮ ಮತ್ತಿತರ ಬಗ್ಗೆ ತಾರಾಲಯದಲ್ಲಿ ವೀಕ್ಷಣೆ ಮಾಡಬಹುದಾಗಿದೆ ಎಂದು ವಿವರಿಸಿದರು.

ವಿಧಾನ ಪರಿಷತ್ ಸದಸೆÀ್ಯ ವೀಣಾ ಅಚ್ಚಯ್ಯ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ನಿರ್ದೇಶಕ ಕೆ.ಎ. ಯಾಕುಬ್, ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಜಿ.ಪಂ.ಯೋಜನಾ ನಿರ್ದೇಶಕ ಸಿದ್ದಲಿಂಗಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆರ್.ಕರೀಗೌಡ, ತಹಶೀಲ್ದಾರ್ ಕುಸುಮ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗುರುರಾಜ್, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಶಿವರಾಮ್, ಸಂಚಾರಿ ತಾರಾಲಯದ ವರ್ನಾಜ್ ಸಂಸ್ಥೆಯ ನಿರ್ದೇಶಕ ಅನಂತ ಕುಲಕರ್ಣಿ, ಚರಂತಯ್ಯ ಇತರರು ಇದ್ದರು.