ಮಡಿಕೇರಿ, ಫೆ. 18: ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಮತದಾರರಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸುವಂತೆ ವಿವಿಧ ಇಲಾಖಾ ಅಧಿಕಾರಿಗಳಿಗೆ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ. ಸಿಇಓ ಪ್ರಶಾಂತ ಕುಮಾರ್ ಮಿಶ್ರ ತಿಳಿಸಿದ್ದಾರೆ.

ನಗರದ ಕೋಟೆ ಹಳೇ ವಿಧಾನಸಭಾ ಸಭಾಂಗಣದಲ್ಲಿ ನಡೆದ ಮತದಾರರ ಜಾಗೃತಿ ಮತ್ತು ಪಾಲ್ಗೊಳ್ಳುವಿಕೆ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಧಾನಸಭಾ ಚುನಾವಣೆ ಸಂಬಂಧಿಸಿದಂತೆ ಮತದಾರರ ಪಟ್ಟಿಯಲ್ಲಿರುವವರು ಕಡ್ಡಾಯವಾಗಿ ಮತ ಚಲಾಯಿಸುವಂತಾಗಲು ಅರಿವು ಮೂಡಿಸಬೇಕಿದೆ. 18 ವರ್ಷ ಪೂರ್ಣಗೊಂಡವರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವಂತಾಗಬೇಕು.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡುವದು ನಿರಂತರ ಪ್ರಕ್ರ್ರಿಯೆಯಾಗಿದ್ದು, ಈ ಅವಕಾಶದ ಬಗ್ಗೆ ಮಾಹಿತಿ ನೀಡಬೇಕಿದೆ.

ಜಿಲ್ಲೆಯ ಹಾಡಿಗಳಲ್ಲಿ ಜಾಗೃತಿ ಕಾರ್ಯಕ್ರಮ ಏರ್ಪಡಿಸುವದು, ಬಸ್‍ಗಳಲ್ಲಿ ಭಿತ್ತಿಪತ್ರ ಅಳವಡಿಸುವದು, ಸಂತೆ ಹಾಗೂ ಜನದಟ್ಟಣೆ ಪ್ರದೇಶಗಳಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸುವಂತೆ ಅವರು ನಿರ್ದೇಶನ ನೀಡಿದರು.

ಕಳೆದ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಶೇ. 50 ಕ್ಕಿಂತಲೂ ಕಡಿಮೆ ಮತದಾನವಾಗಿರುವ ಪ್ರದೇಶಗಳಲ್ಲಿ ವಿಶೇಷ ಅಭಿಯಾನವನ್ನು ತಾ.ಪಂ. ಹಾಗೂ ಗ್ರಾ.ಪಂ. ಮೂಲಕ ಆಯೋಜಿಸುವದು, ಹಾಡಿಗಳಲ್ಲಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕು.

ಗ್ರಾಮ ಪಂಚಾಯಿತಿಗಳು ಸೇರಿದಂತೆ ನಗರ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಜಾತ್ರೆ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮ ಏರ್ಪಡಿಸುವದು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ಬೀದಿ ನಾಟಕ ಏರ್ಪಡಿಸುವದು, ಸಾರ್ವಜನಿಕ ಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣ ಹಾಗೂ ಕಾಲೇಜು ಶಿಕ್ಷಣ ಇಲಾಖೆಗಳು ವಿಚಾರ ಸಂಕಿರಣ, ಪ್ರಬಂಧ ಸ್ವರ್ಧೆ ಏರ್ಪಡಿಸುವದು. ಯುವ ಸಬಲೀಕರಣ ಹಾಗೂ ನೆಹರು ಯುವ ಕೇಂದ್ರದ ಮೂಲಕ ಜಾಥಾ ಏರ್ಪಡಿಸುವದು. ಸಮಾಜ ಕಲ್ಯಾಣ, ಐ.ಟಿ.ಡಿ.ಪಿ, ಬಿ.ಸಿ.ಎಂ ಇಲಾಖೆಗಳ ಮೂಲಕ ಕಾಲೋನಿಗಳಲ್ಲಿ ವಿಶೇಷ ಜಾಗೃತಿ ಅಭಿಯಾನ ಮೂಡಿಸುವಂತೆ ಪ್ರಶಾಂತ್ ಕುಮಾರ್ ಮಿಶ್ರ ಹೇಳಿದರು.

ನಗರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಆಟೋ ಮೂಲಕ ಪ್ರಚಾರ ಮಾಡುವದು. ಮ್ಯಾರಥಾನ್ ಏರ್ಪಡಿಸುವದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಶುಪಾಲನೆ ಇಲಾಖೆ, ಮೀನುಗಾರಿಕೆ ಇಲಾಖೆ ರೇಷ್ಮೆ ಜಲಾನಯನ ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಹಂತದಲ್ಲಿ ಕಾರ್ಯಕ್ರಮ ಏರ್ಪಡಿಸುವದು.

ಹಾಲು ಉತ್ಪಾದಕರ ಸಹಕಾರ ಸಂಘಗಳು, ಕೆ.ಎಸ್.ಆರ್.ಟಿ.ಸಿ., ಅಂಚೆ ಇಲಾಖೆ, ಬ್ಯಾಂಕ್‍ಗಳು ಮತದಾರರ ಜಾಗೃತಿ ಕಾರ್ಯಕ್ರಮ ಆಯೋಜಿಸುವಂತೆ ಸೂಚನೆ ನೀಡಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ. ರಾಮಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್, ನಗರಸಭೆ ಪೌರಾಯುಕ್ತೆ ಬಿ.ಶುಭ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಭಾಗ್ಯ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜನಾಧರ್sನ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಮಯಾದೇವಿ ಗಲಗಲಿ, ಬಿ.ಸಿ.ಎಂ. ಅಧಿಕಾರಿ ಕೆ.ವಿ.ಸುರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಲ್ಲೇಸ್ವಾಮಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ಬಾಯಿ ಪ.ಪಂ. ಮುಖ್ಯಾಧಿಕಾರಿ ಗಳಾದ ಕೃಷ್ಣ ಪ್ರಸಾದ್ ಶ್ರೀಧರ, ನಾಚಪ್ಪ ಅವರು ಹಲವು ಮಾಹಿತಿ ನೀಡಿದರು.