ಕುಶಾಲನಗರ, ಫೆ. 18: ಬೆರಳೆಣಿಕೆಯಷ್ಟು ಮಾತ್ರ ಪೊಲೀಸರು ಇದ್ದರೂ ಸಹಸ್ರಾರು ಮಂದಿಯ ಶಿಸ್ತುಬದ್ಧ ಮೆರವಣಿಗೆ, 87ರ ವೃದ್ಧೆಗೂ ಆಯಾಸವಾಗದ ನಡಿಗೆ, ರೈಲ್ವೆ ಯೋಜನೆಗೆ ವಿರೋಧಿಸಿ ಸಾಂಕೇತಿಕವಾಗಿ, ಕಪ್ಪು ಬಟ್ಟೆ ಹಾಗೂ ಕಪ್ಪು ಪಟ್ಟಿ ಧರಿಸಿದ್ದ ಪ್ರತಿಭಟನಾಕಾರರು, ಕೊಡಗು ಸಾಗಿ ಮೈಸೂರಿನ ಮೂಲಕ ಸರ್ಕಾರಗಳಿಗೆ ಮುಟ್ಟಿದ ರೈಲ್ವೆ ವಿರೋಧಿ ಕೂಗುಗಳು-ಇಂದು ಮೈಸೂರು ಸಾಂಸ್ಕøತಿಕ ನಗರದಲ್ಲಿ ಕೊಡಗು ರೈಲ್ವೆ ಮಾರ್ಗ ವಿರೋಧಿ ಹೋರಾಟ ಸಮಿತಿ ಆಶ್ರಯದಲ್ಲಿ ನಡೆದ ಮೆರವಣಿಗೆ ಹಾಗೂ ಸಮಾರಂಭದಲ್ಲಿ ಕಂಡು ಬಂದ ವಿಶೇಷತೆಗಳು. ಮೈಸೂರಿನ ವಸ್ತು ಪ್ರದರ್ಶನ ಮೈದಾನದಿಂದ ಹೊರಟ ಪ್ರತಿಭಟನಾಕಾರರು ಕೆಆರ್ ವೃತ್ತದ ವರೆಗೆ 1 ಕಿ.ಮೀ ದೂರದ ತನಕ ಸಾಗಿ ನಂತರ ಮರಳಿ ಕಾರ್ಯಕ್ರಮದ ವೇದಿಕೆಗೆ ಆಗಮಿಸಿದರು. ಈ ಸಂದರ್ಭ ಪ್ರತಿಭಟನಾಕಾರರು ‘ಬೇಡವೇ ಬೇಡ ರೈಲ್ವೆ ಬೇಡ, ಬೇಕೇ ಬೇಕು ಕಾಡು ಬೇಕು, ಉಳಿಸಿ ಉಳಿಸಿ ಕಾವೇರಿ ಉಳಿಸಿ, ಕೊಡಗು ಉಳಿಸಿ’ ಘೋಷಣೆಗಳನ್ನು ಕೂಗಿದರು.

ನಡು ನಡುವೆ ಕೊಡವ ಭಾಷೆಯಲ್ಲಿ ಘೋಷಣೆಗಳು ಕೇಳಿಬರುತ್ತಿದ್ದವು.

ಮೆರವಣಿಗೆಯಲ್ಲಿ ಮೈಸೂರು ಕೊಡವ ಸಮಾಜದ ಹಿರಿಯ ಮಹಿಳೆ 87 ವಯೋಮಾನದ ಇಟ್ಟಿರ ಡಾಟಿ ಅವರು ಪಾಲ್ಗೊಂಡಿದ್ದು

(ಮೊದಲ ಪುಟದಿಂದ)ಯುವ ಪೀಳಿಗೆಗೆ ಸ್ಪೂರ್ತಿ ನೀಡುವಂತಿತ್ತು. ಮೈಸೂರಿನಲ್ಲಿ ಕೊಡಗು ರೈಲ್ವೆ ಮಾರ್ಗ ವಿರೋಧಿ ಹೋರಾಟ ಸಮಿತಿ ಆಶ್ರಯದಲ್ಲಿ ನಡೆದ ಕೊಡಗಿನ ವಿವಿಧ ಸಂಘಸಂಸ್ಥೆಗಳ ಒಕ್ಕೂಟದ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡಿದ್ದು ಅತ್ಯಂತ ಶಿಸ್ತುಬದ್ಧವಾಗಿ, ಶಾಂತಿಯುತವಾಗಿ ನಡೆದು ಸಾಂಸ್ಕøತಿಕ ನಗರಿಯ ಜನತೆಗೆ ಅಚ್ಚರಿ ಮೂಡಿಸಿತು. ಪ್ರತಿಭಟನಾ ಕಾರರು ಮೈಸೂರಿನ ಪ್ರಮುಖ ಬೀದಿಗಳಲ್ಲಿ ಘೋಷಣೆ ಗಳೊಂದಿಗೆ ತೆರಳಿದ ಸಂದರ್ಭ ಬೆರಳೆಣಿಕೆಯ ಪೊಲೀಸ್ ಮಾತ್ರ ಕಂಡು ಬಂದಿದ್ದು ವಿಶೇಷವಾಗಿತ್ತು. ನೂರಾರು ಸ್ವಯಂಸೇವಕರು ರ್ಯಾಲಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಸಫಲರಾಗಿದ್ದು ಇದಕ್ಕೆ ಕಾರಣ ಎನ್ನಬಹುದು. ಬಸ್‍ಗಳು ಹಾಗೂ ಅಧಿಕ ಖಾಸಗಿ ವಾಹನಗಳು ವಸ್ತು ಪ್ರದರ್ಶನ ಮೈದಾನದ ಸುತ್ತಮುತ್ತ ನಿಲುಗಡೆಗೊಂಡಿದ್ದವು. ಮೆರವಣಿಗೆ ಯಲ್ಲಿ ಪುಟ್ಟ ಮಕ್ಕಳಿಂದ ಹಿಡಿದು 90 ರ ತನಕದ ಹಿರಿಯ ಕಿರಿಯ ಜೀವಗಳು ಪಾಲ್ಗೊಂಡಿದ್ದು, ಹೋರಾಟದ ಕಿಚ್ಚಿಗೆ ಇನ್ನೂ ಮೆರುಗು ತಂದಿತ್ತು. ಮೈಸೂರು ಕೊಡವ ಸಮಾಜದ ಅಚ್ಚುಕಟ್ಟಾದ ವ್ಯವಸ್ಥೆ ಬೆಂಗಳೂರು, ಮೈಸೂರು, ಮಂಡ್ಯ, ಕೊಡಗು ಸೇರಿದಂತೆ ವಿವಿಧೆಡೆಯ ಯುವಕ, ಯುವತಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕಪ್ಪು ಬಟ್ಟೆ, ಪಟ್ಟಿ ಧರಿಸುವುದರೊಂದಿಗೆ ಘೋಷಣಾ ಫಲಕಗಳನ್ನು ಹಿಡಿದು ಮೆರವಣಿಗೆ ನಡೆಸಿದ್ದು ಎದ್ದು ಕಾಣುತ್ತಿತ್ತು. ಸ್ಥಳೀಯ ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ರೈಲ್ವೇ ಮಾರ್ಗ ವಿರೋಧಿ ಹೋರಾಟ ವೇದಿಕೆಯ ಪ್ರಮುಖರಾದ ಕರ್ನಲ್ ಮುತ್ತಣ್ಣ, ಚೆಪ್ಪುಡಿರ ಶರಿ ಸುಬ್ಬಯ್ಯ, ಜಮ್ಮಡ ಗಣೇಶ್ ಅಯ್ಯಣ್ಣ, ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಹಾಗೂ ಜಿಲ್ಲೆಯ ವಿವಿಧೆಡೆಯಿಂದ ವಿಶೇಷ ಬಸ್ ವ್ಯವಸ್ತೆ ಮಾಡುವ ನಿಟ್ಟಿನಲ್ಲಿ ಸಂಘಟಕರಾದ ಮಾಚಿಮಾಡ ರವೀಂದ್ರ, ಮಲ್ಲಮಾಡ ಪ್ರಭು ಪೂಣಚ್ಚ, ರಾಜೀವ ಬೋಪಯ್ಯ ಮತ್ತು ಕೊಡವ ಸಮಾಜದ ಪ್ರಮುಖರು ಸಾವಿರಾರು ಮಂದಿ ಯನ್ನು ಮೈಸೂರಿಗೆ ಕರೆದೊಯ್ಯುವಲ್ಲಿ ಹಾಗೂ ಬೆಂಗಳೂರು ಕಡೆಯಿಂದ ಕರೆತಂದು ಒಂದೆಡೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಗರದ ನೂರಾರು ಯುವಕರ ತಂಡ ಮೆರವಣಿಗೆ ಸಂದರ್ಭ ತಮ್ಮ ಬೈಕ್‍ಗಳಲ್ಲಿ ಜಾಥಾ ನಡೆಸಿದ್ದು ಕಂಡುಬಂತು. ಸಭಾಂಗಣದ ಆವರಣದಲ್ಲಿ ಸಹಿ ಫಲಕ ಅಳವಡಿಸುವದರೊಂದಿಗೆ ಸಹಸ್ರಾರು ಮಂದಿ ತಮ್ಮ ಸಹಿಯನ್ನು ಹಾಕಲು 4 ಫಲಕಗಳನ್ನು ಅಳವಡಿಸಿದ್ದರು. ಕೊಡಗು ಜಿಲ್ಲೆಯ ಕುಶಾಲನಗರ, ಮಡಿಕೇರಿ, ಗೋಣಿಕೊಪ್ಪ, ವೀರಾಜಪೇಟೆ, ಪೊನ್ನಂಪೇಟೆ, ಕುಟ್ಟ ಸೇರಿದಂತೆ ಎಲ್ಲೆಡೆಗಳಿಂದ ಮಹಿಳೆಯರು ಹಾಗೂ ಪುರುಷರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕೊಡಗು ಜಿಲ್ಲೆಯ ಪರಿಸರ ಹಾಗೂ ಜೀವನದಿಯನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲೆಡೆಗಳಿಂದ ಸೇರಿದಂತೆ ದೇಶ ವಿದೇಶಗಳಿಂದ ಕಾರ್ಯಕ್ರಮದ ಯಶಸ್ಸಿಗೆ ಹಾರೈಕೆಗಳು ಬಂದಿದ್ದವು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಊಟದ ವ್ಯವಸ್ತೆ ಕಲ್ಪಿಸಲಾಗಿತ್ತು. ಒಟ್ಟಾರೆ ಕೊಡಗಿನ ಜನತೆಯ ಸಂದೇಶ ಸರಕಾರಕ್ಕೆ ತಲುಪಿಸುವಲ್ಲಿ ಕೊಡಗು ರೈಲ್ವೇ ವಿರೋಧಿ ಹೋರಾಟ ಸಮಿತಿಯ ಸಂಘಟಕರು ಪರಿಶ್ರಮಪಟ್ಟಿದ್ದು ಎಂದು ಪ್ರತಿಭಟನಾ ರೂಪದಲ್ಲಿ ಪೂರ್ಣಗೊಂಡಿತ್ತು.

- ವರದಿ: ಎಂ.ಎನ್. ಚಂದ್ರಮೋಹನ್, ಹರೀಶ್ ಮಾದಪ್ಪ