ಕುಶಾಲನಗರ, ಫೆ. 18: ಕೊಡಗಿನ ಜನತೆಯ ಹಿತಾಸಕ್ತಿಗೆ ವಿರುದ್ಧವಾಗಿ ಯಾವದೇ ರೀತಿಯ ಕಾರ್ಯನಿರ್ವಹಿಸದೆ ಉಂಟಾಗಿರುವ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವದಾಗಿ ಸಂಸದ ಪ್ರತಾಪ್ ಸಿಂಹ ತಿಳಿಸಿದರು. ಅವರು ಮೈಸೂರಿನಲ್ಲಿ ನಡೆದ ರೈಲ್ವೆ ವಿರೋಧಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ಈಗಾಗಲೆ ಉದ್ದೇಶಿತ ರೈಲ್ವೆ ಮಾರ್ಗದ ಕುರಿತಾಗಿ ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಚರ್ಚೆ ನಡೆಸಿರುವುದನ್ನು ಹೊರತುಪಡಿಸಿದಂತೆ ಕೇಂದ್ರ ಸರಕಾರ ಅನುಮೋದನೆ ಇದುವರೆಗೆ ಲಭಿಸಿಲ್ಲ. ಕೊಡಗಿನ ಜನತೆಯ ಬದುಕುವ ಹಕ್ಕನ್ನು ಕಸಿಯುವ ಹಕ್ಕು ಯಾರಿಗೂ ಇಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಗೆ ಮಾರಕವೆಂದು ಪರಿಗಣಿಸಿರುವ ರೈಲ್ವೆ ಯೋಜನೆ ಜಿಲ್ಲೆಗೆ ಪ್ರವೇಶಿಸದಂತೆ ಕ್ರಮಕೈಗೊಳ್ಳುವದಾಗಿ ಅವರು ತಿಳಿಸಿದರು. ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಅನುಮತಿ ಕಲ್ಪಿಸದಂತೆ ನೋಡಿಕೊಳ್ಳಬೇಕಾಗಿದೆ ಎಂದರು. 2012-13ರಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮಂಡಿಸಲ್ಪಟ್ಟ ಮುಂಗಡ ಪತ್ರದಲ್ಲಿ ತಲಚೇರಿ - ಮೈಸೂರು ರೈಲ್ವೆ ಬಗ್ಗೆ ಪ್ರಸ್ತಾವನೆಗೊಂಡಿದ್ದು, ಈ ಯೋಜನೆ ಕಾರ್ಯ ರೂಪಕ್ಕೆ ಬಾರದಂತೆ ತಾನು ಈಗಾಗಲೇ ಕೇಂದ್ರ ರೈಲ್ವೆ ಸಚಿವರೊಂದಿಗೆ ಮಾತುಕತೆ ನಡೆಸಿರುವದಾಗಿ ಪ್ರತಾಪ್ ಸಿಂಹ ವಿವರಣೆ ನೀಡಿದರು.

ಈಗಾಗಲೆ ಉದ್ದೇಶಿತ ಬೆಂಗಳೂರು-ಮೈಸೂರು 8 ಪಥ ಹೆದ್ದಾರಿ ಮಾರ್ಗ ಯೋಜನೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಉಳಿದಂತೆ ಕೆಲವು ಹೆದ್ದಾರಿ ಯೋಜನೆಗಳು ಕೂಡ ಪ್ರಗತಿಯಲ್ಲಿದ್ದು ಮೈಸೂರು-ಕುಶಾಲನಗರ-ಮಡಿಕೇರಿ ಚತುಷ್ಪಥ ಹೆದ್ದಾರಿ ಕಾಮಗಾರಿ ಪ್ರಾರಂಭಗೊಳ್ಳಲಿದೆ. ರಸ್ತೆಯ ಜಾಗ ವಿಸ್ತರಿಸದೆ ಇರುವ ರಸ್ತೆಯನ್ನು ನಿರ್ವಹಣೆ ಮಾಡುವ ಮೂಲಕ ಅಭಿವೃದ್ಧಿಗೊಳಿಸುವದು ಹಾಗೂ ಕುಶಾಲನಗರ, ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಬೈಪಾಸ್ ರಸ್ತೆ ನಿರ್ಮಿಸುವ ಯೋಜನೆ ರೂಪಿತಗೊಂಡಿದೆ ಎಂದರು.