ವೀರಾಜಪೇಟೆ. ಫೆ. 18: ವೀರಾಜಪೇಟೆಯ ಸೈಂಟ್ ಆನ್ಸ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ವಿದ್ಯಾರ್ಥಿಗಳಿಗಾಗಿ ಹಳೆಯ ನಾಣ್ಯಗಳು ಹಾಗೂ ನೋಟುಗಳ ಪ್ರದರ್ಶನ ಆಯೋಜಿಸಲಾಗಿತ್ತು. ವೀರಾಜಪೇಟೆಯ ಐಮಂಗಲದ ಹಳೆಯ ನೋಟು ಸಂಗ್ರಹಗಾರ ಅಜಯ್‍ರಾವ್ ತನ್ನ ಸಂಗ್ರಹದ ವಿಶ್ವದ 165 ದೇಶಗಳ ಕರೆನ್ಸಿಗಳು ಹಾಗೂ ನಾಣ್ಯಗಳು ರಾಜರ ಕಾಲದ ನಾಣ್ಯಗಳು ಪ್ರದರ್ಶನಕ್ಕೆ ಇಟ್ಟಿದ್ದರು. ಪ್ರಾಂಶುಪಾಲ ರೆ||ಫಾ. ಐಸಕ್ ರತ್ನಾಕರ್ ಪ್ರದರ್ಶನವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ರಾಷ್ಟ್ರದ ಪ್ರಗತಿಯಲ್ಲಿ ಹಣದ ಮೌಲ್ಯವು ಪ್ರಮುಖ ಪಾತ್ರ ವಹಿಸುತ್ತದೆ. ಹಳೆಯ ಕಾಲದ ನಾಣ್ಯಗಳು ಹಾಗೂ ಕರೆನ್ಸಿಗಳು ನಮ್ಮ ನಾಗರಿಕತೆಯ ಸಂಕೇತವಾಗಿದೆ ಎಂದರು. ಪದವಿ ವಿಭಾಗದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರದರ್ಶನವನ್ನು ವೀಕ್ಷಿಸಿ ಮಾಹಿತಿ ಸಂಗ್ರಹಿಸಿದರು. ಕಾರ್ಯಕ್ರಮ ಆಯೋಜಕರಾದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಬಿ.ಎನ್. ಶಾಂತಿಭೂಷಣ್ ಮತ್ತು ಸಹಾಯಕ ಪ್ರಾಧ್ಯಾಪಕಿ ಕಾವೇರಿ ಉಪಸ್ಥಿತರಿದ್ದರು.