ಸಿದ್ದಾಪುರ, ಫೆ. 18: ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಸುಸಜ್ಜಿತ ಕ್ರೀಡಾಂಗಣದ ಅಗತ್ಯವಿದೆ ಎಂದು ನೆಲ್ಲಿಹುದಿಕೇರಿ ಗ್ರಾ.ಪಂ. ಪಿಡಿಓ ನಂಜುಂಡಸ್ವಾಮಿ ಅಭಿಪ್ರಾಯಪಟ್ಟರು.

ಸಮೀಪದ ನಲ್ವತೇಕ್ರೆಯ ಕುಂಬಳವೇಲಿ ಕುಟುಂಬಸ್ಥರ ಗದ್ದೆಯಲ್ಲಿ ಮೂರು ದಿನಗಳ ಕಾಲ ನಡೆದ ನಲ್ವೇತೆಕ್ರೆ ಪ್ರೀಮಿಯರ್ ಲೀಗ್ (ಎನ್‍ಪಿಎಲ್) ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದು, ಸೂಕ್ತ ವೇದಿಕೆ ಹಾಗೂ ಸಾರ್ವಜನಿಕ ಕ್ರೀಡಾಂಗಣದ ವ್ಯವಸ್ಥೆ ಇಲ್ಲದೆ ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಬಿಡ್ಡಿಂಗ್ ಮೂಲಕ ಭಾಗವಹಿಸಿದ ನಲ್ವತೇಕ್ರೆ ವ್ಯಾಪ್ತಿಯ 8 ತಂಡಗಳ ಪೈಕಿ ಫೈನಲ್ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಟ್ರೈಟ್ ಫೋರ್ಸ್ ತಂಡ ನಿಗದಿತ 8 ಓವರ್‍ಗಳಲ್ಲಿ 6 ವಿಕೆಟ್‍ಗಳ ನಷ್ಟಕ್ಕೆ 37 ರನ್‍ಗಳನ್ನು ಗಳಿಸಿದರು. 38 ರನ್‍ಗಳ ಗುರಿ ಬೆನ್ನಟ್ಟಿದ ಕೂರ್ಗ್ ಸ್ಟಾರ್ ತಂಡ 4.3 ಓವರ್‍ನಲ್ಲಿ 3 ವಿಕೆಟ್‍ಗಳ ನಷ್ಟಕ್ಕೆ ಗುರಿ ತಲುಪುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದರು. ರಿಯಲ್ ಫೈಟರ್ಸ್ ತೃತೀಯ ಹಾಗೂ ಕೋಬ್ರಾಸ್ ನಾಲ್ಕನೇಯ ಸ್ಥಾನ ಪಡೆಯಿತು. ಫೈನಲ್ ಪಂದ್ಯ ಪುರುಷೋತ್ತಮ ಶರತ್, ಉತ್ತಮ ಬೌಲರ್ ಶಕೀರ್, ಉತ್ತಮ ಕ್ಯಾಚ್ ಕಿರಣ್, ಉತ್ತಮ ಬ್ಯಾಟ್ಸ್‍ಮಾನ್ ಶರತ್, ಉತ್ತಮ ಆಲ್‍ರೌಂಡರ್ ಅಬು, ಸರಣಿ ಶ್ರೇಷ್ಠ ಸಂಜಯ್, ಬೆಸ್ಟ್ ಆಟಗಾರನಾಗಿ ಅಕ್ಬರ್ ಪ್ರಶಸ್ತಿ ಪಡೆದುಕೊಂಡರು.