ವೀರಾಜಪೇಟೆ, ಫೆ. 19: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಅಂಗಡಿ ಮಳಿಗೆಗಳ ಹರಾಜು ನಡೆಯದಂತೆ ಬಾಡಿಗೆದಾರರು ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಇಲ್ಲಿನ ಪ್ರಿನ್ಸಿಪಲ್ ಮುನ್ಸಿಫ್ ನ್ಯಾಯಾಧೀಶರು ಇಂದು ಪಟ್ಟಣ ಪಂಚಾಯಿತಿ ಪರ ತೀರ್ಪು ನೀಡಿದ್ದಾರೆ.ಇಂದು ಪೂರ್ವಾಹ್ನ ಮುಖ್ಯಾಧಿಕಾರಿ, ವಕೀಲರ ಸಮ್ಮುಖದಲ್ಲಿ ನ್ಯಾಯಾಲಯ ತೀರ್ಪು ಪ್ರಕಟಿಸಿದ ನಂತರ ಅಧಿಕಾರಿಗಳು ಮೊದಲೇ ನಿಯೋಜಿಸಿದಂತೆ 35 ಅಂಗಡಿಗಳ ಹರಾಜಿಗೆ ಅವಕಾಶ ನೀಡಿದರು. ನ್ಯಾಯಾಲಯದ ತೀರ್ಪು ಪ್ರಕಟವಾಗುತ್ತಿದ್ದÀಂತೆ ಅಂಗಡಿಗಳಿಗೆ ಟೆಂಡರ್ ಸಲ್ಲಿಸಿದ್ದ ಅರ್ಜಿದಾರರು ಪುರಭವನದ ಬಳಿ ನೆರೆದಿದ್ದರು.

ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳ ಸಮ್ಮುಖದಲ್ಲಿ 11.30 ಗಂಟೆಗೆ ಹರಾಜು ಪ್ರಕ್ರಿಯೆ ಪ್ರಾರಂಭಿಸಿದರು. ಪುರಭವನದ ಸುತ್ತ ಸರ್ಕಲ್ ಇನ್ಸ್‍ಪೆಕ್ಟರ್ ಎನ್.ಕುಮಾರ್ ಆರಾಧ್ಯ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪಟ್ಟಣ ಪಂಚಾಯಿತಿಯ ಸುಮಾರು 13 ಮಂದಿ ಬಾಡಿಗೆದಾರರು ಹರಾಜಿಗೆ ತಡೆ ಕೋರಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.