ಗೋಣಿಕೊಪ್ಪ ವರದಿ, ಫೆ. 19 : ಹೆಚ್‍ಐವಿ ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ವಿಚಾರವಾಗಿ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕಿ ಸುನಿತ ಮುತ್ತಣ್ಣ ಮಾಹಿತಿ ನೀಡಿದರು.

ಹಳ್ಳಿಗಟ್ಟು ಕೂರ್ಗ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜುವಿನಲ್ಲಿ ನಡೆದ ರೆಡ್ ರಿಬ್ಬನ್ ಕ್ಲಬ್‍ನ ಉದ್ಘಾಟನೆ ಮತ್ತು ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ರೆಡ್ ರಿಬ್ಬನ್ ಕ್ಲಬ್‍ನ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಸುರಕ್ಷಿತ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಏಡ್ಸ್ ಸೋಂಕಿನ ಬಗ್ಗೆ ಯುವಜನತೆಗೆ ಮೊದಲು ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಮಡಿಕೇರಿ ಜಿಲ್ಲಾ ಆರೋಗ್ಯ ಕೇಂದ್ರದ ಕೌನ್ಸಿಲರ್ ಅಶ್ವಿತಾ ಹೆಚ್‍ಐವಿ ಸೋಂಕು ಹರಡುವಿಕೆ ಮತ್ತು ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು ಹಾಗೂ ತಡೆಗಟ್ಟುವಿಕೆ ಬಗ್ಗೆ ಮಾಹಿತಿ ನೀಡಿದರು.

ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜು ಅಧ್ಯಕ್ಷ ರವೀಂದ್ರ ರೈ ಮಾತನಾಡಿ, ಸ್ವಾಮಿ ವಿವೇಕಾನಂದರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪ್ರಾಂಶುಪಾಲ ಪಿ. ಮಹಾಬಲೇಶ್ವರಪ್ಪ, ಎನ್‍ಎಸ್‍ಎಸ್ ಯೋಜನಾಧಿಕಾರಿ ಎನ್.ಎಸ್ ಸುಜಿತ್, ಕ್ಲಬ್‍ನ ಅಧ್ಯಕ್ಷ ಬಿ.ಎಲ್ ಪುರುಷೋತ್ತಮ್ ಉಪಸ್ಥಿತರಿದ್ದರು.