ಮಡಿಕೇರಿ, ಫೆ. 19: ಸಂಪಾಜೆ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳಿಲ್ಲದೆ ಗರ್ಭಿಣಿ ಮಹಿಳೆ ಪರದಾಡುವಂತಾಗಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಪರಿಶಿಷ್ಟ ಜಾತಿ ಗರ್ಭಿಣಿ ಮಹಿಳೆ ಶೋಭಾ ರಾಜೇಶ್ ಚಿಕಿತ್ಸೆಗೆ ಆಸ್ಪತ್ರೆಗೆ ಬಂದಿದ್ದು, ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳಿಲ್ಲದೆ ಬಳಲುವಂತಾಯಿತು. ಬಳಿಕ ಗ್ರಾಮಸ್ಥರು 108 ವಾಹನಕ್ಕೆ ಕರೆ ಮಾಡಿ ಸುಳ್ಯ ಆಸ್ಪತ್ರೆಗೆ ಕಳುಹಿಸಿದರು.

ಆಸ್ಪತ್ರೆಯಲ್ಲಿ ಕಳೆದ 2 ವರ್ಷಗಳಿಂದ ವೈದ್ಯರು ಇಲ್ಲ, ಸಿಬ್ಬಂದಿಗಳ ಕೊರತೆಯಿದೆ. 22 ಮಂದಿ ಸಿಬ್ಬಂದಿಗಳಿರಬೇಕಾದ ಆಸ್ಪತ್ರೆಯಲ್ಲಿ ಕೇವಲ 2 ಮಂದಿ ದಾದಿಯರು ಮಾತ್ರ ಕರ್ತವ್ಯ ನಿರ್ವಹಿಸಿದ್ದು, ಇದನ್ನು ಖಂಡಿಸಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ನೇತೃತ್ವದಲ್ಲಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ಈ ಸಂದರ್ಭ ತಾಲೂಕು ಆರೋಗ್ಯಾಧಿಕಾರಿ ಸ್ಥಳಕ್ಕೆ ಬಂದಿದ್ದು, ವೈದ್ಯರು ಹಾಗೂ ಸಿಬ್ಬಂದಿಗಳ ನೇಮಕಕ್ಕೆ 15 ದಿನ ಗಡುವು ನೀಡಿದ್ದು, ತಪ್ಪಿದಲ್ಲಿ ಸಂಪಾಜೆ ಗೇಟ್‍ನಲ್ಲಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸುವದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆ ಸಂದರ್ಭ ಮೊಗೇರ ಸಮಾಜದ ಅಧ್ಯಕ್ಷ ಕೊರಗಪ್ಪ ಅರಮನೆ ತೋಟ, ರಾಜೇಶ್, ಗ್ರಾ.ಪಂ. ಸದಸ್ಯ ಕುಮಾರ್ ಚೆದ್‍ಕಾರ್ ಹಾಜರಿದ್ದರು.