ಮಡಿಕೇರಿ, ಫೆ. 19: ಕಾಫಿ ಬೆಳೆಗಾರರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವದು, ಬೆಳೆಗಾರರ ಸಹಾಯಧನ ಬಿಡುಗಡೆ ಮಾಡುವದು, ವನ್ಯಪ್ರಾಣಿ - ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವದು, ಕಾಫಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿ ಪಡಿಸುವದು ಸೇರಿದಂತೆ ಹತ್ತು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾಫಿ ಬೆಳೆಗಾರರ ಸಂಘಟನೆಗಳ ಪ್ರಮುಖರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್. ಬೋಜೇಗೌಡ ಅವರ ನೇತೃತ್ವದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಜೈರಾಂ, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್‍ನ ಅಧ್ಯಕ್ಷ ಹೆಚ್.ಡಿ. ಪ್ರಮೋದ್, ಉಪಾಸಿಯ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಮೆನನ್, ಕಾಫಿ ಮಂಡಳಿ ಸದಸ್ಯ ಮಹಾಬಲರಾವ್, ತಮಿಳುನಾಡು ಪ್ಲಾಂಟರ್ಸ್ ಅಸೋಸಿಯೇಷನ್‍ನ ಅಧ್ಯಕ್ಷ ಸುರೇಶ್ ಜಾಕೂಬ್, ಕೇರಳ ಪ್ಲಾಂಟರ್ಸ್ ಅಸೋಸಿಯೇಷನ್‍ನ ಅಧ್ಯಕ್ಷ ಥಾಮಸ್ ಜಾಕೂಬ್ ಅವರನ್ನೊಳಗೊಂಡ ನಿಯೋಗವು ಕೇಂದ್ರ ಸಚಿವ ಸದಾನಂದಗೌಡ ಅವರನ್ನು ಭೇಟಿ ಮಾಡಿ, ಕಾಫಿ ಬೆಳೆಗಾರರ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಮನವಿ ಸಲ್ಲಿಸಿದರು.
ನಂತರ ಕೇಂದ್ರ ವಾಣಿಜ್ಯ ಸಚಿವರ ಆಪ್ತ ಕಾರ್ಯದರ್ಶಿ ವಿಜಯ್ ತಂಗ್ಳೆ, ವಾಣಿಜ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಸಂತೋಷ್ ಸಾರಂಗಿ, ಪ್ಲಾಂಟೇಷನ್ ಕಾರ್ಯದರ್ಶಿ ಅನಿತಾಕರಣ್ ಹಾಗೂ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ, ಕಾಫಿ ಉದ್ಯಮಕ್ಕೆ ಸಂಬಂಧಪಟ್ಟಂತೆ ಚರ್ಚಿಸಿ, ಕಾಫಿ ಬೆಲೆ ಕುಸಿತ, ಬೆಳೆಕುಸಿತ, ಇನ್ನೂ ಹಲವಾರು ಸಮಸ್ಯೆಗಳಿಂದ ಬೆಳೆಗಾರರು ಆರ್ಥಿಕ ಸಂಕಷ್ಟದಲ್ಲಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಗಿದೆ.
ಮನವಿಯಲ್ಲಿ ಏನೇನು..?
31.3.2018ರವರೆಗೆ ಬಾಕಿ ಇರುವ ಕಾಫಿ ಬೆಳೆಗಾರರ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವಂತೆ ಹಾಗೂ ಅಸಲನ್ನು 5 ಕಂತುಗಳಾಗಿ ಪಾವತಿಸಲು ಅವಕಾಶ ಕಲ್ಪಿಸಿಕೊಡಬೇಕು. ಕಂತುಗಳ ಮೂಲಕ ಪಾವತಿಸಬೇಕಾದ ಹಣಕ್ಕೆ ಶೇ. 6ರ ಬಡ್ಡಿಯನ್ನು ವಿಧಿಸುವದು. ವಾಣಿಜ್ಯ ಬ್ಯಾಂಕುಗಳಲ್ಲಿ ಸಾಲ ಪಡೆಯುವ ಬೆಳೆಗಾರರಿಗೆ 25 ಲಕ್ಷದವರೆಗೆ ಶೇ. 3ರ ಬಡ್ಡಿ ದರದಲ್ಲಿ 25 ಲಕ್ಷದ ಮೇಲ್ಪಟ್ಟು ಶೇ. 6ರ ಬಡ್ಡಿ ದರದಲ್ಲಿ ಸಾಲ ನೀಡಬೇಕು. ಶೀಘ್ರದಲ್ಲೇ ಕಾಫಿ ಮಂಡಳಿ
(ಮೊದಲ ಪುಟದಿಂದ) ಮುಖೇನ ಕಾಫಿ ಬೆಳೆಗಾರರಿಗೆ ಉಳಿಕೆಯಾಗಿರುವ 69 ಕೋಟಿ ಸಹಾಯಧನದ ಹಣವನ್ನು ಬಿಡುಗಡೆಗೊಳಿಸುವದು. ಇತ್ತೀಚೆಗೆ ಮಳೆಯ ಪ್ರಮಾಣ ಇಳಿಕೆಯಾಗಿರುª Àದರಿಂದ ಕೆರೆಗಳ ನಿರ್ಮಾಣಕ್ಕೆ 10 ಲಕ್ಷದವರೆಗೆ ಶೇ. 4ರ ಸಹಾಯಧನ ನೀಡುವದು. 12ನೇ ಪಂಚ ವಾರ್ಷಿಕ ಯೋಜನೆಯನ್ನು 2021ರವರೆಗೆ ಮುಂದುವರೆಸುವದು. ಬಿಳಿಕಾಂಡ ಕೊರಕದ ನಿಯಂತ್ರಣಕ್ಕೆ ಸೂಕ್ತ ಔಷಧಿ ಕಂಡುಹಿಡಿಯಲು ಈಗಾಗಲೇ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸ್‍ಗೆ ವಹಿಸಿರುವ ಪ್ರಾಜೆಕ್ಟನ್ನು ಮುಂದುವರೆಸುವದು.
ಕಾಫಿ ಉದ್ಯಮಕ್ಕೆ ಸಂಬಂಧಿಸಿದ 7 ಬಿ (ಸೆಂಟ್ರಲ್ ಬೋರ್ಡ್ ಡೈರೆಕ್ಟ್ ಟ್ಯಾಕ್ಸ್)ನ್ನು ತೆಗೆದು ಹಾಕಬೇಕು. ಭಾರತದಲ್ಲಿ ಶೇ. 98.5 ರಷ್ಟು ಸಣ್ಣ ಕಾಫಿ ಹಿಡುವಳಿದಾರರಾಗಿದ್ದು, 7 ಬಿ ಕಾರಣದಿಂದಾಗಿ ಹಲ್ಲಿಂಗ್ ಮತ್ತು ಗ್ರೇಡಿಂಗ್ ತೆರಿಗೆಗೆ ಒಳಪಡುತ್ತಿರುವ ದರಿಂದ ಅದನ್ನು ಫಾರಂ ಗೇಟ್‍ನಲ್ಲಿ ಮಾಡಲಾಗದೇ ವರ್ತಕರು ಇದರ ಲಾಭ ಪಡೆದು ಬೆಳೆಗಾರರನ್ನು ಶೋಷಿಸುತ್ತಿರುವದರಿಂದ 7 ಬಿ ಯನ್ನು ತೆಗೆದು ಹಾಕಬೇಕು.
ಮಾನವ - ವನ್ಯ ಜೀವಿ ಸಂಘರ್ಷ ದಿನೇ ದಿನೇ ಹೆಚ್ಚಾಗುತ್ತಿದ್ದು, ಮಲೆನಾಡಿನ ಭಾಗದ ಜನಸಾಮಾನ್ಯರು ಪ್ರಾಣಭಯದಿಂದ ಜೀವಿಸುತ್ತಿದ್ದು, ಅದರಲ್ಲೂ ಮುಖ್ಯವಾಗಿ ಕಾಡಾನೆಗಳ ಧಾಳಿಗೆ ಪ್ರಾಣಹಾನಿ ಮತ್ತು ಬೆಳೆಹಾನಿ ಸಂಭವಿಸುತ್ತಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು. ಕಾಡಾನೆಗಳಿಗೆ ಕಾಡಿನಲ್ಲಿಯೇ ಮೂಲ ಸೌಲಭ್ಯಗಳನ್ನು ಒದಗಿಸಿಕೊಟ್ಟು ಕಾಡಿನಿಂದ ನಾಡಿಗೆ ಬಾರದಂತೆ ರೈಲ್ವೆ ಕಂಬಿಗಳ ತಡೆಗೋಡೆ ನಿರ್ಮಿಸಬೇಕು. 3 ತಿಂಗಳುಗಳಲ್ಲಿ ಕನಿಷ್ಟ 60 ದಿನಗಳ ಕಾಲ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಮಾತ್ರ ಭವಿಷ್ಯ ನಿಧಿ ಸೌಲಭ್ಯವನ್ನು ನೀಡುವಂತೆ ಕಾನೂನು ರೂಪಿಸಬೇಕು. ಕಾಫಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಬೇಕು. ರಾಜ್ಯದಾದ್ಯಂತ ಚಿಕೋರಿ ರಹಿತ ಕಾಫಿ ಕುಡಿಯಲು ಅವಕಾಶ ನೀಡುವದು ಸೇರಿದಂತೆ ಇನ್ನೂ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ. ಕೇಂದ್ರ ಸರ್ಕಾರವು ಮುಂದಿನ ದಿನಗಳಲ್ಲಿ ಇದರ ಬಗ್ಗೆ ಕ್ರಮ ವಹಿಸುವದಾಗಿ ಸಚಿವರು ಹಾಗೂ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿರುವದಾಗಿ ಬೆಳೆಗಾರರ ಪ್ರಮುಖರು ತಿಳಿಸಿದ್ದಾರೆ.