ವೀರಾಜಪೇಟೆ, ಫೆ. 19: ಪಟ್ಟಣ ಪಂಚಾಯಿತಿಯ ಹರಾಜು ಪ್ರಕ್ರಿಯೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಿಟ್ಟ ಮಳಿಗೆಗೆ ಒಟ್ಟು 4 ಜನರಿಂದ ಅರ್ಜಿ ಸಲ್ಲಿಸಲಾಗಿತ್ತು. ಮೂರು ಜನ ಬೇನಾಮಿ ಹೆಸರಿನಲ್ಲಿ ಮೀಸಲಾತಿಗೆ ಒಳಪಡದವರು ಮೀಸಲಾತಿ ಸರದಿಯಲ್ಲಿ ಅರ್ಜಿ ಸಲ್ಲಿಸಿದ್ದರು. ತಾ. 17 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಓರ್ವ ಪರಿಶಿಷ್ಟ ಜಾತಿಗೆ ಸೇರಿದ ಅರ್ಜಿದಾರ 5 ಗಂಟೆಯ ನಂತರ ಅರ್ಜಿ ನೀಡಿದ್ದಾರೆ ಎಂದು ಮೂರು ಮಂದಿ ಆಕ್ಷೇಪ ವ್ಯಕ್ತಪಡಿಸಿ ಕಚೇರಿ ಎದುರು ಪ್ರತಿಭಟಿಸಿದರು.ಇದಕ್ಕೆ ಕೆಲವು ಬಿಡ್‍ದಾರರು ಬೆಂಬಲಿಸಿ ತನಿಖೆಗೆ ಮುಂದಾದರು. ತಾ. 17ರ ಸಿ.ಸಿ ಟಿವಿಯ ದೃಶ್ಯಾವಳಿಯ ದಾಖಲೆಯನ್ನು ಪರಿಶೀಲಿಸಿದಾಗ ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸಿರುವದು ಕಂಡು ಬಂತು.

ಏಕವಚನ ಪ್ರಯೋಗ: ಬೇನಾಮಿ ಹೆಸರಿನಲ್ಲಿ ಅರ್ಜಿ ಹಾಕಿದವರ ಪರವಾಗಿ ನಾಸಿರ್ ಎಂಬುವರು ಸಾರ್ವಜನಿಕವಾಗಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಅವರನ್ನು ಏಕವಚನದಲ್ಲಿ ನಿಂದಿಸಿದರು. ಸಿ.ಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವಂತೆ ಪಟ್ಟಣ ಪಂಚಾಯಿತಿಯ ಕೆಲವು ಸದಸ್ಯರು ಒತ್ತಾಯಿಸಿದ ಮೇರೆಗೆ ಅನೇಕರು ಪಟ್ಟಣ ಪಂಚಾಯಿತಿ ವಿರುದ್ಧ ಧಿಕ್ಕಾರ ಕೂಗಿದರು. ಎಲ್ಲಾ ಪ್ರಕ್ರಿಯೆಗಳು ನಡೆದ ನಂತರ ನಾಸಿರ್ ಮುಖ್ಯಾಧಿಕಾರಿ ಅವರನ್ನು ಕಚೇರಿಯಲ್ಲಿ ಕ್ಷಮೆಯಾಚಿಸಿದ ಘಟನೆಯು ನಡೆಯಿತು.

ಪೊಲೀಸರು ಅಹಿತಕರ ಘಟನೆಗೆ ಅವಕಾಶ ನೀಡದಂತೆ ಪಟ್ಟಣ ಪಂಚಾಯಿತಿ ಕಚೇರಿಗೆ ಬಂದೋಬಸ್ತ್ ಏರ್ಪಡಿಸಿದ್ದರು.