ಒಡೆಯನಪುರ, ಫೆ. 19 : ಬಾಲಕನೊಬ್ಬ ಪಕ್ಕದ ಮನೆಯ ಅಪ್ರಾಪ್ತ ಬಾಲಕಿಯನ್ನು ವಿವಸ್ತ್ರಗೊಳಿಸಿ ವೀಡಿಯೋ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಬಾಲಕಿಯ ಪೋಷಕರು ಶನಿವಾರಸಂತೆ ಠಾಣೆಗೆ ದೂರು ನೀಡಿದ ಹಿನೆÀ್ನಲೆಯಲ್ಲಿ ಪೊಲೀಸರು ಆರೋಪಿ ಬಾಲಕನನ್ನು ಬಾಲಕ ಬಾಲಮಂದಿರಕ್ಕೆ ಸೇರಿಸಿದ್ದಾರೆ. ಮಾದ್ರೆ ಹೊಸಳ್ಳಿ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಮಾದ್ರೆ ಹೊಸಳ್ಳಿ ಗ್ರಾಮದ 6ನೇ ತರಗತಿ ಓದುತ್ತಿರುವ ಅಪ್ರಾಪ್ತ ಬಾಲಕಿಯನ್ನು ಅದೇ ಗ್ರಾಮದ 10ನೇ ತರಗತಿ ಓದುತ್ತಿರುವ ಅಪ್ರಾಪ್ತ ಬಾಲಕನೊಬ್ಬ, ಮನೆಯಲ್ಲಿ ಪೋಷಕರು ಇಲ್ಲದ ಸಂದರ್ಭದಲ್ಲಿ ಬಂದು ಬಾಲಕಿಯನ್ನು ವಿವಸ್ತ್ರಗೊಳಿಸಿ ಮೊಬೈಲ್‍ನಲ್ಲಿ ವೀಡಿಯೋ ಮಾಡಿದ್ದಾನೆ. ಈ ಪ್ರಕರಣ 10 ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಬಾಲಕಿಯ ಮಾವ ಶನಿವಾರಸಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಸೋಮವಾರ ಬೆಳಿಗ್ಗೆ ಶನಿವಾರಸಂತೆ ಪೊಲೀಸರು ಬಾಲಕನನ್ನು ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ಅಪ್ರಾಪ್ತ ಬಾಲಕಿಯಿಂದ ಪೊಲೀಸರು ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಪೊಲೀಸರು ಶನಿವಾರಸಂತೆ ಮತ್ತು ಸೋಮವಾರಪೇಟೆ ಸರಕಾರಿ ಆಸ್ಪತ್ರೆಗಳಲ್ಲಿ ಮಹಿಳಾ ವೈದ್ಯರು ಇಲ್ಲದ ಕಾರಣದಿಂದ ಬಾಲಕಿಯನ್ನು ಪಕ್ಕದ ಅರಕಲಗೂಡು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಬಾಲಕನನ್ನು ಬಾಲಮಂದಿರಕ್ಕೆ ಸೇರಿಸಿದ್ದಾರೆ. ಸೂಕ್ತ ತನಿಖೆ ನಡೆಸುವಂತೆ ಕೆಲವರು ಇಂದು ಶನಿವಾರಸಂತೆ ಪೊಲೀಸ್ ಠಾಣೆ ಮುಂದೆ ಸೇರಿ ಆಗ್ರಹಿಸಿದ್ದರು.