ಸಿದ್ದಾಪುರ, ಫೆ. 19: ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ಯಲ್ಲಿ ಮಂಗಳೂರಿನ ಅಜರ್ ಫ್ರೆಂಡ್ಸ್ ಆಳ್ವಾಸ್ ತಂಡ ಪ್ರಥಮ ಸ್ಥಾನ ಪಡೆದರೆ, ಬೆಂಗಳೂರಿನ ನವೀನ್ ಫ್ರೆಂಡ್ಸ್ ಎಂ.ಇ.ಜಿ. ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬಜೆಕೊಲ್ಲಿಯ ಸಿ.ಕೆ. ರ್ಯಾಂಬೋ ತಂಡ ಪ್ರಥಮ, ಸೋಮವಾರಪೇಟೆಯ ತಾಕೇರಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಕೊಂಡಂಗೇರಿ ಗ್ರಾಮದ ಸರ್ಕಾರಿ ಶಾಲಾ ಮೈದಾನದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ನೆಹರು ಯುವಕೇಂದ್ರ, ಎಲಿಯಂಗಾಡ್ ಫ್ರೆಂಡ್ಸ್ ಹಾಗೂ ಬುಲ್ಲೆಟ್ ಫ್ರೆಂಡ್ಸ್, ಜಿಲ್ಲಾ ವಾಲಿಬಾಲ್ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಹಾಗೂ ಜಿಲ್ಲಾಮಟ್ಟದ ಸೂರ್ಯ ಬೆಳಕಿನ ವಾಲಿಬಾಲ್ ಪಂದ್ಯಾವಳಿ ಯಲ್ಲಿ ರಾಜ್ಯಮಟ್ಟದ ಪಂದ್ಯಾವಳಿಗೆ 10 ತಂಡಗಳು ಭಾಗವಹಿಸಿದ್ದವು. ಪ್ರತಿಷ್ಠಿತ ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ಅಂತಿಮ ಪಂದ್ಯಾವಳಿಯಲ್ಲಿ ಮಂಗಳೂರು ಅಜರ್ ಫ್ರೆಂಡ್ಸ್ ಆಳ್ವಾಸ್ ತಂಡ ಹಾಗೂ ಬೆಂಗಳೂರು ನವೀನ್ ಫ್ರೆಂಡ್ಸ್ ಎಂ.ಇ.ಜಿ. ತಂಡಗಳ ನಡುವೆ ನಡೆದ ರೋಮಾಂಚಕಾರಿ ಪಂದ್ಯಾಟ ಪ್ರೇಕ್ಷಕರ ಮನರಂಜಿಸಿತು. ಫೈನಲ್ ಪಂದ್ಯಾಟದಲ್ಲಿ ಬೆಂಗಳೂರು ತಂಡವನ್ನು ಸೋಲಿಸಿದ ಮಂಗಳೂರುವಿನ ಅಜರ್ ಫ್ರೆಂಡ್ಸ್ ತಂಡವು ನಗದು ರೂ. 30 ಸಾವಿರ ಹಾಗೂ ಆಕರ್ಷಕ ಟ್ರೋಫಿ ಪಡೆದುಕೊಂಡಿತು.

ದ್ವಿತೀಯ ಸ್ಥಾನಪಡೆದ ಬೆಂಗಳೂರು ನವೀನ್ ಫ್ರೆಂಡ್ಸ್ ಎಂ.ಇ.ಜಿ. ತಂಡ ರೂ. 20,000 ನಗದು ಹಾಗೂ ಟ್ರೋಫಿ ಪಡೆದುಕೊಂಡಿತು.

ಸೂರ್ಯ ಬೆಳಕಿನ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಬಜೆಕೊಲ್ಲಿಯ ಸಿ.ಕೆ. ರ್ಯಾಂಬೋ ತಂಡ ಪ್ರಥಮ, ಸೋಮವಾರಪೇಟೆಯ ತಾಕೇರಿ ತಂಡ ದ್ವಿತೀಯ ಸ್ಥಾನಗಳಿಸಿ ನಗದು ಹಾಗೂ ಟ್ರೋಫಿ ಪಡೆದುಕೊಂಡಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಾಜಿ ಶಾಸಕ ಸಿ.ಎಸ್. ಅರುಣ್ ಮಾಚಯ್ಯ, ಕೊಡಗು ಜಿಲ್ಲೆ ಕ್ರೀಡೆಯ ತವರೂರು ಆಗಿದ್ದು, ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಅಂತಾರ್ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿಗಳು ನಡೆಯಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಸಲಾಂ, ಉಪಾಧ್ಯಕ್ಷ ಹನೀಫ್, ಜಿಲ್ಲಾ ಮುಸ್ಲಿಂ ಹಿತರಕ್ಷಣಾ ಸಮಿತಿ ಅಧ್ಯಕ್ಷ ಹನೀಫ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಯಾಕೂಬ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹನೀಫ್ ಸಂಪಾಜೆ, ಯುವ ಕಾಂಗ್ರೆಸ್ ಮುಖಂಡರುಗಳಾದ ಜಮ್ಮಡ ಸೋಮಣ್ಣ, ಶಾಫಿ, ಹಂಸ ಕೊಟ್ಟಮುಡಿ, ಜೈನುದ್ದೀನ್, ಪ್ರಮೋದ್ ಗಣಪತಿ, ಸಾದಲಿ, ಮಂಜು, ಎಲಿಯಂಗಾಡ್ ಫ್ರೆಂಡ್ಸ್ ಹಾಗೂ ಬುಲ್ಲೆಟ್ ಫ್ರೆಂಡ್ಸ್ ಯುವಕ ಸಂಘದ ಅಧ್ಯಕ್ಷ ಅಂದಾಯಿ ಹಾಗೂ ಇನ್ನಿತರರು ಹಾಜರಿದ್ದರು.