ಗೋಣಿಕೊಪ್ಪಲು, ಫೆ. 19: ರೈತ ನಾಯಕ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಎಸ್.ಪುಟ್ಟಣಯ್ಯ ಹೃದಯ ಘಾತದಿಂದ ನಿಧನರಾದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ರೈತ ಕೊಡಗು ಜಿಲ್ಲಾ ಘಟಕದ ವತಿಯಿಂದ ಗೋಣಿಕೊಪ್ಪಲಿನ ಸಂಘದ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ಮೌನ ಆಚರಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಸಂಚಾಲಕ ಚಿಮ್ಮಂಗಡ ಗಣೇಶ್ ಕೆ.ಎಸ್.ಪುಟ್ಟಣಯ್ಯ ಅವರ ನಿಧನದಿಂದ ರೈತರ ಹೋರಾಟದ ಕೊಂಡಿ ಕಳಚಿದಂತಾಗಿದೆ. ರೈತರ ಪರವಾಗಿ ಧ್ವನಿ ಎತ್ತುತ್ತಿದ್ದ ಇವರ ನಿಧನ ನಾಡಿನ ರೈತರಿಗೆ ತುಂಬಲಾರದ ನಷ್ಟವಾಗಿದೆ. ಕಾವೇರಿ ಹೋರಾಟದಲ್ಲಿ ಸಕ್ರೀಯವಾಗಿದ್ದ ಪುಟ್ಟಣಯ್ಯ ತಮ್ಮ ಜೀವನದುದ್ದಕ್ಕೂ ರೈತರ ಪರ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರ ಸರಳತೆ ನಮ್ಮೆಲ್ಲರಿಗೂ ಮಾದರಿ ಎಂದು ಹೇಳಿದರು. ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಣ್ಣ ಮಾತನಾಡಿ ಜಿಲ್ಲೆಯಲ್ಲಿ ರೈತ ಹೋರಾಟಕ್ಕಾಗಮಿಸಿ ರೈತರಲ್ಲಿ ಹೋರಾಟದ ಕಿಚ್ಚನ್ನು ತೋರಿಸಿಕೊಟ್ಟ ವ್ಯಕ್ತಿ ಪುಟ್ಟಣ್ಣಯ್ಯನವರನ್ನು ಕಳೆದುಕೊಂಡಿರುವದು ದುಃಖದ ವಿಷಯ ಎಂದರು. ಸಂತಾಪ ಸಭೆಯಲ್ಲಿ ರೈತ ಸಂಘದ ಮುಖಂಡರಾದ ಬಾಚಮಾಡ ಭವಿ ಕುಮಾರ್,ತೀತರಮಾಡ ರಾಜ, ಅಶ್ರಫ್, ಸಿದ್ದಿಕ್ ಮೊದಲಾದವರು ಪಾಲ್ಗೊಂಡಿದ್ದರು.

ಸಂತಾಪ: ರೈತರ ಕಣ್ಮಣಿಯಾಗಿದ್ದ ಕೆ.ಎಸ್.ಪುಟ್ಟಣ್ಣಯ್ಯನವರ ನಿಧನವು ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಸರಳ ವ್ಯಕ್ತಿತ್ವದ ಇವರ ಜೀವನ ಎಲ್ಲರಿಗೂ ಮಾದರಿಯಾಗಲಿ ಎಂದು ಕೊಡಗು ಜಿಲ್ಲಾ ಜೆಡಿಎಸ್‍ನ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.