ಮಡಿಕೇರಿ, ಫೆ. 19: ಜಿಲ್ಲೆಯಾದ್ಯಂತ ವಿದ್ಯುತ್ ವಿತರಣೆಗೆ ನಿರ್ಮಿಸಿರುವ ಮಾರ್ಗಗಳ ಬಹುಭಾಗ ತೋಟಗಳಲ್ಲಿ ಮರಗಿಡಗಳ ಮಧ್ಯದಲ್ಲಿ ಹಾದು ಹೋಗಿದ್ದು, ಮರಗಳ ರೆಂಬೆ ಕೊಂಬೆಗಳ ಬೀಳುವಿಕೆಯಿಂದಾಗಿ ಕಂಬಗಳು ಬಾಗಿ, ತಂತಿಗಳು ಕೆಳಮಟ್ಟಕ್ಕಿಳಿದಿದೆ. ಇದರಿಂದಾಗಿ ವಿದ್ಯುದಾಘಾತಗಳಾಗುವ ಸಂಭವವಿರುತ್ತದೆ. ಆದ್ದರಿಂದ ಅಪಾಯ ಮಟ್ಟದಲ್ಲಿರುವ ವಿದ್ಯುತ್ ತಂತಿಗಳು, ಶಿಥಿಲಗೊಂಡಿರುವ ಕಂಬಗಳು ಕಂಡುಬಂದರೆ ಚೆಸ್ಕಾಂ ಅಧಿಕಾರಿಗಳಿಗೆ ಸಾರ್ವಜನಿಕರು ದೂರು ನೀಡಲು ಕೋರಲಾಗಿದೆ.

ತೋಟಗಳಲ್ಲಿ ಒಳ್ಳೆ ಮೆಣಸು ಕೀಳಲು ಮತ್ತು ಮರದ ಕೊಂಬೆಗಳನ್ನು ಕಡಿಯಲು ಅಲ್ಯೂಮಿನಿಯಂ ಏಣಿಗಳನ್ನು ಮತ್ತು ನೀರು ಹಾಯಿಸಲು ಅಲ್ಯೂಮಿನಿಯಂ ಸ್ಪ್ರಿಂಕ್ಲರ್ ಪೈಪ್‍ಗಳನ್ನು ಉಪಯೋಗಿಸುತ್ತಿದ್ದು, ಇವುಗಳು ವಿದ್ಯುತ್ ಮಾರ್ಗಕ್ಕೆ ತಾಗಿ ಆಗಿಂದಾಗ್ಗೆ ವಿದ್ಯುತ್ ಅಪಘಾತಗಳು ಸಂಭವಿಸುತ್ತಿದೆ. ಅಲ್ಯೂಮಿನಿಯಂ ಏಣಿ ಮತ್ತು ಸ್ಪ್ರಿಂಕ್ಲರ್ ಪೈಪ್‍ಗಳನ್ನು ಉಪಯೋಗಿಸುವಾಗ ಜಾಗ್ರತೆ ವಹಿಸಿ ವಿದ್ಯುತ್ ಅಪಘಾತಗಳನ್ನು ತಡೆಗಟ್ಟಲು ಇಲಾಖೆಯೊಂದಿಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಕಾರ್ಯಪಾಲಕ ಚೆಸ್ಕಾಂ ಅಭಿಯಂತರರು ಸಲಹೆ ನೀಡಿದ್ದಾರೆ.