ಸೋಮವಾರಪೇಟೆ, ಫೆ. 19: ತಾಲೂಕಿನಲ್ಲಿ ಒತ್ತುವರಿ ಹಾಗೂ ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿಯ ಹಕ್ಕುಪತ್ರವನ್ನು ವಿತರಿಸಲು ವಿಳಂಬಧೋರಣೆ ಅನುಸರಿಸ ಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಪದಾಧಿಕಾರಿಗಳು ಶಾಸಕರ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.

ಅಕ್ರಮ ಸಕ್ರಮ ಸಮಿತಿ ಹಾಗೂ ತಹಶೀಲ್ದಾರ್ ಹೆಚ್ಚು ಮುತುವರ್ಜಿ ವಹಿಸಿ ಬಡವರಿಗೆ, ರೈತರಿಗೆ ಹಕ್ಕುಪತ್ರಗಳನ್ನು ನೀಡುವಂತೆ ರಾಜ್ಯ ಸರ್ಕಾರ ಹಾಗೂ ಕಂದಾಯ ಮಂತ್ರಿ ಕಾಗೋಡು ತಿಮ್ಮಪ್ಪ ಅವರು ಮನವಿ ಮಾಡಿಕೊಂಡರೂ, ಹಕ್ಕುಪತ್ರ ವಿತರಣೆಯಲ್ಲಿ ವಿಳಂಬಧೋರಣೆ ಅನುಸರಿಸುತ್ತಿರುವದು ಖಂಡನೀಯ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ವೇದಿಕೆಯ ಜಿಲ್ಲಾ ಸಂಚಾಲಕ ಸುನಂದಾ ಕುಮಾರ್ ಹೇಳಿದರು.ಅಕ್ರಮ ಸಕ್ರಮ ಸಮಿತಿಯಲ್ಲಿ ಇತ್ಯರ್ಥ ಆಗಬೇಕಾದ 8466 ಅರ್ಜಿಗಳು ಇನ್ನೂ ಕಚೇರಿಯಲ್ಲಿ ಧೂಳು ತಿನ್ನುತ್ತಿವೆ. ಇನ್ನಾದರೂ ವಾರಕ್ಕೆರಡು ಸಮಿತಿ ಸಭೆಗಳನ್ನು ಕರೆದು ಹಕ್ಕುಪತ್ರಗಳನ್ನು ವಿತರಿಸಬೇಕು ಎಂದು ಆಗ್ರಹಿಸಿದರು. ವಿಧಾನಸಭೆ ಚುನಾವಣೆಯ ತಯಾರಿಯಲ್ಲಿ ಅಕ್ರಮ ಸಕ್ರಮ ಸಮಿತಿ ಸಭೆಯನ್ನು ಕರೆಯಲು ವಿಳಂಬ ಮಾಡಿದರೆ, ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರು. ಅಕ್ರಮ ಸಕ್ರಮ ಸಮಿತಿ ಸಭೆಗಳನ್ನು ಪ್ರತಿ ಶನಿವಾರ ನಡೆಸಿ ಸಾಗುವಳಿದಾರರಿಗೆ ಆದ್ಯತೆ ಮೇರೆಗೆ ಭೂಮಿ ಹಕ್ಕುಪತ್ರ ನೀಡಬೇಕು, ಸಿ ಮತ್ತು ಡಿ, ಗೋಮಾಳ ಜಮೀನುಗಳಿಗೆ ನಿಯಮಾನುಸಾರ ಹಕ್ಕುಪತ್ರ ನೀಡಿ ಕೃಷಿಗೆ ಒತ್ತು ನೀಡುವದು, ಬಗರ್‍ಹುಕುಂ ಸಾಗುವಳಿದಾರರಿಗೆ ನಿಖರ ಮಾಹಿತಿಗಳು ಮತ್ತು ಪ್ರಗತಿ ಪರಿಶೀಲನಾ ವರದಿಗಳನ್ನು ಕಂಪ್ಯೂಟರೀಕರಣಗೊಳಿಸಿ ರೈತರಿಗೆ ಸಕಾಲದಲ್ಲಿ ಮಾಹಿತಿ ನೀಡುವದು. ಅಕ್ರಮ ಸಕ್ರಮ ಸಭೆಗಳಲ್ಲಿ ಮಂಜೂರಾತಿಯಾಗಿರುವ ಭೂಮಿಗೆ ಕೂಡಲೇ ಸಾಗುವÀಳಿ ಚೀಟಿ ನೀಡುವದು ಸೇರಿದಂತೆ ಹಲವು ಬೇಡಿಕೆಗಳ ಮನವಿ ಪತ್ರವನ್ನು ಶಾಸಕರ ಕಚೇರಿ ಹಾಗೂ ತಹಶೀಲ್ದಾರ್ ಮಹೇಶ್ ಅವರಿಗೆ ಸಲ್ಲಿಸಿದರು. ಈ ಸಂದರ್ಭ ವೇದಿಕೆಯ ಅಧ್ಯಕ್ಷ ಎಸ್.ಕೆ. ಪುಟ್ಟಸ್ವಾಮಿ, ಸಂಚಾಲಕ ಎಚ್.ಸಿ. ಗೋವಿಂದ, ತಾಲೂಕು ಘಟಕದ ಅಧ್ಯಕ್ಷ ವೈ.ಬಿ. ಚಂದ್ರು. ಚಿಕ್ಕತೋಳೂರು ಗ್ರಾಮದ ಸಂತೋಷ್, ಸುಶೀಲಮ್ಮ ಯಲಕನೂರು ಗ್ರಾಮದ ವೈ.ಬಿ. ಚನ್ನಬಸಪ್ಪ, ರಾಧಾ ಕೃಷ್ಣ, ಪ್ರೇಮ ಮತ್ತಿತರರು ಇದ್ದರು.