ಮಡಿಕೇರಿ, ಫೆ. 20: ಸರ್ವಜ್ಞ ಸರ್ವರಲ್ಲೂ ಒಂದೊಂದು ಕಲಿತು ಸರ್ವಜ್ಞನಾದ, ತನ್ನ ಜ್ಞಾನಭಂಡಾರದ ಮೂಲಕ ಗುರಿತಿಸಿಕೊಂಡು ಸರ್ವಜ್ಞ ಹೆಸರು ಪಡೆದ ಎಂದು ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷ ಟಿ.ಪಿ.ರಮೇಶ್ ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಕೋಟೆ ಹಳೇ ವಿಧಾನಸಭಾ ಸಭಾಂಗಣದಲ್ಲಿ ನಡೆದ ಕವಿ ಸರ್ವಜ್ಞ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕನ್ನಡನಾಡಿನ ಕವಿ ವಾಣಿ ಜನರನ್ನು ತನ್ನ ಜ್ಞಾನದಿಂದ ಸಂಪಾದಿಸಿದವರು ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ಯುಗ ಪುರುಷ ಇಡೀ ವಿಶ್ವಕ್ಕೆ ಮಾದರಿಯಾದವರು ಸಮಾಜ ಕಂದಚಾರ ವಿರುದ್ಧ ಜನರಿಗೆ ತನ್ನ ವಚನಗಳ ಮೂಲಕ ತಿಳಿಸಿದವರು ಸರ್ವಜ್ಞ ಎಂದು ಟಿ.ಪಿ.ರಮೇಶ್ ತಿಳಿಸಿದರು.
ರಾಜನಾಗಿ ಸಾಮ್ರಾಜ್ಯ ಆಳಿದ ಮಹಾನ್ ಚಕ್ರವರ್ತಿ ತನ್ನ ಆಡಳಿತದಲ್ಲಿ ಸಮಾನತೆ ಸಮಾಜ ಕಟ್ಟಬೇಕು ಜನರಿಗೆ ಸಾಮಾಜಿಕ ನ್ಯಾಯ ನೀಡಬೇಕು ಎನ್ನುವ ಆಶಯ ಶಿವಾಜಿಯದಾಗಿತ್ತು ಎಂದರು. ತನ್ನ ಸೈನಿಕರಿಗೆ ಯುದ್ಧಕ್ಕೆ ಹೋಗುವ ಮುನ್ನ ದಾರಿಯಲ್ಲಿ ಮಸೀದಿ, ಚರ್ಚ್, ಕಂಡರೆ ನಮಸ್ಕರಿಸಿ ಹೋಗಿ ಎಂದು ಹೇಳುತ್ತಿದ್ದರು. ತನ್ನ ಸೈನಿಕರಿಗೆ ಗೆರಿಲ್ಲಾ ಯುದ್ಧ ತಂತ್ರವನ್ನು ಹೇಳಿಕೊಟ್ಟಿದ್ದರು. ದೇಶದ ಆಗುಹೋಗುಗಳ ಬಗ್ಗೆ ಚಿಂತನೆ ಮಾಡುತ್ತಿದ್ದವರು ಶಿವಾಜಿ ಎಂದು ಹೇಳಿದರು.
ನಗರಸಭೆ ಅಧಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ 16 ನೇ ಶತಮಾನದ ತ್ರಿಪದಿ ಕವಿ ಮೂಢನಂಬಿಕೆ ಕಂದಾಚಾರ ಇದರ ಬಗ್ಗೆ ಜನರಿಗೆ ತಿಳಿಸಿದನು. ಸರ್ವಜ್ಞ ಗರ್ವದಿಂದ ಅದವನಲ್ಲ, ಸರ್ವರಲ್ಲೂ ಒಂದೊಂದು ಕಲಿತು ಸರ್ವಜ್ಞನಾದ ಎಂದು ಹೇಳಿದರು.
ಶಿವಾಜಿ ಉತ್ತಮ ಆಡಳಿತಗಾರ ರಾಜತಾಂತ್ರಿಕ ನಿಪುಣ. ತನ್ನ ಬುದ್ದಿ ಶಕ್ತಿಯಿಂದಲೇ ಒಂದು ಸೈನ್ಯವನ್ನು ನಿರ್ಮಾಣ ಮಾಡಿ ವಿರೋಧಿಗಳಿಗೆ ಸಿಂಹಸ್ವಪ್ನವಾಗಿದ್ದವನು. ಹಾಗೆಯೇ ತನ್ನ ಆಸ್ಥಾನದಲ್ಲಿ ಅಷ್ಟ ಮಾರ್ಗಗಳನ್ನು ಅನುಸರಿಸಿ ಸಮಾಜದ ಏಳಿಗೆಗೆ ಸಹಕರಿಸಿದನು ಎಂದು ತಿಳಿಸಿದರು.
ಸರಸ್ವತಿ ಡಿ.ಎಡ್.ಕಾಲೇಜಿನ ಪ್ರಾಂಶುಪಾಲ ಕುಮಾರ್ ಮಾತನಾಡಿ 16 ನೇ ಶತಮಾನದ ಗೆರಿಲ್ಲಾ ತಂತ್ರದ ರೂವಾರಿ ಅಖಂಡ ಭಾರತವನ್ನು ಒಗ್ಗೂಡಿಸುವ ಕನಸು ಶಿವಾಜಿಯದಾಗಿತ್ತು. ಸರ್ಕಾರದ ಬೆಳವಣಿಗೆಗೆ ನೀತಿ ನಿಯಮಗಳನ್ನು ನೀಡುತ್ತಿದ್ದ ಅಂದು ಶಿವಾಜಿ ದೇಶದ ಅಭಿವೃದ್ಧಿಗೆ 36 ಕಾನೂನುಗಳನ್ನು ಮಾಡಿದ್ದ ಎಂದು ತಿಳಿಸಿದರು.
ಸರ್ವಜ್ಞ ಎಂದರೆ ಜ್ಞಾನಿ ಎಲ್ಲವನ್ನೂ ತಿಳಿದವನು, ಸರ್ವಜ್ಞ ಸಂಶೋಧನೆ ಮಾಡಿಲ್ಲ, ಯುದ್ಧ ಮಾಡಿಲ್ಲ, ಸಾಮಾನ್ಯ ಮನುಷ್ಯನಾಗಿ ಬದುಕಿನ ಸಾರವನ್ನು ತಿಳಿದು ದೇಶಕ್ಕೆ ತ್ರಿಪದಿಯಲ್ಲಿ ವಚನ ಸಾಹಿತ್ಯವನ್ನು ನೀಡಿದನು ಎಂದು ತಿಳಿಸಿದರು. ಕುಲಾಲ ಸಂಘದ ಜಿಲ್ಲಾಧ್ಯಕ್ಷ ನಾಣಯ್ಯ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಜಿ.ಪಂ.ಯೋಜನಾ ನಿರ್ದೇಶಕ ಸಿದ್ದಲಿಂಗಸ್ವಾಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಮಂಜುನಾಥ್ ಇತರರು ಇದ್ದರು.