ಸೋಮವಾರಪೇಟೆ,ಫೆ.20: ಅರ್ಹರಾಗಿದ್ದರೂ ಗ್ರಾಮ ಪಂಚಾಯಿತಿಯಿಂದ ಮನೆ ಸಿಗದ ಹಿನ್ನೆಲೆ ಬೇಸತ್ತ ಗ್ರಾಮಸ್ಥರು ಮಾದಾಪುರ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ ನಂತರ ಇದೀಗ ಮನೆ ಕಲ್ಪಿಸಲು ಪಂಚಾಯಿತಿ ಆಡಳಿತ ಮುಂದಾಗಿದೆ.

ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬೂರು ಮತ್ತು ಇಗ್ಗೋಡ್ಲು ಗ್ರಾಮಗಳ ಸುಮಾರು 10 ಮಂದಿ ಫಲಾನುಭವಿಗಳು ಮನೆಗಾಗಿ ಮಾದಾಪುರ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರೂ ಯಾವದೇ ಪ್ರಯೋಜನವಾಗಿರಲಿಲ್ಲ.

ಈ ಮಧ್ಯೆ ಮನೆಗಳನ್ನು ನೀಡಲು ಪಂಚಾಯಿತಿಯ ಕೆಲ ಸದಸ್ಯರು ಹಣ ಪಡೆದುಕೊಂಡಿದ್ದರೂ ಮನೆ ನೀಡಿಲ್ಲ ಎಂಬ ಆರೋಪ ವ್ಯಕ್ತಗೊಂಡ ನಂತರ ಫಲಾನುಭವಿಗಳಿಗೆ ಹಣವನ್ನು ವಾಪಸ್ ಕೊಡಿಸಲಾಗಿತ್ತು. ನಂತರ ಶಾಸಕರ ಕೋಟಾದಿಂದ ಮನೆ ನೀಡಲು ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರೂ ಕೆಲ ಸದಸ್ಯರು ತಡೆಹಿಡಿದು ಅನಗತ್ಯ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿ ಮಾದಾಪುರ ಗ್ರಾ.ಪಂ. ಮಾಜೀ ಅಧ್ಯಕ್ಷ ಭಾಸ್ಕರ್ ಸಾಯಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದ ಹಿನ್ನೆಲೆ ಸ್ಥಳಕ್ಕಾಗಮಿಸಿದ ಅಧಿಕಾರಿ ಚಂದ್ರಶೇಖರ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಪ್ರತಿಭಟನಾಕಾರರ ಮನವಿ ಆಲಿಸಿದರು.

ಸರ್ಕಾರದ ಆಶ್ರಯ ಯೋಜನೆಯಡಿ ಮನೆ ಕಲ್ಪಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಯಾವದೇ ಸ್ಪಂದನೆ ನೀಡುತ್ತಿಲ್ಲ. ಕೆಲ ಸದಸ್ಯರು ನಮ್ಮ ಅರ್ಜಿಯನ್ನು ವಿಲೇವಾರಿ ಮಾಡಲು ಬಿಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.

ಈ ಬಗ್ಗೆ ಗ್ರಾ.ಪಂ. ಸಭಾಂಗಣದಲ್ಲಿ ಚರ್ಚೆ ನಡೆಸಿದ ನಂತರ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್, ಉಪಾಧ್ಯಕ್ಷ ಅಭಿಮನ್ಯುಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಂಬಂಧಿಸಿದ ಫಲಾನುಭವಿಗಳ ಮನೆಗೆ ತೆರಳಿ ವಾಸ್ತವಾಂಶವನ್ನು ಅರಿತುಕೊಂಡರು. ಸ್ಥಳದಲ್ಲಿಯೇ ಮನೆ ಹಾಗೂ ಫಲಾನುಭವಿಗಳ ಭಾವಚಿತ್ರ ತೆಗೆದರು. ಆಶ್ರಯ ಯೋಜನೆಯಡಿ ಇವರುಗಳ ಹೆಸರು ನೋಂದಾಯಿಸುವಂತೆ ಪಿಡಿಓ ಪರಮೇಶ್ ಶೋಭಾ, ಚಂದ್ರ, ಲಲಿತಾ, ಕಾವ್ಯ, ಹೇಮಾವತಿ, ಸರಸು ಸೇರಿದಂತೆ ಇತರ ಹತ್ತು ಮಂದಿಗೆ ಮನೆ ಒದಗಿಸಲು ಕ್ರಮ ಕೈಗೊಳ್ಳುವ ಬಗ್ಗೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮತ್ತು ಉಪಾಧ್ಯಕ್ಷರು ಭರವಸೆ ನೀಡಿದ್ದಾರೆ ಎಂದು ಗ್ರಾ.ಪಂ. ಮಾಜೀ ಅಧ್ಯಕ್ಷ ಭಾಸ್ಕರ್ ಸಾಯಿ ತಿಳಿಸಿದರು.