ಮಡಿಕೇರಿ, ಫೆ.20 : ಬಿಳಿಗೇರಿ ಗ್ರಾಮದ ಶ್ರೀ ಪನ್ನಂಗಾಲತಮ್ಮೆ ದೇವಾಲಯದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ತಾ. 23 ರಿಂದ 25ರ ವರೆಗೆ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಾಲಯ ಸಮಿತಿಯ ಸದಸ್ಯ ಎಂ.ಬಿ. ಜೋಯಪ್ಪ ಹಾಗೂ ಇತರರು ಮೂರು ದಿನಗಳ ಕಾಲ ನಡೆಯುವ ವಿವಿಧ ಧಾರ್ಮಿಕ ವಿಧಿ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ತಾ. 23 ರಂದು ಕೇರಳದ ಕಾಳೆಗಾಟ್ ಇಲ್ಲತ್ನ ಸಂದೀಪ್ ನಂಬೂದರಿ ಪಾಡ್ ಅವರ ನೇತೃತ್ವದಲ್ಲಿ ಶ್ರೀ ಪನ್ನಂಗಾಲತಮ್ಮೆ, ಶ್ರೀ ಅಯ್ಯಪ್ಪ, ಶ್ರೀ ಕರಿಚಾವುಂಡಿ, ಶ್ರೀ ಪುಲಿಚಾವುಂಡಿ, ಶ್ರೀ ಕರುಂದ, ಶ್ರೀ ಕುದರೆ ದೇವರುಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಇನ್ನಿತರ ದೇವತಾ ಕಾರ್ಯಕ್ರಮಗಳು ನಡೆಯಲಿವೆ. ಅಂದು ಸಂಜೆ 5 ಗಂಟೆಗೆ ಆಚಾರ ವರಣ, ಪಂಚ ಪುಣ್ಯಾಹ, ಪ್ರಸಾದ ಶುದ್ಧಿಯಾದಿ ಕರ್ಮಗಳು ಹಾಗೂ ರಾತ್ರಿ ವಿಶೇಷ ಪೂಜೆಗಳು ಜರುಗಲಿವೆ.
ತಾ. 24 ರಂದು ಬೆಳಗ್ಗೆ 7 ಗಂಟೆಯಿಂದ ಗಣಪತಿ ಹೋಮ, ಬಿಂಬಶುದ್ಧಿ ಕಲಶ ಪೂಜೆ, ಬಿಂಬಶುದ್ದಿ ಕಲಶಾಭಿಷೇಕ, ಅನುಜ್ಞಾ ಕಲಶಪೂಜೆ, ಅನುಜ್ಞಾ ಕಲಶಾಭಿಷೇಕ, ಜೀವೊದ್ವಾಸನ, ಜೀವಕಲಶ, ಶಯ್ಯಯಿಲೇಕ್ ಏಳ್ಳನಯಿಕಲ್ ನಡೆಯಲಿದೆ. ತಾ.25 ರಂದು ಬೆಳಗ್ಗೆ 5 ಗಂಟೆಗೆ ಗಣಪತಿ ಹೋಮ, ಆದಿವಾಸ ಪೂಜೆ, ಪ್ರಸಾದ ಪ್ರತಿಷ್ಠೆ ನಡೆಯಲಿದ್ದು, ಸಂಜೆ 6 ಗಂಟೆಗೆ ಅದಿವಾಸ ಹೋಮ, ಬ್ರಹ್ಮಕಲಶ ಪೂಜೆ, ಧಾನ್ಯಾದಿವಾಸ ನೆರವೇರಲಿದೆ. ಅಂದು ಸಂಜೆ 6.50 ರಿಂದ 7.50ರ ಶುಭ ಮುಹೂರ್ತದಲ್ಲಿ ಶ್ರೀ ದೇವಿಯ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಮಹಾಪೂಜೆ ನಡೆಯಲಿದ್ದು, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆಯಾಗಲಿದೆ.
ಬ್ರಹ್ಮಕಲಶಾಭಿಷೇಕದ ನಂತರ ವಾರ್ಷಿಕ ಉತ್ಸವ ಆರಂಭಗೊಳ್ಳಲಿದ್ದು, ಫೆ. 25ರ ಸಂಜೆ ಮಂಜು ಬೀಳುವದು, ತಾ. 26 ರಂದು 1 ಗಂಟೆಯಿಂದ ಕುದುರೆ ಹಬ್ಬ, ದೇವರು ಬಲಿ ಬರುವದು, 27 ರಂದು ಕುರುಂದ ಹಬ್ಬ ಹಾಗೂ ದೇವರು ಬಲಿ ಬರುವದು, ದೇವರ ಬೇಟೆ, ದೇವರ ಜಳಕ ಕಾರ್ಯ ನಡೆಯಲಿದೆ ಎಂದು ಜೋಯಪ್ಪ ಮಾಹಿತಿ ನೀಡಿದರು.
ರೂ.25 ಲಕ್ಷ ವೆಚ್ಚ
ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ರೂ.25 ಲಕ್ಷ ಖರ್ಚಾಗಿದ್ದು, ಶೇ.90ರಷ್ಟು ಕಾರ್ಯಗಳು ಪೂರ್ಣಗೊಂಡಿವೆ. ಬಿಳಿಗೇರಿ ಗ್ರಾಮದಲ್ಲಿ ದೇವಾಲಯಗಳ ನಿರ್ಮಾಣದಲ್ಲಿ ಮಹತ್ತರ ಸಾಧನೆಯನ್ನೇ ಮಾಡಿದ್ದು, 2007ರಲ್ಲಿ ರೂ. 1 ಕೋಟಿ ವೆಚ್ಚದಲ್ಲಿ ಶ್ರೀ ಅರ್ಧನಾರೀಶ್ವರ ದೇವಾಲಯವನ್ನು ನಿರ್ಮಿಸಲಾಗಿದೆ. ಅಲ್ಲದೆ 2008ರಲ್ಲಿ ರೂ.10 ಲಕ್ಷ ವೆಚ್ಚದಲ್ಲಿ ಶ್ರೀ ವಿಷ್ಣುಮೂರ್ತಿ ದೇವಾಲಯ ಹಾಗೂ 2013ನೇ ಸಾಲಿನಲ್ಲಿ ರೂ.80 ಲಕ್ಷ ವೆಚ್ಚದಲ್ಲಿ ಶ್ರೀ ಭಗವತಿ ದೇವಾಲಯ ಹಾಗೂ ಶ್ರೀ ಭದ್ರಕಾಳಿ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಪ್ರಮುಖರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದೇವಾಲಯದ ಅಧ್ಯಕ್ಷ ದಂಬೆಕೋಡಿ ಎಸ್. ಪ್ರೇಮ್, ತಕ್ಕ ಕೋಟೇರ ಶರಿ ಮುದ್ದಪ್ಪ, ಕಾರ್ಯದರ್ಶಿ ಪರ್ಲಕೋಟಿ ನಂದಾ ಉತ್ತಪ್ಪ ಹಾಗೂ ಸದಸ್ಯ ಉಮೇಶ್ ಅಪ್ಪಣ್ಣ ಉಪಸ್ಥಿತರಿದ್ದರು.