ಮಡಿಕೇರಿ, ಫೆ. 20: ಗ್ರಾಮೀಣ ಯುವಕರನ್ನು ಕೃಷಿಯ ಕಡೆಗೆ ಆಕರ್ಷಿಸಲು, ಸ್ಥಳಿಯವಾಗಿ ಸಣ್ಣ ಕೃಷಿ ಉಪಕರಣಗಳ ತಯಾರಿಕೆ ಸೌಲಭ್ಯದೊಂದಿಗೆ ಕೃಷಿ ಯಂತ್ರಗಳ ಬಳಕೆಯನ್ನು ಪ್ರೋತ್ಸಾಹಿಸಲು ಮತ್ತು ಯುವ ರೈತರನ್ನು ಕೃಷಿಯಲ್ಲೇ ಉಳಿಸಿಕೊಳ್ಳುವಲ್ಲಿ ಉದ್ಯೋಗವಕಾಶ ಸೃಷ್ಟಿಸುವ ನಿಟ್ಟಿನಲ್ಲಿ ಗ್ರಾಮೀಣ ಕೃಷಿ ಯಂತ್ರೋಪಕರಣ ಸೇವಾ ಕೇಂದ್ರಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಉಪ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಕೃಷಿ ಯಂತ್ರೋಪಕರಣಗಳು, ಪಂಪ್‍ಸೆಟ್‍ಗಳು, ಬೋರ್‍ವೆಲ್‍ಗಳು ಹಾಗೂ ಸೂಕ್ಷ್ಮ ನೀರಾವರಿ ಘಟಕಗಳು ದುರಸ್ತಿಗೆ ಒಳಗಾದಲ್ಲಿ ಇವುಗಳನ್ನು ರಿಪೇರಿ ಮಾಡುವ ಸೌಲಭ್ಯಗಳು ಜಿಲ್ಲಾ ಮಟ್ಟದಲ್ಲಿ ಲಭ್ಯವಿದ್ದು, ರೈತರು ಹೋಬಳಿ, ತಾಲೂಕುಗಳಿಂದ ಜಿಲ್ಲಾ ಕೇಂದ್ರಗಳಿಗೆ ಬರಬೇಕಾಗಿರುತ್ತದೆ.

ರೈತರಿಗೆ ಈ ಎಲ್ಲಾ ಸೌಲಭ್ಯಗಳನ್ನು ಸ್ಥಳೀಯವಾಗಿ ಒದಗಿಸಲು ಪ್ರಾರಂಭಿಕವಾಗಿ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚು ಇರುವ ಹೋಬಳಿಯಲ್ಲಿ ಗ್ರಾಮೀಣ ಕೃಷಿ ಯಂತ್ರೋಪಕರಣ ಸೇವಾ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೃಷಿ ಇಂಜಿನಿಯರಿಂಗ್ ಡಿಪ್ಲೊಮೋ, ಕೃಷಿಯಲ್ಲಿ ಡಿಪ್ಲೊಮೋ, ಆಟೋಮೊಬೈಲ್ ಡಿಪ್ಲೊಮೋ, ಮೆಕಾನಿಕಲ್ ಡಿಪ್ಲೊಮೋ, ಐಟಿಐ, ಪಿ.ಯು.ಸಿ. ತೇರ್ಗಡೆ ಹೊಂದಿರುವ ಗ್ರಾಮೀಣ ಯುವಕರಾಗಿರಬೇಕು ಹಾಗೂ ರೈತ ಕುಟುಂಬಕ್ಕೆ ಸೇರಿದವರಾಗಿರಬೇಕು.

ಕೃಷಿ ವಿಶ್ವ ವಿದ್ಯಾನಿಲಯದಿಂದ ಕೃಷಿ ಯಂತ್ರೋಪಕರಣಗಳ ದುರಸ್ತಿ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ತರಬೇತಿ ಪಡೆದಿರುವ ಬಗ್ಗೆ ಪ್ರಮಾಣ ಪತ್ರ ಹೊಂದಿರಬೇಕು. ಅಭ್ಯರ್ಥಿಗಳ ವಯಸ್ಸು ಕನಿಷ್ಟ 18 ವರ್ಷ ಮತ್ತು ಗರಿಷ್ಠ 45 ವರ್ಷ ಮೀರಿರಬಾರದು. ಸ್ಥಳೀಯ ಅಭ್ಯರ್ಥಿಗಳನ್ನು ಪರಿಗಣಿಸಲಾಗುವದು.

ಕೇಂದ್ರಗಳಲ್ಲಿ ಟ್ರ್ಯಾಕ್ಟರ್, ಪವರ್ ಟಿಲ್ಲರ್, ಪಂಪ್‍ಸೆಟ್, ಸಸ್ಯ ಸಂರಕ್ಷಣಾ ಉಪಕರಣಗಳು, ಸೂಕ್ಷ್ಮ ನೀರಾವರಿ ಘಟಕಗಳು ಮತ್ತು ಬೋರ್‍ವೆಲ್‍ಗಳ ದುರಸ್ತಿ ಒಳಗೊಂಡಂತೆ ಕೃಷಿ ಚಟುವಟಿಕೆಗಳಿಗೆ ಬೇಕಾದ ಎಲ್ಲಾ ಯಂತ್ರೋಪಕರಣಗಳನ್ನು ಮಾಡುವಂತಿರಬೇಕು. ಹೆಚ್ಚಿನ ಮಾಹಿತಿಗೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.