ಮಡಿಕೇರಿ, ಫೆ. 20: ತಿರುಮಲ ತಿರುಪತಿ ದೇವಸ್ಥಾನ ಸಮಿತಿಯ ವತಿಯಿಂದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವವನ್ನು ತಾ. 25 ರಂದು ಕುಶಾಲನಗರದ ಬೈಚನ ಹಳ್ಳಿಯಲ್ಲಿ ನಡೆಸಲು ಕುಶಾಲನಗರ ದೇವಸ್ಥಾನಗಳ ಒಕ್ಕೂಟ ನಿರ್ಧರಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಸ್ಥಾನಗಳ ಒಕ್ಕೂಟದ ಅಧ್ಯಕ್ಷ ಎಂ.ಕೆ. ದಿನೇಶ್, ಶ್ರೀ ಶ್ರೀನಿವಾಸ ಕಲ್ಯಾಣೋತ್ಸವವನ್ನು ಕುಶಾಲನಗರದ ಎಲ್ಲಾ ದೇವಸ್ಥಾನಗಳ ಒಕ್ಕೂಟದ ಸಹಕಾರದೊಂದಿಗೆ ನಡೆಸಲಾಗುತ್ತಿದೆ. ಅಂದು ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಶ್ರೀ ಅಣ್ಣಮ್ಮಯ್ಯ ಸ್ವಾಮಿಯ ಸಂಕೀರ್ತನೆ, ಹರಿಕಥೆ, ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಶ್ರೀನಿವಾಸ ಕಲಿಯುಗದ ಪ್ರಸಿದ್ಧ ದೇವರಾಗಿದ್ದು, ಭಾರತೀಯರು ಮಾತ್ರವಲ್ಲದೆ ಪ್ರಪಂಚದಾದ್ಯಂತ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಶ್ರೀ ತಿರುಮಲ ತಿರುಪತಿಯ ದರ್ಶನ ಪಡೆದು ಆಶೀರ್ವಾದ ಪಡೆಯುತ್ತಾರೆ. ಆದರೆ ಆರ್ಥಿಕವಾಗಿ ಹಿಂದುಳಿದವರಿಗೆ, ದೈಹಿಕವಾಗಿ ನಿಶಕ್ತರಾದವರಿಗೆ ಹಾಗೂ ಮಕ್ಕಳಿಗೆ ತಿಮ್ಮಪ್ಪನ ದರ್ಶನವನ್ನು ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ತಿರುಪತಿ ತಿರುಮಲ ದೇವರನ್ನು ಭಕ್ತರ ಮನೆಬಾಗಿಲಿಗೆ ಕರೆ ತರುವ ದೃಷ್ಟಿಯಿಂದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಎಸ್‍ಎಲ್‍ಎನ್ ಗ್ರೂಪ್‍ನ ವ್ಯವಸ್ಥಾಪಕ ನಿರ್ದೇಶಕ ಎನ್. ವಿಶ್ವನಾಥ್ ಮಾತನಾಡಿ, ಸುಮಾರು 10 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ತಿರುಪತಿ ದೇವಾಲಯದಿಂದ 40 ಅರ್ಚಕರು ಆಗಮಿಸುತ್ತಿದ್ದು, ದೇವರ ಕೃಪೆಗೆ ಪಾತ್ರರಾಗುವ ಭಕ್ತಾದಿಗಳಿಗೆ ತಿರುಪತಿಯ ಕುಂಕುಮ ಮತ್ತು ದಾರವನ್ನು ನೀಡಲಾಗುವದು, ಅಲ್ಲದೆ ತಿರುಪತಿ ತಿರುಮಲ ದೇವಸ್ಥಾನ ಸನ್ನಿಧಾನದ ಲಡ್ಡು ವಿತರಿಸಲಾಗುವದು ಮತ್ತು ಅನ್ನಸಂತರ್ಪಣೆ ನಡೆಯಲಿದೆ ಎಂದರು. ಸಾರ್ವಜನಿಕರಿಗೆ ಯಾವದೇ ರೀತಿಯಲ್ಲಿ ತೊಂದರೆಯಾಗದಂತೆ ಅಗತ್ಯ ಮೂಲಭೂತ ಸೌಲಭ್ಯಗಳ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಒಕ್ಕೂಟದ ಆಹಾರ ಸಮಿತಿಯ ಅಧ್ಯಕ್ಷ ವಿ.ಡಿ. ಪುಂಡರಿಕಾಕ್ಷ, ಪ್ರಚಾರ ಸಮಿತಿಯ ಅಧ್ಯಕ್ಷ ಅಮೃತರಾಜ್ ಹಾಗೂ ಕಾರ್ಯದರ್ಶಿ ಎಂ.ಎನ್. ಚಂದ್ರಮೋಹನ್ ಉಪಸ್ಥಿತರಿದ್ದರು.