ಮಡಿಕೇರಿ, ಫೆ. 20 : ವೀರಾಜಪೇಟೆ ತಾಲ್ಲೂಕಿನ ಪೆಗ್ಗಳ, ಕೆದಮುಳ್ಳೂರು, ತೆರಾಲು ಹಾಗೂ ಬಿರುನಾಣಿ ಗ್ರಾಮಗಳಲ್ಲಿ ಗಿರಿಜನರಿ ಗಾಗಿಯೇ ಗುರುತಿಸಲ್ಪಟ್ಟಿರುವ ಸರಕಾರಿ ಜಾಗವನ್ನು ತಕ್ಷಣ ಎಲ್ಲಾ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕೆಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಘಟಕ ಒತ್ತಾಯಿಸಿದೆ. ಬೇಡಿಕೆ ಈಡೇರದಿದ್ದಲ್ಲಿ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುವದಾಗಿ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಕಾರ್ಯದರ್ಶಿ ವೈ.ಕೆ. ಗಣೇಶ್ ಗಿರಿಜನ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಿರುವ ನಿವೇಶನದ ಅರ್ಜಿಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಅರ್ಜಿಗಳಿಗೆ ಮಾತ್ರ ಅನುಮೋದನೆಯನ್ನು ನೀಡಿದ್ದು, ಉಳಿದ ಅರ್ಜಿದಾರರನ್ನು ಕಾರಣ ನೀಡದೆ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿದರು.

ಈ ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಆದಿವಾಸಿಗಳಿಗೆ ಹಂಚಿಕೆ ಮಾಡಲೆಂದು ನಾಲ್ಕು ಗ್ರಾಮಗಳಲ್ಲಿ ಸರಕಾರಿ ಜಾಗವನ್ನು ಸರ್ವೆ ಮಾಡಿ, ನಿವೇಶನವನ್ನಾಗಿ ಪರಿವರ್ತಿಸಿ ಚರಂಡಿ, ರಸ್ತೆ ನಿರ್ಮಿಸಿ, ವಿದ್ಯುತ್ ಕಂಬ ಅಳವಡಿಸುವ ಕಾರ್ಯವನ್ನು ಮಾಡಿದ್ದರು. ಅಲ್ಲದೆ ಮನೆಗಳ ನಿರ್ಮಾಣಕ್ಕೂ ಕ್ರಮ ಕೈಗೊಂಡಿದ್ದರು. ಜಿಲ್ಲಾಧಿಕಾರಿಗಳ ಈ ಪ್ರಾಮಾಣಿಕ ಪ್ರಯತ್ನದಿಂದ ಆದಿವಾಸಿಗಳು ವಸತಿ ದೊರೆಯುತ್ತದೆ ಎನ್ನುವ ವಿಶ್ವಾಸದಲ್ಲಿದ್ದರು.

ಆದರೆ ಅವರು ವರ್ಗಾವಣೆಯಾದ ನಂತರ ಜಿಲ್ಲೆಯ ಕಂದಾಯ ಅಧಿಕಾರಿಗಳು ಕೆದಮುಳ್ಳೂರು ಗ್ರಾಮಕ್ಕೆ ಮಾತ್ರ ನಿವೇಶನ ಹಂಚಿಕೆಯ ಪ್ರಕ್ರಿಯೆಯನ್ನು ಸೀಮಿತಗೊಳಿಸಲು ಮುಂದಾಗಿದ್ದಾರೆ. ಇದನ್ನು ವಿರೋಧಿಸುವದಾಗಿ ತಿಳಿಸಿದ ಗಣೇಶ್ ಪೆಗ್ಗಳ, ತೆರಾಲು, ಬಿರುನಾಣಿ ಗ್ರಾಮಗಳಲ್ಲೂ ನಿವೇಶನ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು. ಅಧಿಕಾರಿಗಳ ವಿಳಂಬ ಧೋರಣೆಯಿಂದ ಆದಿವಾಸಿಗಳು ಆಶ್ರಯವಿಲ್ಲದೆ ಅತಂತ್ರ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿರುವ ಎಲ್ಲಾ ಸರಕಾರಿ ಜಾಗಗಳನ್ನು ಗುರುತಿಸಿ ಕೊಡಗಿನ ಮೂಲ ನಿವಾಸಿ ಆದಿವಾಸಿಗಳಿಗೆ ಸೂಕ್ತ ಎನ್ನುವ ಪ್ರದೇಶವನ್ನು ಹಂಚಿಕೆ ಮಾಡುವ ಅಗತ್ಯವಿದೆ ಎಂದು ಹೇಳಿದರು.

ಮುಂದಿನ ಒಂದು ತಿಂಗಳೊಳಗೆ ನಿವೇಶನ ಹಂಚಿಕೆ ಮಾಡಿ ವಸತಿ ಯೋಜನೆಯನ್ನು ಜಾರಿ ಮಾಡದಿದ್ದಲ್ಲಿ ಅರ್ಜಿ ಸಲ್ಲಿಸಿರುವ ಕುಟುಂಬಗಳೇ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಗಣೇಶ್ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಬೇಕು, ತಪ್ಪಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ನಡೆಸಬೇಕಾಗುತ್ತದೆ ಎಂದರು.

ಸದಸ್ಯರುಗಳಾದ ಜೆ.ಕೆ. ಮಿಲನ್ ಹಾಗೂ ಜೆ.ಡಿ. ಮುರುಗೇಶ್ ಮಾತನಾಡಿ, ಆದಿವಾಸಿ ಸಮುದಾಯದಲ್ಲಿ ಸಾಕಷ್ಟು ಮಂದಿ ಯುವಸಮೂಹ ಶೈಕ್ಷಣಿಕವಾಗಿ ಪದವಿ ಮುಗಿಸಿದ್ದಾರೆ. ಆದರೆ ಯಾರೊಬ್ಬರಿಗೂ ಸರಕಾರಿ ಉದ್ಯೋಗದ ಭಾಗ್ಯ ಲಭಿಸಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಸರಕಾರ ಆದಿವಾಸಿ ಸಮುದಾಯದ ಬಗ್ಗೆ ವಿಶೇಷ ಕಾಳಜಿ ತೋರಿ ಸರಕಾರಿ ಉದ್ಯೋಗವನ್ನು ಮೀಸಲಿಡಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ವೈ.ಎ. ರವಿ, ಉಪಾಧ್ಯಕ್ಷೆ ಜೆ.ಆರ್.ಪ್ರೇಮ ಹಾಗೂ ಸದಸ್ಯ ಪಿ.ಕೆ.ಮಣಿ ಉಪಸ್ಥಿತರಿದ್ದರು.