ವೀರಾಜಪೇಟೆ ಫೆ. 20: ವೀರಾಜಪೇಟೆ ಪಟ್ಟಣ ಪಂಚಾಯಿತಿ ಯ ಮುಖ್ಯಾಧಿಕಾರಿ ಯನ್ನು ಸಾರ್ವಜನಿಕವಾಗಿ ಏಕವಚನದಲ್ಲಿ ಸಂಭೊಂದಿಸಿ ನಿಂದಿಸಿರುವದನ್ನು ಖಂಡಿಸಿ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಇಂದು ಪೂರ್ವಾಹ್ನ ಒಂದು ಗಂಟೆ ಕಾಲ ಲೇಖನಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.

ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಇರ್ಫಾನ್ ಮಾತನಾಡಿ,

ತಾ. 19ರಂದು ವೀರಾಜಪೇಟೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಂಗಡಿ ಮಳಿಗೆ ಹರಾಜಿನಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತ ಸಿ.ಎ. ನಾಸರ್ ಎಂಬವರು ತಮ್ಮ ಬೆಂಬಲಿಗರಿಗೆ ಹರಾಜಿನಲ್ಲಿ ಮಳಿಗೆ ಸಿಗುವ ಅವಕಾಶ ಕಡಿಮೆ ಎಂಬ ಕಾರಣದಿಂದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ಅವರೊಂದಿಗೆ ಅನುಚಿತವಾಗಿ ವರ್ತಿಸಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಉಂಟು ಮಾಡಿದ್ದಾರೆ. ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿರುವದು ಸಿ.ಸಿ. ಟಿವಿಯಲ್ಲೂ ದಾಖಲಾಗಿದೆ. ಓರ್ವ ಸರ್ಕಾರಿ ಸಿಬ್ಬಂದಿಯನ್ನು ಸಾರ್ವಜನಿಕವಾಗಿ ನಿಂದಿಸುವದು ಕಾನೂನಿಗೆ ವಿರುದ್ಧವಾಗಿದೆ. ಇವರ ವಿರುದ್ಧ ತಕ್ಷಣ ಕಾನೂನು ಕ್ರಮ ಜರುಗಿಸುವಂತೆ ಸಂಘದಿಂದ ಪೊಲೀಸರಿಗೂ ಲಿಖಿತ ದೂರು ನೀಡಲಾಯಿತು. ಪೊಲೀಸರು ತಕ್ಷಣ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ ಸಿಬ್ಬಂದಿಗಳು ಮತ್ತೆ ಪ್ರತಿಭಟನೆ ನಡೆಸುವದು ಅನಿವಾರ್ಯ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಪಂಚಾಯಿತಿಯ ಎಲ್ಲ ಸಿಬ್ಬಂದಿಗಳು ಭಾಗವಹಿಸಿದ್ದರು.