ವೀರಾಜಪೇಟೆ, ಫೆ. 20: ಬಿಟ್ಟಂಗಾಲದ ಪೆಗ್ಗರಿಕಾಡು ನಿವಾಸಿ ಈರಪ್ಪ (53)ವಿಷ ಸೇವಿಸಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಬೆಡ್‍ನಲ್ಲಿ ಕೋಮಾ ಸ್ಥಿತಿಯಲ್ಲಿದ್ದವನನ್ನು ವೈದ್ಯರು ಸಾವನ್ನಪ್ಪಿದನೆಂದು ಘೋಷಿಸಿದ್ದರು. ಮಹಜರು ಮಾಡಲು ಪೊಲೀಸರು ಬಂದಾಗ ಆತ ಎದ್ದು ಕುಳಿತಿದ್ದರಿಂದ ಬದುಕಿದ್ದನು. ಆದರೆ ಈತನನ್ನು ಹೆಚ್ಚಿನ ಚಿಕಿತ್ಸೆಗೆ ವೈದ್ಯರ ಸಲಹೆಯಂತೆ ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಯಿತು.

ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಈರಪ್ಪ ನಿನ್ನೆ ಮಡಿಕೇರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ತಾ: 15ರಂದು ವಿಷ ಸೇವಿಸಿ ಮನೆಯಲ್ಲಿ ನರಳಾಡುತ್ತಿದ್ದ ಈರಪ್ಪನನ್ನು ಆತನ ಪತ್ನಿ ಅಕ್ಕಮ್ಮ ಆಸ್ಪತ್ರೆಗೆ ಸೇರಿಸಿದ್ದರು. ಇಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡುವ ಮೊದಲೇ ಈತ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದ್ದು, ಇದರ ಜೊತೆಯಲ್ಲಿ ಆಂಬುಲೆನ್ಸ್ ಚಾಲಕ ಮಡಿಕೇರಿ ಹೋಗಲು ರೂ 500 ಲಂಚ ಕೇಳಿದ್ದು ಪೆಗ್ಗರಿಕಾಡು ಗ್ರಾಮಸ್ಥರನ್ನು ಕೆರಳಿಸಿತು. ಗ್ರಾಮಸ್ಥರು ತಾ.16ರಂದು ಆಸ್ಪತ್ರೆಯ ಮುಂದೆ ಪ್ರತಿಭಟನೆ ಹಮ್ಮಿಕೊಂಡಾಗ ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ ಅವರು ಪ್ರತಿಭಟನಾಕಾರರಿಗೆ ಸಾಂತ್ವನ ಹೇಳಿ ಭರವಸೆ ನೀಡಿದಾಗ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿದ್ದರು. ಚಾಲಕ ಹಾಗೂ ವೈದ್ಯರಿಗೆ, ಮುಖ್ಯ ವೈದ್ಯಾಧಿಕಾರಿ ಪ್ರಕರಣದ ಕುರಿತು ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ.