ಮಡಿಕೇರಿ, ಫೆ. 20: ಕಳೆದ ಮೂರು ವರ್ಷಗಳಲ್ಲಿ ಕಾಡಾನೆ ಧಾಳಿಯಿಂದ ಕೊಡಗಿನಲ್ಲಿ ಒಟ್ಟು 11,245 ಬೆಳೆನಷ್ಟ ಪ್ರಕರಣಗಳು ನಡೆದಿದ್ದು, 54,447 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ ಎಂದು ಅರಣ್ಯ ಸಚಿವ ರಮಾನಾಥ ರೈ ತಿಳಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಮೂರು ತಾಲೂಕುಗಳಲ್ಲಿ 34 ಪ್ರಕರಣಗಳಲ್ಲಿ ಕಾಡಾನೆ ಧಾಳಿಯಿಂದ ವ್ಯಕ್ತಿಗಳು ಸಾವನ್ನಪ್ಪಿದ್ದು, 157 ಲಕ್ಷ ರೂ. ಪರಿಹಾರ ವಿತರಣೆ ಮಾಡಲಾಗಿದೆ ಎಂದು ಸದನದಲ್ಲಿ ಶಾಸಕರಾದ ಅಪ್ಪಚ್ಚುರಂಜನ್ ಹಾಗೂ ಕೆ.ಜಿ. ಬೋಪಯ್ಯ ಅವರುಗಳ ಪ್ರಶ್ನೆಗೆ ಸಚಿವರು ಉತ್ತರಿಸಿದರು.ಕಾಡಾನೆ ಧಾಳಿಯಿಂದ ಗಾಯಗೊಂಡ 24 ಪ್ರಕರಣಗಳು ನಡೆದಿದ್ದು, 7,39 ಲಕ್ಷ ಪರಿಹಾರ ಹಣ ವಿತರಿಸಲಾಗಿದೆ.

ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸಲು ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ ಸೌರಶಕ್ತಿ ಬೇಲಿ ನಿರ್ಮಾಣ, ಆನೆ ತಡೆ ಕಂದಕ ನಿರ್ವಹಣೆ, ವನ್ಯಜೀವಿಗಳಿಗೆ ಕುಡಿಯುವ ನೀರಿಗಾಗಿ ಕೆರೆ ನಿರ್ಮಾಣ, ರ್ಯಾಪಿಡ್ ರೆಸ್ಪಾನ್ಸ್ ತಂಡ ಮತ್ತು ವನ್ಯಧಾಮಕ್ಕೆ ಕಾಡಾನೆ ಓಡಿಸುವ ತಂಡಗಳ ರಚನೆ, ಕಳ್ಳಬೇಟೆ ತಡೆ ಶಿಬಿರವನ್ನು ನಿರ್ಮಾಣ ಮಾಡುವದು ಕಾಡಾನೆ ಹಾವಳಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ರೈಲು ಹಳಿಗಳನ್ನು ಉಪಯೋಗಿಸಿ ಬ್ಯಾರಿಕೇಡ್

(ಮೊದಲ ಪುಟದಿಂದ) ನಿರ್ಮಿಸುವ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಕಾಡಾನೆಗಳ ಮಾಹಿತಿಯನ್ನು ಸಂಗ್ರಹಿಸಲು 24 ಗಂಟೆ ಕಾರ್ಯನಿರ್ವಹಿಸುವ ಮಾಹಿತಿ ಕೇಂದ್ರವನ್ನು ಸ್ಥಾಪಿಸಲಾಗಿದೆ, ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಸೆರೆಹಿಡಿದು ಬೇರೆ ಕಡೆಗೆ ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗಿದೆ, ರೈತರಿಗೆ ಸೋಲಾರ್ ಬೇಲಿ ನಿರ್ಮಾಣಕ್ಕೆ ಶೇ.50ರಷ್ಟು ಧನ ಸಹಾಯವನ್ನು ಇಲಾಖೆಯಿಂದ ನೀಡಲಾಗಿದೆ ಎಂದು ರಮಾನಾಥ ರೈ ತಿಳಿಸಿದರು.