ನ್ಯಾಯಾಂಗ ಬಂಧನದಲ್ಲಿ ಮೊಹಮ್ಮದ್ ನಲಪಾಡ್ಬೆಂಗಳೂರು, ಫೆ. 21: ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಹ್ಯಾರಿಸ್ ಹಾಗೂ ಆತನ 8 ಮಂದಿ ಸಹಚರರಿಗೆ ಮಾರ್ಚ್ 7 ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ 8 ನೇ ಎಸಿಎಂಎಂ ನ್ಯಾಯಾಲಯ ಆದೇಶ ನೀಡಿದೆ. ಯುಬಿಸಿಟಿ ರೆಸ್ಟೋರೆಂಟ್‍ನಲ್ಲಿ ನಡೆದಿದ್ದ ವಿದ್ವತ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಬಂಧಿಸಲಾಗಿದ್ದ ಮೊಹಮ್ಮದ್ ನಲಪಾಡ್‍ನನ್ನು ವಶಕ್ಕೆ ಪಡೆದುಕೊಂಡಿದ್ದ ಪೆÇಲೀಸರು ಇಂದು ಬೌರಿಂಗ್ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ ನಂತರ 8 ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಿದರು. ಪ್ರಕರಣದ ಬಗ್ಗೆ ವಾದ ವಿವಾದ ಆಲಿಸಿದ ನ್ಯಾಯಾಧೀಶರು ಆರೋಪಿ ಮೊಹಮ್ಮದ್ ನಲಪಾಡ್ ಹಾಗೂ ಆತನ ಸಹಚರರನ್ನು ಮಾರ್ಚ್ 7 ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಪ್ರಕಟಿಸಿದ್ದಾರೆ.

ಪಾಕ್ ಹೆಲಿಕಾಪ್ಟರ್ ವಾಯು ಪ್ರದೇಶ ಪ್ರವೇಶ

ಜಮ್ಮು-ಕಾಶ್ಮೀರ, ಫೆ. 21: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಅಂತರ್ರಾಷ್ಟ್ರೀಯ ಗಡಿ ರೇಖೆ ಬಳಿ ಪದೇ ಪದೇ ಕದನ ವಿರಾಮ ಉಲ್ಲಂಘಿಸುವ ಮೂಲಕ ಭಾರತದ ವಿರುದ್ಧ ತಂಟೆ ತೆಗೆಯುತ್ತಿರುವ ಪಾಕಿಸ್ತಾನ ಇಂದು ಮತ್ತೊಂದು ಖ್ಯಾತೆ ತೆಗೆದಿದೆ. ಅಂತರ್ರಾಷ್ಟ್ರೀಯ ಗಡಿ ರೇಖೆ ಬಳಿ ಪಾಕ್ ಹೆಲಿಕಾಪ್ಟರ್‍ವೊಂದು ವಾಯುಪ್ರದೇಶ ಉಲ್ಲಂಘಿಸಿ 300 ಮೀಟರ್ ಒಳಪ್ರವೇಶಿಸಿದೆ. ಅಂತರ್ರಾಷ್ಟ್ರೀಯ ಗಡಿ ರೇಖೆ ಬಳಿ ಉಭಯ ದೇಶಗಳ ರೋಟರಿ ವಿಂಗ್ ವಿಮಾನಗಳು 10 ಕಿಲೋಮೀಟರ್ ಕೆಳಗೆ ಒಳಪ್ರವೇಶಿಸುವಂತಿಲ್ಲ ಎಂಬ ನಿಯಮವಿದೆ. ಆದರೆ, ಪೂಂಚ್ ವಲಯದ ಗುಲ್ಪುರ್ ವಲಯದಲ್ಲಿ ಇಂದು ಬೆಳಿಗ್ಗೆ 9.45ರ ಸಮಯದಲ್ಲಿ ಎಂಐ-17 ಹೆಲಿಕಾಪ್ಟರ್‍ನಿಂದ ನಿಯಮ ಉಲ್ಲಂಘಿಸಲಾಗಿದೆ. ಆದರೆ, ಗುಂಡಿನ ಧಾಳಿಯಂತಹ ಪ್ರತಿಕೂಲ ಕಾರ್ಯಗಳು ಎರಡು ಕಡೆಯಿಂದಲೂ ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಎಪಿ ಶಾಸಕರಿಗೆ ನ್ಯಾಯಾಂಗ ಬಂಧನ

ನವದೆಹಲಿ, ಫೆ. 21: ದೆಹಲಿ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಅವರ ಮೇಲೆ ಹಲ್ಲೆ ನಡೆಸಿದ್ದ ಎಎಪಿ ಶಾಸಕರನ್ನು ಗುರುವಾರದವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ದೆಹಲಿ ನ್ಯಾಯಾಲಯ ಆದೇಶಿಸಿದೆ. ಶಾಸಕರಾದ ಪ್ರಕಾಶ್ ಜರ್ವಾಲ್ ಮತ್ತು ಅಮಾನತುಲ್ಲಾ ಖಾನ್ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಮುಖ್ಯ ಕಾರ್ಯದರ್ಶಿ ಪ್ರಕಾಶ್ ನೀಡಿದ್ದ ದೂರಿನ ಹಿನ್ನೆಲೆ ಶಾಸಕರನ್ನು ದೆಹಲಿ ಪೆÇಲೀಸರು ಇಂದು ಮುಂಜಾನೆ ಬಂಧಿಸಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿವಾಸದಲ್ಲಿ ಮಂಗಳವಾರದಂದು ನಡೆದ ಸಭೆಯಲ್ಲಿ ಎಎಪಿ ಶಾಸಕರು ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಅವರ ಮೇಲೆ ಹಲ್ಲೆ ನಡೆಸಿದ್ದರು. ಈ ಕುರಿತಂತೆ ಅಂಶು ಪ್ರಕಾಶ್ ಪೆÇಲೀಸ್ ಅಧಿಕಾರಿಗಳಿಗೆ ವಿವರವಾದ ಪತ್ರ ಬರೆದು ದೂರು ಸಲ್ಲಿಸಿದ್ದರು.

ಖರ್ಗೆಗೆ ಜಯದೇವಶ್ರೀ ಪ್ರಶಸ್ತಿಯ ಗರಿ

ಚಿತ್ರದುರ್ಗ, ಫೆ. 21: ಸಂಸದ, ಲೋಕಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಚಿತ್ರದುರ್ಗದ ಮುರುಘಾ ಮಠದ ಬಸವಕೇಂದ್ರ, ಜಗದ್ಗುರು ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ನೀಡುವ ಜಯದೇವಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಜಗದ್ಗುರು ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ 61ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಉತ್ಸವದಲ್ಲಿ ಮಾರ್ಚ್ 3 ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ರಾಜಕಾರಣಿಯಾಗಿ ಸುದೀರ್ಘ ಕಾಲ ಸಮಾಜ ಸೇವೆ ಸಲ್ಲಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರ ಜೀವಮಾನದ ಸಾಧನೆ ಪರಿಗಣಿಸಿ ಈ ಗೌರವ ನೀಡಲಾಗುತ್ತಿದೆ ಎಂದು ಮುರುಘಾ ಮಠದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ. ಇದೇ ವೇಳೆ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಸಾಹಿತಿ ನಾಡೋಜ ಹಂ.ಪ. ನಾಗರಾಜಯ್ಯ ಅವರಿಗೆ ‘ಶೂನ್ಯಪೀಠ ಅಲ್ಲಮ’ ಪ್ರಶಸ್ತಿ, ಮಹಿಳಾ ಪರ ಹೋರಾಟಗಾರ್ತಿ ಪ್ರಮೀಳಾ ನೇಸರ್ಗಿ ಅವರಿಗೆ ‘ಶೂನ್ಯಪೀಠ ಅಕ್ಕನಾಗಮ್ಮ’ ಪ್ರಶಸ್ತಿ, ದಾವಣಗೆರೆಯ ಸಮಾಜ ಸೇವಕ ಡಾ. ಸಿ.ಆರ್. ನಸಿರ್ ಅಹಮ್ಮದ್ ಅವರಿಗೆ ‘ಶೂನ್ಯಪೀಠ ಚನ್ನಬಸವ’ ಪ್ರಶಸ್ತಿ ಪ್ರಕಟಿಸಲಾಗಿದೆ.

ರಕ್ಷಣಾ ಸಂಶೋಧನೆ ಡ್ರೋನ್ ಪತನ

ಚಿತ್ರದುರ್ಗ, ಫೆ. 21: ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ದೊರೆಮಂದಲಹಟ್ಟಿ ಗ್ರಾಮದ ತೋಟದಲ್ಲಿ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಗೆ ಸೇರಿದ್ದ ಡ್ರೋನ್ ಒಂದು ಪತನಗೊಂಡಿದೆ. ಅನುಮಾನಾಸ್ಪದ ವ್ಯಕ್ತಿಗಳನ್ನು ಪತ್ತೆ ಮಾಡಲು ಹಾಗೂ ರಕ್ಷಣಾ ಮಾಹಿತಿ ಸೋರಿಕೆಯನ್ನು ತಡೆಗಟ್ಟಲು ಡಿಆರ್‍ಡಿಒ ಈ ಡ್ರೋನ್ ಹಾರಿ ಬಿಟ್ಟಿತ್ತೆಂದು ಹೇಳಲಾಗಿದೆ. ಡಿಆರ್‍ಡಿಒ ಕೇಂದ್ರದಿಂದ ಮೂರು ಕಿ.ಮೀ. ದೂರದಲ್ಲಿದ್ದ ದೊರೆಮಂದಲಹಟ್ಟಿ ಗ್ರಾಮದ ಬಂಗಾರಪ್ಪ ಎನ್ನುವವರ ತೋಟದಲ್ಲಿ ಡ್ರೋನ್ ಬಿದ್ದಿದೆ. ಬುಧವಾರ ಬೆಳಿಗ್ಗೆ ಈ ಡ್ರೋನ್ ಪತನವಾಗಿದ್ದು ಡಿಆರ್‍ಡಿಒ ವಿಜ್ಞಾನಿಗಳ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಪರೀಕ್ಷಾ ಕೇಂದ್ರದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಡ್ರೋನ್, ಕೇಂದ್ರದ ರಾಡಾರ್ ಸಂಪರ್ಕವನ್ನು ಕಳೆದುಕೊಂಡಿತ್ತು.

ಶ್ರೀ ಕೃಷ್ಣ ಮಠಕ್ಕೆ ಅಮಿತ್ ಶಾ ಭೇಟಿ

ಉಡುಪಿ, ಫೆ. 21: ರಾಜ್ಯ ಪ್ರವಾಸದ ಅಂಗವಾಗಿ ಕರಾವಳಿ ಜಿಲ್ಲೆಗಳಿಗೆ ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬುಧವಾರ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀ ಕೃಷ್ಣನ ದರ್ಶನ ಪಡೆದರು. ಮಠಕ್ಕೆ ಆಗಮಿಸಿದ ಅವರು ಕನಕನ ಕಿಂಡಿಯ ಮೂಲಕ ದೇವರ ದರ್ಶನ ಪಡೆದರು. ಈ ವೇಳೆ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿಗಳು ಅಮಿತ್ ಶಾ ಅವರನ್ನು ಗೌರವಿಸಿದರು.

ಪ್ರತಿ ಭಾನುವಾರ ಮಹಾ ಮಸ್ತಕಾಭಿಷೇಕ

ಹಾಸನ, ಫೆ. 21: ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಭಗವಾನ್ ಬಾಹುಬಲಿಯ 88ನೇ ಮಹಾ ಮಸ್ತಕಾಭಿಷೇಕದ ಮೊದಲನೇ ಹಂತ ಮುಕ್ತಾಯಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ವೈರಾಗ್ಯಮೂರ್ತಿಯ ಮಹಾಮಜ್ಜನ ಕಣ್ತುಂಬಿಕೊಳ್ಳುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ತಾ. 25 ರಂದು ಮಹಾ ಮಸ್ತಕಾಭಿಷೇಕದ ಪ್ರಮುಖ ಘಟ್ಟಮುಕ್ತಾಯಗೊಂಡ ನಂತರ ಮುಂದಿನ ಆರು ತಿಂಗಳ ಕಾಲ ಪ್ರತಿ ಭಾನುವಾರ ಇದೇ ರೀತಿಯ ಮಹಾ ಮಸ್ತಕಾಭಿಷೇಕ ಮುಂದುವರೆಯಲಿದೆ ಎಂದು ಜೈನ ಮಠ ಘೋಷಿಸಿದೆ. ವಿಂಧ್ಯಗಿರಿಯ ದೊಡ್ಡ ಬೆಟ್ಟದಲ್ಲಿರುವ ಭಗವಾನ್ ಬಾಹುಬಲಿ ಮಹಾಮಜ್ಜನಕ್ಕೆ ಕೇವಲ 5 ಸಾವಿರ ಜನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ ರಾಜ್ಯ ಸೇರಿದಂತೆ ದೇಶಾದ್ಯಂತ ಜೈನ ಸಂಘಟನೆಗಳು ಮಹಾಮಜ್ಜನ ಮುಂದುವರೆಸಲು ಬೇಡಿಕೆ ಹೆಚ್ಚಿದ್ದರಿಂದ ಮಾರ್ಚ್‍ನಿಂದ ಆಗಸ್ಟ್‍ವರೆಗೆ ಪ್ರತಿ ಭಾನುವಾರ ಮಹಾ ಮಸ್ತಕಾಭಿಷೇಕ ಮುಂದುವರೆಯಲಿದೆ ಎಂದು ಜೈನ ಮಠ ತಿಳಿಸಿದೆ.

ಇಂದು ಮಡಿವಾಳ ಸಂಘದಿಂದ ಬೆಂಗಳೂರು ಚಲೋ

ಯಾದಗಿರಿ, ಫೆ. 21: ಮಡಿವಾಳ ಸಮಾಜವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವಂತೆ ಆಗ್ರಹಿಸಿ ತಾ. 22 ರಂದು (ಇಂದು) ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಮಡಿವಾಳರ ಸಂಘದ ಜಿಲ್ಲಾಧ್ಯಕ್ಷ ಮಡಿವಾಳಪ್ಪ ಬಿಜಾಸ್ಪೂರ್ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಮಡಿವಾಳರ ಸಂಘ ರಾಜ್ಯಾಧ್ಯಕ್ಷ ಸಿ. ನಂಜಪ್ಪ ಅವರ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಿಂದ ಬೃಹತ್ ಮೆರವಣಿಗೆ ಮೂಲಕ ವಿಧಾನಸೌಧಕ್ಕೆ ತೆರಳಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವದು. ಕಾರ್ಯಕ್ರಮದಲ್ಲಿ ಮಡಿವಾಳ ಗುರುಪೀಠದ ಶಿವಯೋಗಾನಂದ ಪುರಿ ಸ್ವಾಮೀಜಿ, ಚಿತ್ರದುರ್ಗದ ಬಸವ ಮಾಚಿದೇವ ಸ್ವಾಮೀಜಿ, ಮುಕ್ತಾನಂದ ಸ್ವಾಮೀಜಿ ಭಾಗವಹಿಸುವರು.

ಅಂತರ್ರಾಷ್ಟ್ರೀಯ ಸಿನಿಮೋತ್ಸವಕ್ಕೆ ಇಂದು ಚಾಲನೆ

ಬೆಂಗಳೂರು, ಫೆ. 21: 10ನೇ ಬೆಂಗಳೂರು ಅಂತರ್ರಾಷ್ಟ್ರೀಯ ಸಿನಿಮೋತ್ಸವಕ್ಕೆ (ಬಿಫ್ಸ್) ರಂಗ ಸಜ್ಜಾಗಿದ್ದು ನಾಳೆಯಿಂದ ಹಲವು ಚಿತ್ರಗಳು ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ತಾ. 22 ರಿಂದ ಮಾರ್ಚ್ 1 ರವರೆಗೆ ಬಿಫ್ಸ್ ಸಿನಿಮೋತ್ಸವ ನಡೆಯಲಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಈ ಸಿನಿಮೋತ್ಸವನ್ನು ಆಯೋಜಿಸಿದೆ. ತಾ. 22 ರಂದು ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಪ್ರತಿನಿಧಿಗಳು, ಚಿತ್ರ ನಿರ್ದೇಶಕರು ಮತ್ತು ನಟ-ನಟಿಯರು ಭಾಗವಹಿಸಲಿದ್ದಾರೆ. ರಾಜಾಜಿನಗರದ ಒರಿಯನ್ ಮಾಲ್‍ನ 11 ಸ್ಕ್ರೀನ್‍ಗಳಲ್ಲಿ ಚಿತ್ರ ಪ್ರದರ್ಶನವಾಗಲಿದ್ದು ಚಿತ್ರದ ಪಾಸ್ 600 ರೂಪಾಯಿಯಾಗಿದ್ದು ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರಿಗೆ 300 ರೂಪಾಯಿ ಪಾಸ್ ನೀಡಲಾಗುತ್ತದೆ. ಬಿಫ್ಸ್ ಪಟ್ಟಿಯಲ್ಲಿ ಕನ್ನಡದ ಭರ್ಜರಿ. ಚಮಕ್, ಕಾಲೇಜ್ ಕುಮಾರ, ಹೆಬ್ಬುಲಿ, ಮಫ್ತಿ, ಒಂದು ಮೊಟ್ಟೆಯ ಕಥೆ, ರಾಜಕುಮಾರ ಮತ್ತು ತಾರಕ್ ಚಿತ್ರಗಳಿವೆ.