ಮಡಿಕೇರಿ, ಫೆ.21 : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‍ನ ಕೊಡಗು ಜಿಲ್ಲಾ ಘಟಕ, ಮಂಗಳೂರು ವಿಶ್ವ ವಿದ್ಯಾನಿಲಯದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರ, ಚಿಕ್ಕ ಅಳುವಾರ ಹಾಗೂ ಕೊಡಗು ಪ್ರೆಸ್ ಕ್ಲಬ್ ಇದರ ಸಂಯುಕ್ತಾಶ್ರಯದಲ್ಲಿ ತಾ.24 ರಂದು “ವಚನ ಕ್ರಾಂತಿಯ ಪುನರುತ್ಥಾನ” ವಿಚಾರ ಗೋಷ್ಠಿ ಕಾರ್ಯಕ್ರಮ ಚಿಕ್ಕ ಅಳುವಾರದಲ್ಲಿ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್‍ನ ಜಿಲ್ಲಾಧ್ಯಕ್ಷ ಎಸ್.ಮಹೇಶ್ ತಾ.24 ರಂದು ಬೆಳಗ್ಗೆ 10 ಗಂಟೆಗೆ ಚಿಕ್ಕ ಅಳುವಾರದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹಾಗೂ ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುವೆಂಪು ವಿ.ವಿ.ಯ ನಿವೃತ್ತ ಪ್ರಾಧ್ಯಾಪಕ ಪ್ರೊ. ಸಿ.ಎಂ.ಧರ್ಮಪ್ಪ ಅವರು ವಹಿಸಲಿದ್ದಾರೆ ಎಂದರು. ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಪ್ರೊ. ಪಿ.ಎಲ್.ಧರ್ಮ, ಕೊಡಗು ಪ್ರೆಸ್ ಕ್ಲಬ್‍ನ ಅಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡಗು ಜಿಲ್ಲಾ ಅಖಿಲ ಭಾರತೀಯ ವೀರಶೈವ ಮಹಾಸಭಾದ ಅಧ್ಯಕ್ಷ ಡಿ.ಬಿ. ಧರ್ಮಪ್ಪ, ನಿವೃತ್ತ ಮಾಹಿತಿ ಹಕ್ಕು ಆಯುಕ್ತ ವಿರುಪಾಕ್ಷಯ್ಯ ಹಾಗೂ ಆಡಿನಾಡೂರು ಉದ್ಯಮಿ ವಿ.ಎಂ.ವಿಜಯ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಶನಿವಾರಸಂತೆಯ ಮುದ್ದಿನ ಕಟ್ಟೆಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಶಿಡಿಗಳಲೆ ಮಠದ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ “ವಚನಕಾರರ ಸಮಾನತೆಯ ಕ್ರಿಯಾಲೋಚನೆಗಳು” ವಿಷಯದ ಕುರಿತು ಮೊದಲ ಗೋಷ್ಠಿ ನಡೆಯಲಿದ್ದು, ಹಾಸನದ ಸರ್ಕಾರಿ ಕಲಾ ಕಾಲೇಜಿನ ಇತಿಹಾಸ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥ ಪ್ರೊ.ಎಂ.ಬಿ.ಇರ್ಷಾದ್ ವಿಚಾರ ಮಂಡನೆ ಮಾಡಲಿದ್ದಾರೆ. “ಅರ್ಥ, ಜಾತಿ ಹಾಗೂ ಲಿಂಗ ಸಮಾನತೆಯ” ಕುರಿತು ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಪಿ.ಎಲ್.ಧರ್ಮ ವಿಚಾರ ಮಂಡಿಸಲಿದ್ದಾರೆ.

ಸೋಮವಾಪೇಟೆಯ ಕಲ್ಲುಮಠದ ಶ್ರೀಮಹಾಂತ ಸ್ವಾಮೀಜಿ ಹಾಗೂ ವಿರಕ್ತ ಮಠದ ಶ್ರೀವಿಶ್ವೇಶ್ವರ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ನಡೆಯುವ ಎರಡನೇ ಗೋಷ್ಠಿಯಲ್ಲಿ “ವಚನಕಾರರ ಪ್ರತಿಭಟನೆಯ ನೆಲೆಗಳು” ಎಂಬ ವಿಷಯದ ಕುರಿತು ಕೊಣನೂರು ಬಿ.ಎಂ.ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಪ್ರಕಾಶ್, “ಸರ್ವ ಸ್ಥಾವರಗಳು, ಮೂಢನಂಬಿಕೆ, ಸೂತಕ ಶೋಷಣೆಗಳ ವಿರೋಧ” ಎಂಬ ವಿಷಯದ ಕುರಿತು ಕೂಡಿಗೆಯ ಡಯಟ್‍ನ ಸಹಾಯಕ ಪ್ರಾಂಶುಪಾಲ ಬಿ.ಬೊಮ್ಮೆಗೌಡ ಪ್ರತಿಕ್ರಿಯೆ ಮಂಡಿಸಲಿದ್ದಾರೆ. ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಿ.ಕೆ.ಉಷಾ “ಮಹಿಳೆ ಮತ್ತು ಶೋಷಿತರ ಪ್ರತಿಭಟನೆÀ” ಕುರಿತು ಮಾತನಾಡಲಿದ್ದಾರೆ.

ಅಂದು ಸಂಜೆ 3 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ವೀರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ “ವಚನ ವಾಚನ, ವಿಶ್ಲೇಷಣೆ” ಎಂಬ ವಿಷಯದ ಕುರಿತು ಮೂರನೇ ಗೋಷ್ಠಿ ನಡೆಯಲಿದೆ. ಅಲ್ಲದೆ ಬಸವಪಟ್ಟಣ ತೋಂಟದಾರ್ಯ ಸಂಸ್ಥಾನ ಮಠದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ “ಪ್ರಜಾಧರ್ಮವಾಗಿ ಶರಣ ಧರ್ಮ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಮಹೇಶ್ ಮಾಹಿತಿ ನೀಡಿದರು.

ಮೈಸೂರು ವಿವಿ ಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ಎಂ.ಧರ್ಮಪ್ಪ ಸಮಾರೋಪ ನುಡಿಯಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಪ್ರೆಸ್ ಕ್ಲಬ್‍ನ ಮಾಜಿ ಅಧ್ಯಕ್ಷ ಬಿ.ಜಿ.ಅನಂತಶಯನ, ಪ್ರಗತಿಪರ ಮಹಿಳಾ ವೇದಿಕೆಯ ಅಧ್ಯಕ್ಷೆ ಲೋಕೇಶ್ವರಿ ಗೋಪಾಲ್, ವೀರ ಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಜಿ.ಎಂ.ಕಾಂತರಾಜು, ರಾಜ್ಯ ಪತ್ರಕರ್ತರ ಸಂಘದ ನಿರ್ದೇಶಕ ಎಸ್.ಎ. ಮುರಳೀಧರ್, ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಕವನ್ ಕಾರ್ಯಪ್ಪ ಮತ್ತಿತರ ಪ್ರಮುಖರು ಉಪಸ್ಥಿತರಿರುವರು ಎಂದರು. ಕದಳಿ ಮಹಿಳಾ ವೇದಿಕೆ ಸದಸ್ಯರಿಂದ ವಚನ ಗಾಯನ ಹಾಗೂ ಮಂಜು ಭಾರ್ಗವಿ ತಂಡದಿಂದ ಭರತನಾಟ್ಯ ಕಾರ್ಯಕ್ರಮ ಕೂಡ ನಡೆಯಲಿದೆ.

ಶರಣ ಸಾಹಿತ್ಯ ಪರಿಷತ್ ಕಳೆದ ಎರಡು ವರ್ಷಗಳಿಂದ ಕ್ರಿಯಾಶೀಲ ವಾಗಿದ್ದು, ಸಮಾಜದ ಸುಧಾರಣೆಗಾಗಿ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದೆ. ಸೋಮವಾರಪೇಟೆ ಹಾಗೂ ವೀರಾಜಪೇಟೆ ತಾಲೂಕು ಘಟಕಗಳನ್ನು ಈಗಾಗಲೇ ರಚಿಸಲಾಗಿದ್ದು, ಮಡಿಕೇರಿ ತಾಲೂಕು ಘಟಕ ಸಧ್ಯದಲ್ಲಿಯೆ ರಚನೆಯಾಗಲಿದೆ ಎಂದು ಮಹೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಪ್ರೇಮನಾಥ್, ಖಜಾಂಚಿ ಡಿ.ಬಿ.ಸೋಮಪ್ಪ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಮಹದೇವಪ್ಪ, ಸದಸ್ಯ ಶಂಭುಶಿವಮೂರ್ತಿ ಹಾಗೂ ಕೊಡಗು ಪ್ರೆಸ್‍ಕ್ಲಬ್ ಕಾರ್ಯದರ್ಶಿ ಎಂ.ವಿಘ್ನೇಶ್ ಭೂತನಕಾಡು ಉಪಸ್ಥಿತರಿದ್ದರು.