ಮಡಿಕೇರಿ, ಫೆ. 20: ನಿಧಿ ಆಸೆಗಾಗಿ ಐತಿಹಾಸಿಕ ಹಿನ್ನೆಲೆಯುಳ್ಳ ಪುರಾತನ ಈಶ್ವರನ ಗುಡಿಯನ್ನು ಧ್ವಂಸಗೊಳಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೂರ್ನಾಡು ಸಮೀಪದ ಬಲಮುರಿ ಗ್ರಾಮದ ಉಪ್ಪುಗುಂಡಿ ಎಂಬಲ್ಲಿ ಲವಣೇಶ್ವರ ದೇವರ ಗುಡಿಯೊಂದಿದೆ. ಸ್ಕಾಂದ ಪುರಾಣದ ಮಾಹಿತಿಯಂತೆ ಕಾವೇರಿ ನದಿ ಉಗಮಿಸುವದಕ್ಕಿಂತ ಮೊದಲೇ ಈ ದೇವರ ಗುಡಿ ಇದೆಯೆಂಬ ಉಲ್ಲೇಖವಿದೆ. ಕಾವೇರಿ ನದಿ ತಟದಲ್ಲಿರುವ ಈ ಗುಡಿಗೆ ಕಾವೇರಿ ನದಿ ಪ್ರದಕ್ಷಿಣೆ ಹಾಕಿದ್ದಾಳೆಂಬ ಮಾತಿದೆ. ಅಜ್ಞಾತವಾಗಿದ್ದ ಈ ಗುಡಿಯನ್ನು ಶಿವರಾತ್ರಿ ಅಂಗವಾಗಿ ಸಂಘಟನೆಯೊಂದರ ಕಾರ್ಯಕರ್ತರು ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಇದನ್ನು ಗಮನಿಸಿದ ಕಿಡಿಗೇಡಿಗಳಾರೋ ಪುರಾತನ ಗುಡಿಯೊಂದರಲ್ಲಿ ನಿಧಿಯಿರ ಬಹುದೆಂಬ ಶಂಕೆಯೊಂದಿಗೆ ಗುಡಿಯನ್ನು ಬಗೆದು ಶಿವಲಿಂಗವನ್ನು ಕಿತ್ತೆಸೆದಿದ್ದಾರೆ. ಗುಡಿ ಸಂಪೂರ್ಣ ನಾಶವಾಗಿದೆ.

ಈ ಗುಡಿಗೆ ತೆರಳಲು ರಸ್ತೆ ಸಮಸ್ಯೆ ಇರುವದರಿಂದ ಅಜ್ಞಾತವಾಗಿತ್ತು. ವಾಟ್ಸಪ್‍ನಲ್ಲಿ ನೋಡಿದ ಕಿಡಿಗೇಡಿಗಳು ಈ ಕೃತ್ಯ ವೆಸಗಿರುವದಾಗಿ ಹೇಳಲಾಗಿದೆ.

- ಸಂತೋಷ್