ಶ್ರೀಮಂಗಲ, ಫೆ. 21: ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಕುಮಟೂರು ಗ್ರಾಮದಲ್ಲಿ ಹುಲಿ ಧಾಳಿಗೆ ಎರಡು ಹಸುಗಳು ಬಲಿಯಾಗಿರುವ ಘಟನೆ ನಡೆದಿದೆ. ತನ್ನ ಜೀವನೋಪಾಯದ ಹಸುಗಳನ್ನು ಕಳೆದುಕೊಂಡ ಸಂತ್ರಸ್ತ ರೈತನಿಗೆ ಸ್ಥಳದಲ್ಲಿಯೇ ಹೆಚ್ಚುವರಿ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ಒತ್ತಾಯಿಸಿ, ಅರಣ್ಯಾಧಿಕಾರಿಗಳೊಂದಿಗೆ ತೀವ್ರ ಚರ್ಚೆ ನಡೆಸಿದ ಹಿನ್ನೆಲೆಯಲ್ಲಿ ಹಸುವಿಗೆ ತಲಾ 30 ಸಾವಿರದಂತೆ ಪರಿಹಾರ ನೀಡುವ ಭರವಸೆಯನ್ನು ಅರಣ್ಯಾಧಿಕಾರಿಗಳು ನೀಡಿದ್ದಾರೆ.ಕುಮಟೂರು ಗ್ರಾಮದ ಬೊಜ್ಜಂಗಡ ಎಂ.ಗಣಪತಿ(ಗಪ್ಪು) ಅವರು ತಮ್ಮ ಕೊಟ್ಟಿಗೆಯ ಹೊರಗಡೆ ಕಟ್ಟಿದ್ದ ಹಸುಗಳ ಮೇಲೆ ಬುಧವಾರ ಮುಂಜಾನೆ 3 ಗಂಟೆಗೆ ಹುಲಿ ಧಾಳಿ ನಡೆಸಿದೆ. ಕೊಟ್ಟಿಗೆಯ ಸಮೀಪವೆ ಗಣಪತಿಯವರ ಮನೆ ಇದ್ದು, ಹಸುಗಳ ಚೀರಾಟ ಕೇಳಿ ವಿದ್ಯುತ್ ದೀಪ ಉರಿಸಿದ ಸಂದರ್ಭ ಒಂದು ಹಾಲು ಕರೆಯುವ ಹಸು, ಮತ್ತೊಂದು ಗಬ್ಬದ ಹಸು ಸೇರಿ ಎರಡು ಮಿಶ್ರತಳಿಯ ಹಸುಗಳ ಮೇಲೆ ಹುಲಿ ಧಾಳಿ ನಡೆಸಿರುವದು ಕಂಡು ಬಂದಿದೆ. ಸ್ಥಳಕ್ಕೆ ತೆರಳಿದ ಸಂದರ್ಭ ಹಸುವನ್ನು ಬಿಟ್ಟು ಹುಲಿ ಸಮೀಪದ ತೋಟಕ್ಕೆ ಓಡಿಹೋಗಿದೆ. ಗಣಪತಿಯವರು ಹುಲಿ ಧಾಳಿಯ ಸಂದರ್ಭ ಹಸುಗಳ ಚೀರಾಟದ ಸದ್ದಿಗೆ ಕೊಟ್ಟಿಗೆ ಸಮೀಪ ಧಾವಿಸದಿದ್ದರೆ ಕೊಟ್ಟಿಗೆಯಲ್ಲಿದ್ದ ಇನ್ನೂ ಹಲವು ಹಸುಗಳು ಮತ್ತು ಕರುಗಳ ಮೇಲೆ ಧಾಳಿ ಮಾಡುವ ಅಪಾಯವಿತ್ತು ಎಂದು ಗಣಪತಿ ಆತಂಕ ವ್ಯಕ್ತಪಡಿಸಿದ್ದಾರೆ.
ಒಂದು ಹಸು ಸ್ಥಳದಲ್ಲಿಯೇ ಸಾವಿಗೀಡಾಗ್ಗಿದ್ದರೆ ಮತ್ತೊಂದು ಹಸು ತೀವ್ರ ಗಾಯಗೊಂಡು ನರಳಾಡುತ್ತಿತ್ತು, ಗಾಯಗೊಂಡ ಹಸು ಮುಂಜಾನೆ 6 ಗಂಟೆಗೆ ಸಾವಿಗೀಡಾಯಿತು ಎಂದು ಗಣಪತಿಯವರು ತಿಳಿಸಿದರು.
ಹೆಚ್ಚುವರಿ ಪರಿಹಾರ: ಅರಣ್ಯಾಧಿಕಾರಿಗಳಿಗೆ ವಿಚಾರ ತಿಳಿಸಿದರೂ ಸ್ಥಳಕ್ಕೆ ಬರಲು ತಡ ಮಾಡಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ರೂ. 10 ಸಾವಿರದಂತೆ ಸರ್ಕಾರದ ಪರಿಹಾರ ನಿಧಿಯನ್ನು ನೀಡಲಾಗುವದು ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದರು. ಆದರೆ, ಈ ಪರಿಹಾರಕ್ಕೆ ಸಂತ್ರಸ್ತ ರೈತ ಹಾಗೂ ಗ್ರಾಮಸ್ಥರು ತೀವ್ರ ವಿರೋಧ ಮಾಡಿ ಪ್ರತಿಭಟಿಸಿ ಹೆಚ್ಚುವರಿ ಪರಿಹಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಜಿ.ಪಂ ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ, ತಾ.ಪಂ ಸದಸ್ಯ ಪೊಯಿಲೇಂಗಡ ಪಲ್ವೀನ್ ಪೂಣಚ್ಚ ಹಾಗೂ ಜಿಲ್ಲಾ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಕಳ್ಳಿಚಂಡ ದನು ಅವರು ಹೆಚ್ಚುವರಿ ಪರಿಹಾರಕ್ಕಾಗಿ
(ಮೊದಲ ಪುಟದಿಂದ) ಅಧಿಕಾರಿಗಳೊಂದಿಗೆ ಚರ್ಚಿಸಿದರು. ಬಾಳೆಲೆ ಹುಲಿ ಧಾಳಿ ಪ್ರಕರಣದಲ್ಲಿ ರೂ. 30 ಸಾವಿರ ಪರಿಹಾರ ಘೋಷಿಸಲಾಗಿದ್ದು, ಕನಿಷ್ಠ 30 ಸಾವಿರ ನೀಡಬೇಕು ಎಂದು ಜಿ.ಪಂ ಸದಸ್ಯ ಶಿವು ಮಾದಪ್ಪ ಅವರು ನಾಗರ ಹೊಳೆ ವಲಯ ಎಸಿಎಫ್ ಫೌಲ್ ಅಂಟೋಣಿ ಹಾಗೂ ಆರ್ಎಫ್ಒ ಅರವಿಂದ್ ಅವರಿಗೆ ಒತ್ತಾಯಿಸಿದರು. ಸರ್ಕಾರದಿಂದ ಪರಿಹಾರ ಧನ ರೂ. 10 ಸಾವಿರವಿದ್ದರೂ ನಾಗರ ಹೊಳೆ ಹುಲಿ ಸಂರಕ್ಷಣ ನಿಧಿಯಿಂದ ತಲಾ 20 ಸಾವಿರದಂತೆ ಹೆಚ್ಚುವರಿ ಪರಿಹಾರವನ್ನು ವಿಶೇಷ ಪ್ರಕರಣದಡಿ ನೀಡುವ ಭರವಸೆಯನ್ನು ಎಸಿಎಫ್ ಅವರು ನೀಡಿದರು.
ಹುಲಿ ಸೆರೆಗೆ ಒತ್ತಾಯ: ಕಳೆದ ಹಲವು ತಿಂಗಳಿನಿಂದ ಈ ವ್ಯಾಪ್ತಿಯಲ್ಲಿ ಹುಲಿ ಸಂಚರಿಸುತ್ತಿದ್ದು, ಗ್ರಾಮಸ್ಥರ ಮನವಿಗೆ ಎಚ್ಚೆತ್ತುಕೊಂಡಿದ್ದರೆ ಹಸುಗಳ ಮೇಲೆ ಹುಲಿ ಧಾಳಿ ಪ್ರಕರಣ ನಡೆಯುತ್ತಿರಲಿಲ್ಲ. ಹುಲಿ ಸೆರೆಗೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ಈಗಾಗಲೇ ಬಾಳೆಲೆ ಸಮೀಪ ಕೊಟ್ಟಗೇರಿಯಲ್ಲಿರಿಸಿರುವ ಬೋನನ್ನು ಕುಮಟೂರು ಗ್ರಾಮಕ್ಕೆ ತಂದು ಹುಲಿ ಸೆರೆಗೆ ಕ್ರಮ ಕೈಗೊಳ್ಳುವದಾಗಿ ಅಂಟೋಣಿ ಭರವಸೆ ನೀಡಿದರು.
ಈ ಸಂದರ್ಭ ಶ್ರೀಮಂಗಲ ಗ್ರಾ.ಪಂ ಉಪಾಧ್ಯಕ್ಷ ಕಳ್ಳಂಗಡ ರಜತ್ ಪೂವಣ್ಣ ಹಾಜರಿದ್ದರು. ಶ್ರೀಮಂಗಲ ಪಶುವೈದ್ಯಾಧಿಕಾರಿ ಡಾ. ಬಿ.ಜಿ.ಗಿರೀಶ್ ಅವರು ಮರಣೋತ್ತರ ಪರೀಕ್ಷೆ ಮಾಡಿದರು. ಪೊನ್ನಂಪೇಟೆ ಅರಣ್ಯ ಇಲಾಖೆಯ ಅಧಿಕಾರಿಗಳಾದ ರಮೇಶ್ ಹಾಗೂ ರಾಜೇಶ್ ಅಲ್ಲದೆ ಕ್ಷೀಪ್ರ ಕಾರ್ಯಾಚರಣೆ ತಂಡ ಸ್ಥಳಕ್ಕೆ ಆಗಮಿಸಿ ಹುಲಿಯ ಜಾಡು ಗುರುತಿಸುತ್ತಿದೆ.