ಪೊನ್ನಂಪೇಟೆ, ಫೆ. 21: ಮನುಷ್ಯತ್ವ ವಿರೋಧಿ ದೋರಣೆಯಿಂದಾಗಿ ಮನುಷ್ಯನ ಮನಸ್ಸಿಗೆ ವಿವಿಧ ಕಾಯಿಲೆಗಳು ಅಂಟಿಕೊಳ್ಳುತ್ತಿದೆ. ಈ ರೋಗಕ್ಕೆ ಸೂಕ್ತ ಚಿಕಿತ್ಸೆ ನೀಡಬೇಕಾಗಿ ರುವದು ಇಂದಿನ ತುರ್ತು ಅಗತ್ಯ ವಾಗಿದೆ ಎಂದು ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಪ್ರಭಾಷಕರಾದ, ವಿಧ್ವಾಂಸ ಪ್ರಮುಖ ಅಬ್ದುಲ್ ರಶೀದ್ ಝೈನಿ ಅಲ್‍ಕಾಮಿಲ್ ಸಖಾಫಿ ಕಕ್ಕಿಂಜೆ ಅವರು ಹೇಳಿದರು.ವರ್ಷಂಪ್ರತಿ ಜರುಗುವ ಇತಿಹಾಸ ಪ್ರಸಿದ್ಧ ಅಂಬಟ್ಟಿ ಮಖಾಂ ಉರೂಸ್‍ನ ಸಮಾರೋಪ ಸಮಾರಂಭದ ಅಂಗವಾಗಿ ನಡೆದ ‘ಸಾರ್ವಜನಿಕ ಮಹಾ ಸಂಗಮ’ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಮನುಷ್ಯನ ದೈಹಿಕ ಆರೋಗ್ಯ ಹದಗೆಟ್ಟರೆ ಇಂದು ಅದನ್ನು ಸರಿಪಡಿಸಲು ಆಧುನಿಕ ಚಿಕಿತ್ಸಾ ಪದ್ದತಿಗಳ ಸೌಲಭ್ಯಗಳಿದೆ. ಆದರೆ ಅದೇ ಮನುಷ್ಯನ ಮನಸ್ಸಿನ ಆರೋಗ್ಯ ಅಸ್ತವ್ಯಸ್ತವಾದರೆ ಅದನ್ನು ಸರಿಪಡಿಸಲು ಸರಿಯಾದ ಚಿಕಿತ್ಸೆಯ ವ್ಯವಸ್ಥೆಗಳಿಲ್ಲದಿರುವದೇ ಇಂದು ಮಾನವೀಯತೆ ಮತ್ತು ಮನುಷ್ಯತ್ವ ಮರೆಯಾಗಲು ಪ್ರಮುಖ ಕಾರಣ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿದ ವೀರಾಜಪೇಟೆಯ ಅನ್ವಾರುಲ್ ಹುದಾ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಅಶ್ರಫ್ ಅಹಸನಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬಟ್ಟಿ ಜಮಾ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷ ಕೆ.ಪಿ. ಶಾದಲಿ ಹಾಜಿ ಅವರು ವಹಿಸಿದ್ದರು.

ವೇದಿಕೆಯಲ್ಲಿ ಬಿಟ್ಟಂಗಾಲ ಗ್ರಾ.ಪಂ. ಅಧ್ಯಕ್ಷ ಪುಚ್ಚಿಮಂಡ ಸಾಬ ಬೆಳ್ಯಪ್ಪ, ಗ್ರಾ.ಪಂ. ಸದಸ್ಯ ಬಿ.ಆರ್. ದಿನೇಶ್, ಕಾಂಗ್ರೆಸ್ ಮುಖಂಡ ಪಿ.ಎಂ. ಹನೀಪ್, ಅಂಬಟ್ಟಿ ಜಮಾ ಮಸೀದಿಯ ಅಬೂ ಸಿನಾನ್ ಹಳ್‍ರಮಿ, ಅಂಬಟ್ಟಿ ಜಮಾ ಮಸೀದಿಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರ, ನಿವೃತ್ತ ಯೋಧ ಎಂ.ಕೆ.ಮುಸ್ತಫಾ, ಉಪಾಧ್ಯಕ್ಷÀ ಕೆ.ಎ. ಯೂಸೂಫ್, ಅಂಬಟ್ಟಿ ಮದ್ರಸಾ ಅಧ್ಯಾಪಕ ಕೆ.ಪಿ. ಮೊಹಮದ್ ಮುಸ್ಲಿಯಾರ್, ಅಂಬಟ್ಟಿಯ ಹಿರಿಯ ಕೆ.ಎಂ. ಮಾಹಿನ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಇಸ್ಮಾಯಿಲ್ ಮುಸ್ಲಿಯಾರ್ ಪ್ರಾರ್ಥಿಸಿದರು. ಅಂಬಟ್ಟಿಯ ಖಾಲಿದ್ ಪೈಝಿ ಸ್ವಾಗತಿಸಿದರು. ಜಮಾಯತ್‍ನ ಆಡಳಿತ ಮಂಡಳಿ ಕಾರ್ಯದರ್ಶಿ ಎಂ.ಎ. ಶಾನು ವಂದಿಸಿದರು. ಸಾಂಪ್ರದಾಯಿಕವಾದ ಮೌಲೂದ್ ಪಾರಾಯಣದ ಬಳಿಕ ಅನ್ನ ಸಂತರ್ಪಣೆ ನಡೆಯಿತು. ಇದಕ್ಕೂ ಮೊದಲ ದಿನ ರಾತ್ರಿ ಉದ್ಬೋದನೆ ಮತ್ತು ದಿಕ್ರ್ ದುಆ ಸಮ್ಮೇಳನ ನಡೆಯಿತು. ದುಆ ಸಮ್ಮೇಳನಕ್ಕೆ ಎಮ್ಮೆಮಾಡಿನ ಅಸ್ಸಯದ್ ಸಾಲಿಂ ತಂಙಲ್ ಅವರು ನೇತೃತ್ವ ವಹಿಸಿದ್ದರು. ಅಂದು ನಡೆದ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಧಾರ್ಮಿಕ ವಿಧ್ವಾಂಸರಾದ ನೌಫಲ್ ಸಖಾಫಿ ಕಳಸ ಅವರು ಭಾಗವಹಿಸಿ ‘ಮರಣ ಮತ್ತು ನಂತರದ ಜೀವನ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.