ವೀರಾಜಪೇಟೆ, ಫೆ. 21: ವೀರಾಜಪೇಟೆ ಪಟ್ಟಣ ಪಂಚಾಯಿತಿಯು 2018-19ನೇ ಸಾಲಿಗೆ ಸ್ವಚ್ಛತೆ ಕಾಮಗಾರಿ ಕುಡಿಯುವ ನೀರು ಪೂರೈಕೆ, ರಸ್ತೆ ಚರಂಡಿ ನಿರ್ಮಾಣ ಹಾಗೂ ಜನಪರ ಕೆಲಸಗಳಿಗೆ ಆದ್ಯತೆ ನೀಡಿ ರೂ.9,59,742 ಉಳಿತಾಯ ಬಜೆಟ್‍ನ್ನು ಅಂಗೀಕರಿಸಲಾಯಿತು.ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಇ.ಸಿ.ಜೀವನ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಬಜೆಟ್ ಸಭೆಯಲ್ಲಿ2018-19ನೇ ಸಾಲಿನ ಆಯವ್ಯಯ ಬಜೆಟ್ ಮೇಲೆ ಚರ್ಚೆ ನಡೆಸಿದ ನಂತರ ಬಜೆಟ್‍ಗೆ ಎಲ್ಲ ಸದಸ್ಯರು ಸಮ್ಮತಿ ನೀಡಿದರು.
ಇದೇ ಸಭೆಯಲ್ಲಿ ಮಾತನಾಡಿದ ಇ.ಸಿ.ಜೀವನ್ ಅವರು 2018-19ನೇ ಸಾಲಿನಲ್ಲಿ ಸರಕಾರದಿಂದ ಬಿಡುಗಡೆಯಾಗುವ ವಿವಿಧ ಅನುದಾನಗಳು, ಪಟ್ಟಣ ಪಂಚಾಯಿತಿಯ ಸ್ವತ: ನಿಧಿಯಡಿಯಲ್ಲಿ ಸಾರ್ವಜನಿಕರಿಗೆ ನೀಡಬೇಕಾದ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ.ಪಟ್ಟಣ ಪಂಚಾಯಿತಿಯ ಆದಾಯವನ್ನು
(ಮೊದಲ ಪುಟದಿಂದ) ಹೆಚ್ಚಿಸಿ ಪಟ್ಟಣ ಪಂಚಾಯಿತಿಯ ಆರ್ತಿಕ ಪರಿಸ್ಥಿತಿಯನ್ನು ಸುಧಾರಿಸಲು ಹೊಸದಾಗಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವ ಕೆಲಸಗಳಿಗೂ ಮೊದಲ ಆದ್ಯತೆ ವಹಿಸುವದರೊಂದಿಗೆ ಸಾರ್ವಜನಿಕರಿಗೆ ವಿವಿಧ ವೈಯುಕ್ತಿಕ ಯೋಜನೆಗಳನ್ನು ಒದಗಿಸಲು ಕ್ರಮ ವಹಿಸಲಾಗುವದು ಎಂದರು.
ಖಾಸಗಿ ಬಸ್ಸು ನಿಲ್ದಾಣದ ಮಾರುಕಟ್ಟೆಯ ಆರ್.ಸಿ.ಸಿ ಕಟ್ಟಡದ ಒಂದನೇ ಅಂತಸ್ತಿನಲ್ಲಿ ರೂ 60ಲಕ್ಷದಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಸಭೆ ನಿರ್ಧರಿಸಿತು. ಇದಕ್ಕಾಗಿ ಪಟ್ಟಣ ಪಂಚಾಯಿತಿಯಲ್ಲಿರುವ ರೂ 74ಲಕ್ಷ ಹಣವಿದ್ದು ಇದರಲ್ಲಿ ರೂ 60ಲಕ್ಷವನ್ನು ಕಾಮಗಾರಿ ಬಳಸಲು ತೀರ್ಮಾನಿಸಲಾಯಿತು.
ಬಜೆಟ್‍ನ ಪಕ್ಷಿ ನೋಟ
ಆರಂಭದ ಶಿಲ್ಕು 3,05,68,742, ವಿವಿಧ ಬಾಬುಗಳಿಂದ ಒಟ್ಟು ಆದಾಯ 15,13,30,500, ಒಟ್ಟು 18,18,99,242, ಖರ್ಚು 18,09,39,500
2018-19 ರ ಅಂತಿಮ ಉಳಿತಾಯ ರೂ 9,59,742 ಗೆ ಸಭೆ ಅಂಗೀಕಾರ ನೀಡಿತು.
ಸ್ವಚ್ಛತೆ ಕಾಮಗಾರಿಗೆ ರೂ ಎರಡುಕೋಟಿ ಹದಿಮೂರು ಲಕ್ಷ, ಕುಡಿಯುವ ನೀರು ಪೊರೈಕೆಗೆ ಎರಡು ಕೋಟಿ ಎಪ್ಪತ್ತು ಲಕ್ಷ, ರಸ್ತೆ, ಚರಂಡಿ ನಿರ್ಮಾಣ ದುರಸ್ತಿಗೆ ರೂ ಒಂದುಕೋಟಿ ಹದಿಮೂರು ಲಕ್ಷವನ್ನು ಆದ್ಯತೆ ಮೇರೆ ಬಜೆಟ್‍ನಲ್ಲಿ ಕಾಯ್ದಿರಿಸಲಾಗಿದೆ.
ಸಭೆಯ ಪ್ರಾರಂಭದಲ್ಲಿ ನಾಮಕರಣ ಸದಸ್ಯ ರಾಜೇಶ್ ಮಾತನಾಡಿ ತಾ:19ರಂದು ಹರಾಜು ಪ್ರಕ್ರಿಯೆ ಸಂದರ್ಭದಲ್ಲಿ ಸಿ.ಎ.ನಾಸರ್ ಎಂಬುವರು ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್‍ಗೆ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದರ ಕುರಿತು ನಿನ್ನೆ ದಿನ ಸಿಬ್ಬಂದಿಗಳು ಲೇಖನಿ ಸ್ಥಗಿತ ಪ್ರತಿಭಟನೆ ನಡೆಸಿದ್ದಾರೆ. ಇದರ ಮಾಹಿತಿಯನ್ನು ಸಭೆಗೆ ತಿಳಿಸುವಂತೆ ಒತ್ತಾಯಿಸಿದಾಗ ಬಜೆಟ್ ಸಭೆಯಲ್ಲಿ ಈ ಚರ್ಚೆ ಅಗತ್ಯವಿಲ್ಲ, ಮುಂದಿನ ಸಭೆಯಲ್ಲಿ ಇದನ್ನು ಚರ್ಚಿಸುವಂತೆ ಕೆಲವು ಸದಸ್ಯರುಗಳು ಸೂಚಿಸಿದರೆ ಕೆಲವರು ಕಾನೂನು ಪ್ರಕಾರ ಪೊಲೀಸರಿಗೆ ದೂರು ನೀಡುವಂತೆ ಸಭೆಯಲ್ಲಿ ಆಗ್ರಹಿಸಿದರು.
ಸಭೆಯಲ್ಲಿ ಮೂರು ಮಂದಿ ನಾಮಕರಣ ಸದಸ್ಯರುಗಳು ಸೇರಿದಂತೆ ಒಟ್ಟು 19ಮಂದಿ ಸದಸ್ಯರುಗಳು ಹಾಜರಿದ್ದರು.
ಉಪಾಧ್ಯಕ್ಷೆ ತಸ್ನೀಂ ಅಕ್ತರ್, ಸ್ಥಾಯಿ ಸಮಿತಿ ಅಧ್ಯಕ್ಷ ರಚನ್ ಮೇದಪ್ಪ, ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ರೆವಿನ್ಯು ಇನ್ಸ್‍ಪೆಕ್ಟರ್ ಸೋಮೇಶ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಾಮಕರಣ ಸದಸ್ಯರುಗಳಾದ ಪಟ್ಟಡ ರಂಜಿ ಪೂಣಚ್ಚ, ರಾಜೇಶ್ ಹಾಗೂ ಮಹಮ್ಮದ್ ರಾಫಿ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಪಟ್ಟಣ ಪಂಚಾಯಿತಿಯ ಬಜೆಟ್ ನಿರಾಶದಾಯಕವಾಗಿದ್ದು ಅನುದಾನಗಳ ಮಾಹಿತಿಯನ್ನು ಅಧ್ಯಕ್ಷರು ಸೂಕ್ತವಾಗಿ ಒದಗಿಸಿಲ್ಲ ಎಂದು ದೂರಿದರು.