ಸೋಮವಾರಪೇಟೆ,ಫೆ.21: ತಾಲೂಕಿನ ಶಾಂತಳ್ಳಿ ಗ್ರಾಮದಲ್ಲಿ ಬಿಎಸ್‍ಎನ್‍ಎಲ್ ಟವರ್ ಇದ್ದರೂ ನೆಟ್ಟಗೆ ನೆಟ್‍ವರ್ಕ್ ಇಲ್ಲ, ಮುಂದಿನ 4 ದಿನದ ಒಳಗೆ ಸಮಸ್ಯೆ ಸರಿಪಡಿಸದಿದ್ದಲ್ಲಿ ಸೋಮವಾರಪೇಟೆಯಲ್ಲಿರುವ ಬಿಎಸ್‍ಎನ್‍ಎಲ್ ಕಚೇರಿಗೆ ಬೀಗ ಜಡಿಯುವದಾಗಿ ಶಾಂತಳ್ಳಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಗ್ರಾಮೀಣ ಪ್ರದೇಶವಾಗಿರುವ ಶಾಂತಳ್ಳಿಯಲ್ಲಿರುವ ಸರ್ಕಾರಿ ಆಸ್ಪತ್ರೆ ಬಳಿ ಬಿಎಸ್‍ಎನ್‍ಎಲ್ ಸಂಸ್ಥೆಯಿಂದ ಟವರ್ ನಿರ್ಮಿಸಲಾಗಿದ್ದರೂ ವಿದ್ಯುತ್ ಸ್ಥಗಿತಗೊಳ್ಳುವ ಸಂದರ್ಭ ನೆಟ್‍ವರ್ಕ್ ಇರುವದಿಲ್ಲ. ಇದರಿಂದಾಗಿ ಸಮಸ್ಯೆಯಾಗಿದ್ದು ತಕ್ಷಣ ಟವರ್ ಕಾರ್ಯನಿರ್ವಹಿಸಲು ನೂತನ ಬ್ಯಾಟರಿಗಳನ್ನು ಅಳವಡಿಸಬೇಕೆಂದು ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿರುವ ಸಾರ್ವಜನಿಕರು, ತಪ್ಪಿದಲ್ಲಿ ಕಚೇರಿಗೆ ಬೀಗ ಜಡಿದು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದ್ದಾರೆ.

ತಾಲೂಕು ಕೇಂದ್ರದಿಂದ 10 ಕಿ.ಮೀ. ದೂರವಿರುವ ಶಾಂತಳ್ಳಿ ಹೋಬಳಿಯ ಶಾಂತಳ್ಳಿ ಗ್ರಾಮದಲ್ಲಿ ಕಳೆದ 6 ವರ್ಷಗಳ ಹಿಂದೆ ಲಕ್ಷಾಂತರ ರೂ. ವ್ಯಯಿಸಿ ಟವರ್ ನಿರ್ಮಿಸಿದ್ದರೂ ಹಳೆಯ ಬ್ಯಾಟರಿಗಳನ್ನು ಅಳವಡಿಸಿ ಉದ್ಘಾಟನೆ ಮಾಡಲಾಗಿತ್ತು.

ನಂತರದ ದಿನಗಳಲ್ಲಿ ಈ ಭಾಗದ ಪ್ರತಿ ಮನೆಯವರೂ ಮೂರರಿಂದ ನಾಲ್ಕು ಮೊಬೈಲ್‍ಗಳನ್ನು ಖರೀದಿಸಿ ಬಿಎಸ್‍ಎನ್‍ಎಲ್ ಸಿಮ್ ಅಳವಡಿಸಿಕೊಂಡಿದ್ದರು. ಪ್ರಾರಂಭದಲ್ಲಿ ಸರಿಯಿದ್ದ ವ್ಯವಸ್ಥೆ ನಂತರದ ದಿನಗಳಲ್ಲಿ ಹದಗೆಡಲು ಆರಂಭಿಸಿ, ಇಂದು ಬಿಎಸ್‍ಎನ್‍ಎಲ್ ಸಿಮ್ ಖರೀದಿಸಿದಕ್ಕಾಗಿ ಇಲ್ಲಿನ ಜನತೆ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಗ್ರಾಮಸ್ಥ ಸುಂದರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿದ್ಯುತ್ ಸ್ಥಗಿತಗೊಳ್ಳುವ ಸಂದರ್ಭ ಈ ಮೊಬೈಲ್ ಟವರ್‍ನ ಕಾರ್ಯವೂ ಸ್ಥಗಿತಗೊಳ್ಳುತ್ತಿದ್ದು, ನೂತನ ಬ್ಯಾಟರಿ ಅಳವಡಿಸದ ಹಿನ್ನೆಲೆ ಸಮಸ್ಯೆ ಎದುರಾಗಿದೆ. ಇಲ್ಲಿಗೆ ಬರುವ ಬ್ಯಾಟರಿಗಳನ್ನು ಇಲಾಖೆಯ ಅಧಿಕಾರಿಗಳು ಬೇರೆಡೆಗೆ ಅಳವಡಿಸುತ್ತಿದ್ದಾರೆ. ಗ್ರಾಮೀಣ ಭಾಗದ ಜನತೆಯನ್ನು ಇನ್ನಷ್ಟು ಆದಿ ಕಾಲಕ್ಕೆ ತಳ್ಳುವ ಯತ್ನವನ್ನು ಬಿಎಸ್‍ಎನ್‍ಎಲ್ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಕೆ.ಎಂ. ಲೋಕೇಶ್, ಡಿ.ಎಂ. ಪ್ರಸಾದ್, ದುದ್ದಯ್ಯ, ಈರಪ್ಪ, ಕೆ.ಎಂ. ಗಿರೀಶ್, ಗುರುಪ್ರಸಾದ್, ಸಂಜಯ್ ಸೇರಿದಂತೆ ಇತರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದಿನ 4 ದಿನಗಳ ಒಳಗೆ ಶಾಂತಳ್ಳಿಯಲ್ಲಿರುವ ಬಿಎಸ್‍ಎನ್‍ಎಲ್ ಟವರ್ ಕೇಂದ್ರಕ್ಕೆ ನೂತನ ಬ್ಯಾಟರಿ ಅಳವಡಿಸದಿದ್ದರೆ ಕಚೇರಿಗೆ ಬೀಗ ಜಡಿಯಲಾಗುವದು. ಕಚೇರಿಯ ಎದುರೇ ಗ್ರಾಮಸ್ಥರೆಲ್ಲರೂ ಠಿಕಾಣಿ ಹೂಡಿ ಅಹೋರಾತ್ರಿ ಧರಣಿ ನಡೆಸಲಾಗುವದು ಎಂದು ಪ್ರಮುಖರಾದ ತಮ್ಮಣ್ಣಿ, ಹರೀಶ್‍ಕುಮಾರ್, ಮಧುಕುಮಾರ್ ಸೇರಿದಂತೆ ಇತರರು ಎಚ್ಚರಿಸಿದ್ದಾರೆ.