ವರದಿ : ದುಗ್ಗಳ ಸದಾನಂದನಾಪೋಕ್ಲು, ಫೆ. 20: ಕರಿಮೆಣಸು ಫಸಲಿಗೆ ತಮ್ಮದೇ ಆದ ವಿನೂತನ ರೀತಿಯಲ್ಲಿ ಹನಿ ನೀರಾವರಿ ಮಾಡುವ ಮೂಲಕ ಕಪ್ಪುಚಿನ್ನಕ್ಕೆ ಅಧಿಕ ಇಳುವರಿಯ ಹೊಳಪನ್ನು ನೀಡುವಲ್ಲಿ ಕಿರುಂದಾಡು ಗ್ರಾಮದ ಕಾಫಿ ಬೆಳೆಗಾರ ಕಡ್ಯದ ಅನು ಕಾವೇರಪ್ಪ ಯಶಸ್ವಿಯಾಗಿ ತನ್ಮೂಲಕ ಇತರ ಬೆಳೆಗಾರರಿಗೆ ಮಾದರಿಯಾಗಿದ್ದಾರೆ.(ಮೊದಲ ಪುಟದಿಂದ) ಪಾರಾಣೆ ಕೊಣಂಜಗೇರಿ ಗ್ರಾ.ಪಂ. ವ್ಯಾಪ್ತಿಯ ಕಿರುಂದಾಡು ಗ್ರಾಮದ ಕಡ್ಯದ ಅನು ಕಾವೇರಪ್ಪ, ತಮ್ಮ ತೋಟದಲ್ಲಿ ಬೆಳೆದ ಕರಿಮೆಣಸು ಫಸಲು ಪ್ರತಿವರ್ಷ ಸಾಮಾನ್ಯ ಇಳುವರಿ ಪಡೆಯುತ್ತಿದ್ದುದ್ದನ್ನು ನೋಡಿ, ಕಪ್ಪುಚಿನ್ನದ ಅಧಿಕ ಇಳುವರಿ ಪಡೆಯಲು ಕರಿಮೆಣಸು ಬಳ್ಳಿಗಳಿಗೆ ನೀರಿನ ಅಗತ್ಯತೆ ಇರುವದನ್ನು ಮನಗಂಡು ಪ್ರತಿದಿನ ಬಳ್ಳಿಗಳಿಗೆ ನೀರನ್ನು ಹರಿಸುವದು ಹೇಗೆಂಬ ಪ್ರಶ್ನೆ ಮೂಡಿತು. ತೆಂಗಿನ ಗಿಡಗಳಿಗೆ ನೀರು ತುಂಬಿದ ಬಿಂದಿಗೆಗಳನ್ನು ಇಡುವಂತೆ ಕರಿಮೆಣಸು ಬಳ್ಳಿಗಳಿರುವ ಮರಗಳಿಗೂ ನೀರನ್ನು ಹರಿಸಬಹುದೆಂಬ ಆಲೋಚನೆ ಬಂದಿತು. ಬಿಂದಿಗೆಗಳನ್ನು ಇಟ್ಟ ನಂತರ ನೀರನ್ನು ಹೇಗೆ ಹರಿಸಬಹುದೆಂಬ ಪ್ರಶ್ನೆಗೆ ಅವರ ನೆನಪಿಗೆ ಬಂದಿದ್ದೇ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ನೀಡುವ ಗ್ಲೂಕೋಸ್ ಡ್ರಿಪ್ಸ್ ನೀಡುವ ಟ್ಯೂಬ್ ಅಷ್ಟು ತಮ್ಮ ಮನದಲ್ಲಿ ಹೊಳೆದದ್ದೇ ತಡ ಅನುಕಾವೇರಪ್ಪ, ನೂರಾರು ಬಿಂದಿಗೆಗಳನ್ನು ಖರೀದಿಸಿ ಕಾಳುಮೆಣಸು ಬಳ್ಳಿಗಳಿರುವ ಮರಗಳಿಗೆ ಬಿಂದಿಗೆಗಳನ್ನು ಇಟ್ಟು ಬಳಿಕ ಆಸ್ಪತ್ರೆಯಲ್ಲಿ ಬಳಸಿದ ಗ್ಲೂಕೋಸ್ ಡ್ರಿಪ್ಸ್‍ನ ಬಾಟಲಿಗಳ ಟ್ಯೂಬ್‍ಗಳನ್ನು ಶೇಖರಿಸಿ ಅದನ್ನು ಬಿಂದಿಗೆಯ ತಳಭಾಗಕ್ಕೆ ಚುಚ್ಚಿ ಕಾಳುಮೆಣಸಿನ ಬಳ್ಳಿಗಳಿಗೆ ಹನಿ ನೀರಾವರಿ ಮಾಡಲು ಶುರುವಿಟ್ಟರು.

ತಮ್ಮ ತೋಟದಲ್ಲಿದ್ದ ಕೆರೆಯ ಮೂಲಕ ಟ್ಯಾಂಕ್‍ವೊಂದಕ್ಕೆ ನೀರನ್ನು ಹರಿಸಿ ಬಿಂದಿಗೆಗಳಿಗೆ ತುಂಬಿಸಿದ ಬಳಿಕ ನೀರಿಗೆ ಎಲೆ ಕಡ್ಡಿಗಳು ಬೀಳದ ರೀತಿಯಲ್ಲಿ ಬಿಂದಿಗೆಯ ಸುತ್ತ ಪ್ಲಾಸ್ಟಿಕ್ ನೆಟ್ ಹಾಕಿದರು. ನಂತರ ಗ್ಲೂಕೋಸ್ ಟ್ಯೂಬ್ ಅನ್ನು ಬಿಂದಿಗೆಗೆ ಅಳವಡಿಸಿ ಅದರ ಮೂಲಕ ಕರಿಮೆಣಸು ಬಳ್ಳಿಗಳ ಬೇರುಗಳಿಗೆ ದಿನದ ಇಪ್ಪತ್ನಾಲ್ಕು ಗಂಟೆಯೂ ನೀರಿನ ಹನಿಗಳು ಬೀಳುವಂತೆ ಮಾಡಿ ಸುಮಾರು 7-8 ದಿನಗಳಿಗೊಮ್ಮೆ ಕೆರೆಯಿಂದ ಬಿಂದಿಗೆಗಳಿಗೆ ನೀರನ್ನು ತುಂಬಿಸಲಾಯಿತು. ಒಂದು ಬಿಂದಿಗೆಗೆ 40 ರೂ. ಹಾಗೂ ಪ್ಲಾಸ್ಟಿಕ್ ನೆಟ್‍ಗೆ 10 ರೂ ಸೇರಿದಂತೆ ಒಂದು ಬಿಂದಿಗೆಗೆ ಕೇವಲ 50 ರೂಪಾಯಿಗಳ ಖರ್ಚಿನಲ್ಲಿ ಬಳ್ಳಿಗÀಳು ಹಸಿರಿನಿಂದ ಕಂಗೊಳಿಸಿದವು. ಅಷ್ಟೇ ಅಲ್ಲದೆ, ವರ್ಷದಿಂದ ವರ್ಷಕ್ಕೆ ಕರಿಮೆಣಸಿನ ಇಳುವರಿಯೂ ಉತ್ತಮವಾಗಿದ್ದು, ಉತ್ತಮ ಕರಿಮೆಣಸು ಇಳುವರಿಯನ್ನು ಪಡೆಯುತ್ತಿರುವ ಕಡ್ಯದ ಅನು ಕಾವೇರಪ್ಪ ಪದವೀಧರರಾಗಿದ್ದು, ಕೃಷಿಯಲ್ಲೂ ಆಸಕ್ತಿಯಿಂದ ತೊಡಗಿಸಿಕೊಳ್ಳುವ ಮೂಲಕ ಇತರ ಬೆಳೆಗಾರರಿಗೆ ಮಾದರಿಯಾಗಿದ್ದಾರೆ. ಅನುಕಾವೇರಪ್ಪ ಅವರ ಹನಿ ನೀರಾವರಿಯಿಂದಾಗಿ ಬೇಸಿಗೆಯ ಬಿಸಿಲಿಗೆ ಬಳ್ಳಿಗಳು ಬಾಡದೆ, ಹಸಿರಿನಿಂದ ನಳನಳಿಸುತ್ತಿವೆ. ಆಸಕ್ತಿ ಮತ್ತು ಪರಿಶ್ರಮವಿದ್ದಲ್ಲಿ ಏನನ್ನಾದರೂ ಸಾಧಿಸಬಹುದೆಂಬದಕ್ಕೆ ಇವರು ಸಾಕ್ಷಿಯಾಗಿದ್ದಾರೆ. ಎರಡು ವರ್ಷಗಳ ಪ್ರಯತ್ನ ಇದೀಗ ಸಾರ್ಥಕವಾಗಿದೆ .