ಮಡಿಕೇರಿ, ಫೆ. 20 : ಕಾಫಿ ನಾಡು ಕೊಡಗು ಜಿಲ್ಲೆಗೆ ನಕ್ಸಲರು ಒಂದೇ ತಿಂಗಳಿನಲ್ಲಿ ಎರಡನೇ ಬಾರಿ ಮರು ಪ್ರವೇಶಿಸಿದ್ದಾರೆ. ಇದೇ ತಿಂಗಳ ತಾ.2 ರಂದು ಮೂವರು ಸಶಸ್ತ್ರಧಾರೀ ಪುರುಷ ನಕ್ಸಲರು ಸಂಪಾಜೆ ಸನಿಹದ ಗುಡ್ಡಗದ್ದೆ ಗ್ರಾಮದಲ್ಲಿ ಶಂಕಪ್ಪ ಅವರ ಮನೆ ಪ್ರವೇಶಿಸಿ, ತಿಂದುಂಡು, ಅಕ್ಕಿ ಮತ್ತಿತರ ಪದಾರ್ಥ ಒಯ್ದಿದ್ದ ಘಟನೆ ಇನ್ನೂ ಮರೆಯಾಗಿಲ್ಲ. ಅಷ್ಟರಲ್ಲೇ ಮತ್ತೆ ಮೂವರು ನಕ್ಸಲರ ಮರು ಪ್ರವೇಶ ಜಿಲ್ಲೆಯ ನಾಪೋಕ್ಲು ವಿಭಾಗದಲ್ಲಿ ಕಂಡು ಬಂದಿದೆ. ನಾಪೋಕ್ಲು ಸನಿಹದ ತೋಟವೊಂದರ ಲೈನ್ ಮನೆಗಳ ಬಳಿ ಸುಳಿದ ನಕ್ಸಲರು ತೋಟದ ರೈಟರ್ ಕುಡಿಯರ ರಘು ಪೆಮ್ಮಯ್ಯ ಎಂಬವರ ಮನೆಗೆ ರಾಜಾರೋಷವಾಗಿ ಪ್ರವೇಶಿಸಿದ್ದಾರೆ. ಮೂವರು ಪುರುಷರ ಕೈಗಳಲ್ಲಿ ಕೋವಿಗಳಿದ್ದು, ಮಿಲಿಟರಿ ಸಮವಸ್ತ್ರದಲ್ಲಿ ನುಗ್ಗಿದಾಗ ಮನೆಯಲ್ಲಿ ಕೆಲ ಕಾಲ ಸ್ತಬ್ಧ ವಾತಾವರಣ ಮೂಡಿದೆ.

ಕುಂಜಿಲ-ಕಕ್ಕಬ್ಬೆ ಗಾಮ ಪಂಚಾಯ್ತಿ ವ್ಯಾಪ್ತಿಯ ನಾಲಡಿಯ ಈ ತೋಟ ಬ್ರ್ರಿಗೇಡಿಯರ್ ಬಲ್ಲಚಂಡ ಮುತ್ತಣ್ಣ (ನಿವೃತ್ತ) ಅವರ ಮಾಲೀಕತ್ವದ್ದಾಗಿದೆ. ಮುತ್ತಣ್ಣ ಅವರು ಬೆಂಗಳೂರಿನಲ್ಲಿ ವಾಸವಿದ್ದು ತೋಟದ ವ್ಯವಸ್ಥಾಪಕರಾಗಿ ಚಂಗಪ್ಪ ಅವರನ್ನು ನೇಮಿಸಿದ್ದು ಅವರು ಕಕ್ಕಬ್ಬೆಯಲ್ಲಿ ವಾಸಿಸುತ್ತ್ತಿದ್ದಾರೆ.

ನಿನ್ನೆ ದಿನ ರೈಟರ್ ಕುಡಿಯರ ರಘು ಪೆಮ್ಮಯ್ಯ ಅವರು ತೋಟದ ಸುಮಾರು 10 ಮಂದಿ ಕಾರ್ಮಿಕರನ್ನು ರಾತ್ರಿ ಊಟಕ್ಕಾಗಿ ವಿಶೇಷವಾಗಿ ಆಹ್ವಾನಿಸಿದ್ದರು. ಈ ಸಂದರ್ಭ ಕೋಳಿ-ಹಂದಿ ಮಾಂಸದ ವಿಶೇಷ ಅಡುಗೆ ತಯಾರಿ ನಡೆದಿತ್ತು. ಸಂಜೆ ಸುಮಾರು 5.30 ರ ವೇಳೆ ಕಾರ್ಮಿಕರು ಕೆಲಸ ಮುಗಿಸಿ ಪೆಮ್ಮಯ್ಯ ಅವರ ಮನೆಯಲ್ಲಿ ಸೇರಿದ್ದ ಸಂದರ್ಭವದು. ಪೆಮ್ಮಯ್ಯ ಹಾಗೂ ಅವರ ಪತ್ನಿ ಕವಿತಾ ಮತ್ತು ಮೂವರು ಮಕ್ಕಳೂ ಮನೆಯಲ್ಲಿದ್ದರು. 10 ಮಂದಿ ಇತರ ಕಾರ್ಮಿಕರೂ ಜೊತೆಗೂಡಿದ್ದರು.

ಧಡ್, ಧಡ್‍ಎನ್ನುವ ಹೆಜ್ಜೆ ಸಪ್ಪಳದೊಂದಿಗೆ ಮೂವರು ಮಿಲಿಟರಿ ವಸ್ತ್ರಧಾರಿ, ಸಶಸ್ತ್ರಧಾರಿ ನಕ್ಸÀಲರು ನೇರವಾಗಿ ಪೆಮ್ಮಯ್ಯ ಅವರ ಮನೆ ಆವರಣ ಪ್ರವೇಶಿಸುತ್ತಿದ್ದಂತೆ ಕೆಲ ಕಾಲ ಮನೆಯವರು, ಕಾರ್ಮಿಕರು ಸ್ತಂಭೀಭೂತರಾದರು. ಬಂದೊಡನೆ ಕಾಫಿ, ಚಹಾ ಕೊಡಿ ಎನ್ನುವ ಬೇಡಿಕೆ ಬಂದಾಗ ಮನೆಯ ಗೃಹಿಣಿ ತಯಾರಿಸಿ ನೀಡಿದರು. ಒಳಗೆ ಅಡುಗೆ ತಯಾರಿಕೆಯ ಪದಾರ್ಥಗಳು ಘಮಘಮಿಸುತ್ತಿದ್ದಂತೆ ‘ನಮಗೆ ರಾತ್ರಿ ಊಟ ಬೇಕು’ ಎನ್ನುವ ಬೇಡಿಕೆÀ ಬಂದಾಗ ಎಲ್ಲದಕ್ಕೂ ಮನೆಯವರು ಸೈ ಎನ್ನದೆ ವಿಧಿಯಿಲ್ಲ! ಮೂರು ಬಂದೂಕುಗಳು ಸದ್ದು ಮಾಡದಿರಲಿ ಎಂದಷ್ಟೇ ಮನೆಯವರ ಆತಂಕದ ಮೌನ ಪ್ರಾರ್ಥನೆ. ಜೊತೆಗೆ 5 ಕೆ.ಜಿ. ಅಕ್ಕಿ, ಟೊಮೇಟೊ ಮೊದಲಾದ ತರಕಾರಿ, ಜಿನಸಿ ಸಾಮಗ್ರಿ ಬೇಕೆಂದಾಗ ಎಲ್ಲವನ್ನೂ ಮನೆಯವರು ಒದಗಿಸಿದರು. ಈ ನಡುವೆ ಎಲ್ಲರ ಬಳಿಯಿದ್ದ ಮೊಬೈಲ್‍ಗಳನ್ನು ಸಂಗ್ರಹಿಸಿ ಪಡೆದ ಆಗಂತುಕರು ಯಾರೂ ಪೊಲೀಸರಿಗೆ ಮಾಹಿತಿ ನೀಡದಂತೆ ಮುನ್ನೆಚ್ಚರಿಕೆ ವಹಿಸಿದ್ದರು. ಅವರು ಮನೆಯಿಂದ ರಾತ್ರಿ ತೆರಳುವಾಗಷ್ಟೇ ಮೊಬೈಲ್‍ಗಳನ್ನು ಹಿಂತಿರುಗಿಸಲಾಯಿತು ಎಂಬದು ತಿಳಿದು ಬಂದ ವಿಚಾರ.

‘ನಿಮಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಏನೆಲ್ಲ ಸೌಲಭ್ಯ ಸಿಕ್ಕುತ್ತಿದೆ. ಸರಿಯಾಗಿ ದೊರೆಯುತ್ತದೆಯೇ?’ ಎಂದು ಮನೆ ಮಂದಿ ಮತ್ತು ಕಾರ್ಮಿಕರೊಂದಿಗೆ ಈ ಮೂವರು ಪ್ರಶ್ನೆಗಳನ್ನು ಮುಂದಿಟ್ಟರು. ನೋಟುಗಳ ಅಮಾನ್ಯೀಕರಣದಿಂದ ತೊಂದರೆಯಾಗಿಲ್ಲವೇ? ಎಂಬ ಪ್ರಶ್ನೆಯೂ ಕೇಳಿ ಬಂದಿತು. ಕೈ ಬರಹದಲ್ಲಿದ್ದ ವಿಚಾರಗಳನ್ನೂ ನೀಡಲಾಯಿತು ಎನ್ನಲಾಗಿದೆ. ಅವರುಗಳ ನುಡಿಯಲ್ಲಿ ಕಾರ್ಮಿಕರ ಬಗ್ಗೆ ಕಾಳಜಿ ವ್ಯಕ್ತವಾಗಿತ್ತು. ಹಾಗೆಂದು ಅವರಿಂದಲೇ ತಮಗೆ ಬೇಕಾದ ವಸ್ತುಗಳನ್ನು ನಿರ್ದಾಕ್ಷಿಣ್ಯವಾಗಿ ಕೇಳಿ ಪಡೆದುಕೊಳ್ಳುವ ಒರಟುತನವೂ ಅವರಲ್ಲಿತ್ತು. ಸಂಜೆಗತ್ತಲಾಗುತ್ತಿದ್ದಂತೆ ಬಿಸಿ ಬಿಸಿ ಅಡುಗೆ ಸಿದ್ಧಗೊಂಡಿತು. ಕೋಳಿ, ಹಂದಿ ಮಾಂಸಗಳ

(ಮೊದಲ ಪುಟದಿಂದ) ವಿಶೇಷ ಅಡುಗೆಯನ್ನು ಈ ಮೂವರೂ ಚೆನ್ನಾಗಿಯೇ ಸವಿದರು. ರಾತ್ರಿ ಸುಮಾರು 10.30 ರ ವೇಳೆ ‘ಗುಡ್ ಬೈ’ ಹೇಳಿ ಸ್ಥಳದಿಂದ ಮೆಲ್ಲನೆ ಮರೆಯಾದರು. ಸನಿಹದ ಕಾಡಿನತ್ತ ದಾಪುಗಾಲು ಹಾಕಿದರು. ಈ ಪ್ರದೇಶವು ಪ್ರವಾಸಿ ತಾಣವಾದ ತಡಿಯಂಡಮೋಳು ಸನಿಹದಲ್ಲಿರುವದು ಪೊಲೀಸರ ವಿಶೇಷ ಗಮನಕ್ಕೆ ಕಾರಣವಾಗಿದೆ.

ಇಂದು ಘಟನೆಯ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್. ಮಡಿಕೇರಿ ವಿಭಾಗದ ಡಿವೈಎಸ್‍ಪಿ ಸುಂದರ್‍ರಾಜ್, ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ನಂಜುಂಡಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸದ್ದಲ್ಲದೆ ಮೊಕ್ಕಾಂ ಹೂಡಿದ್ದಾರೆ.

ಬುಧವಾರದಿಂದ ನಕ್ಸಲ್ ನಿಗ್ರಹ ಪಡೆ ಸಿಬ್ಬಂದಿ ಕೊಡಗಿನ ಪೊಲೀಸರ ಸಹಕಾರದೊಂದಿಗೆ ನಾಲಡಿ ಸುತ್ತಮುತ್ತಲ ಅರಣ್ಯ ಪ್ರದೇಶದಲ್ಲಿ ‘ಕೂಂಬಿಂಗ್’ ಕಾರ್ಯಾಚರಣೆ ನಡೆಸಲಿರುವದಾಗಿ ‘ಶಕ್ತಿ’ ಗೆ ತಿಳಿದುಬಂದಿದೆ.

ಕಳೆದ 5 ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಒಂದಲ್ಲ ಒಂದು ರೀತಿ ವಿವಿಧ ಗ್ರಾಮಾಂತರ ಪ್ರದೇಶಗಳಲ್ಲಿವಿಶೇಷವಾಗಿ ಕಾರ್ಮಿಕರ ವಾಸ ಸ್ಥಾನಗಳಲ್ಲಿ ನಕ್ಸಲರ ಪ್ರವೇಶ ನಡೆಯುತ್ತಲೇ ಇದೆ. ಇದುವರೆಗೂ ಕೊಡಗಿಗೆ ಬಂದ ನಕ್ಸಲರ ಸ್ಷಷ್ಟ ಸುಳಿವು ಲಭಿಸಿಲ್ಲ. ಇತ್ತೀಚೆಗೆ ಸಂಪಾಜೆ ವಿಭಾಗದಲ್ಲಿ ಕಾಣಿಸಿಕೊಂಡಿದ್ದ ಮೂವರು ನಕ್ಸಲರೇ ಇದೀಗ ನಾಪೋಕ್ಲು ವಿಭಾಗದಲ್ಲಿ ಬಂದಿರಬಹುದೇ ಎನ್ನುವದೂ ಕೂಡ ಖಾತರಿಗೊಂಡಿಲ್ಲ. ಕೇರಳದ ನಕ್ಸÀಲ್ ನಾಯಕ ರೂಪೇಶ್ ಎಂಬಾತನನ್ನು ಮಾತ್ರ ಕೊಡಗಿನ ಹಲವಡೆ ಸಂಚರಿಸಿದ್ದ ಆರೋಪದ ಹಿನ್ನೆಲೆ 2015ರ ಜೂನ್‍ನಲ್ಲಿ ಮಡಿಕೇರಿಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಕೇರಳಕ್ಕೆ ವಾಪಸ್ ಕರೆದೊಯ್ಯಲಾಗಿತ್ತು. ಇದೀಗ ರಾಜ್ಯ ಚುನಾವಣೆಯೂ ಸನಿಹಗೊಳ್ಳುತ್ತಿದೆ. ಈ ಹಿಂದೆಯೇ ಕೊಡಗಿನ ಅನೇಕ ಚುನಾವಣಾ ಬೂತ್‍ಗಳ ಕೇಂದ್ರಗಳನ್ನು ನಕ್ಸಲ್ ಸೂಕ್ಷ್ಮ ತಾಣಗಳಾಗಿ ಘೋಷಿಸಲಾಗಿದೆ. ಇದೀಗ ಮತ್ತೆ ನಕ್ಸಲ್ ಚಲನ ವಲನ ಹೆಚ್ಚಾಗುತ್ತಿರುವ ಹಿನ್ನೆಲೆ ಇನ್ನೂ ಹೆಚ್ಚಿನ ಬೂತ್‍ಗಳು ಸೂಕ್ಷ್ಮ ಕೇಂದ್ರಗಳಾಗಿ ಪರಿಗಣಿಸಲ್ಪಡುವ ಸಾಧ್ಯತೆ ಹೆಚ್ಚಾಗಿದೆ.

-‘ಶಕ್ತಿ ವಿಶೇಷ ವರದಿ. ನೆರವು: ಪ್ರಭಾಕರ್, ದುಗ್ಗಳ