ನಾಪೋಕ್ಲು, ಫೆ. 21: ನಿನ್ನೆ ಸಂಜೆಗತ್ತಲೆ ನಡುವೆ ಇಲ್ಲಿಗೆ ಸಮೀಪದ ಕುಂಜಿಲ- ಕಕ್ಕಬ್ಬೆ ಗ್ರಾ.ಪಂ. ವ್ಯಾಪ್ತಿಯ ನಾಲಡಿಯಲ್ಲಿ ಕಾಣಿಸಿಕೊಂಡು, ತೋಟದ ಮನೆಯೊಂದರಲ್ಲಿ ಊಟ ಮಾಡಿ ದಿನಸಿಯೊಂದಿಗೆ ಪರಾರಿಯಾಗಿರುವ ಮೂವರು ಶಸ್ತ್ರಧಾರಿ ನಕ್ಸಲರಿಗಾಗಿ ಇಂದು ದಿನವಿಡೀ ವ್ಯಾಪಕ ಶೋಧ ಮುಂದುವರಿದಿದೆ. ಈ ಸಂಬಂಧ ಕರ್ನಾಟಕ ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್ ಅವರು ಖುದ್ದು ಘಟನೆ ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ.ನಾಲಡಿ ಗ್ರಾಮದ ನಿವೃತ್ತ ಬ್ರಿಗೇಡಿಯರ್ ಬಲ್ಲಚಂಡ ಮುತ್ತಣ್ಣ ಅವರ ತೋಟದ ಮನೆಗೆ ಪೊಲೀಸ್ ತಂಡದೊಂದಿಗೆ ಆಗಮಿಸಿದ್ದ ಐಜಿಪಿ ವಿಪುಲ್‍ಕುಮಾರ್ ಹಾಗೂ ಇತರ ಅಧಿಕಾರಿಗಳು, ಪ್ರತ್ಯಕ್ಷದರ್ಶಿಗಳಿಂದ ನಕ್ಸಲರ ಕುರಿತು ಸಮಗ್ರ ಮಾಹಿತಿ ಕಲೆ ಹಾಕುವದರೊಂದಿಗೆ ನಿನ್ನೆಯ ಘಟನೆ ಬಗ್ಗೆ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಅಲ್ಲಿಂದ ನಾಪೋಕ್ಲು ಠಾಣೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್, ನಕ್ಸಲ್ ನಿಗ್ರಹಪಡೆ ಅಧಿಕಾರಿ
ಲಕ್ಷ್ಮಿ ಪ್ರಸಾದ್ ಹಾಗೂ ಇತರರೊಂದಿಗೆ
(ಮೊದಲ ಪುಟದಿಂದ) ರಾತ್ರಿ ಬಹುಹೊತ್ತಿನ ತನಕವೂ ವಿಪುಲ್ ಕುಮಾರ್ ಸುದೀರ್ಘ ಚರ್ಚೆ ನಡೆಸಿದ್ದು, ನಕ್ಸಲ್ ಚಟುವಟಿಕೆ ನಿಗ್ರಹಿಸುವ ದಿಸೆಯಲ್ಲಿ ಗಂಭೀರ ಚಿಂತನೆಯಲ್ಲಿ ತೊಡಗಿದ್ದಾಗಿ ಮೂಲಗಳಿಂದ ಗೊತ್ತಾಗಿದೆ.
ನಾಲಡಿಯಲ್ಲಿ ನಕ್ಸಲರು ಕಾಣಿಸಿಕೊಂಡಿದ್ದ ತೋಟದ ಕಾರ್ಮಿಕರು ವಾಸವಿರುವ ಸ್ಥಳಕ್ಕೆ ಮಧ್ಯಾಹ್ನದ ಸುಮಾರಿಗೆ ಧಾವಿಸಿದ ವರಿಷ್ಠ ಪೊಲೀಸ್ ಅಧಿಕಾರಿ ಜಿಲ್ಲಾ ಮಟ್ಟದ ಸಮಾಲೋಚನೆಯಲ್ಲಿ ತೊಡಗಿದ್ದಲ್ಲದೆ, ಸಂಜೆಗತ್ತಲೆ ನಡುವೆ ನಾಪೋಕ್ಲು ಠಾಣೆಯಲ್ಲಿ ಮತ್ತೊಂದು ಸುತ್ತಿನ ಚರ್ಚೆ ನಡೆಸಿದ್ದಾರೆ. ಈ ವೇಳೆ ಡಿವೈಎಸ್ಪಿ ಸುಂದರ್‍ರಾಜ್, ಠಾಣಾಧಿಕಾರಿ ನಂಜುಂಡಸ್ವಾಮಿ ಮೊದಲಾದವರು ಹಾಜರಿದ್ದರೆಂದು ಗೊತ್ತಾಗಿದೆ.
ಅಲ್ಲದೆ ಕೊಡಗು ಪೊಲೀಸರ ಸಹಿತ ನಕ್ಸಲ್ ನಿಗ್ರಹಪಡೆ ಪ್ರತ್ಯೇಕ ತಂಡಗಳಲ್ಲಿ ತಡಿಯಂಡಮೋಳ್ ಶಿಖರ ವ್ಯಾಪ್ತಿ ಹಾಗೂ ಭಾಗಮಂಡಲ ಶ್ರೇಣಿಯ ಮುಂಡ್ರೋಟು ಸರಹದ್ದಿನಲ್ಲಿ ಇಂದು ನಕ್ಸಲರ ಚಲನವಲನ ಕುರಿತು ಶೋಧ (ಕೋಂಬಿಂಗ್) ನಡೆಸಿದ್ದಾಗಿ ತಿಳಿದುಬಂದಿದೆ.
ಮುಂಜಾನೆಯಿಂದಲೇ ಕಾನನದ ನಡುವೆ ವ್ಯಾಪಕ ಶೋಧದಲ್ಲಿರುವ ನಕ್ಸಲ್ ನಿಗ್ರಹ ದಳಕ್ಕೆ ಇಲಾಖೆಯಿಂದ ನೀರು, ಆಹಾರ ಇತ್ಯಾದಿ ಪೂರೈಸಿದ್ದು, ಕಾರ್ಯಾಚರಣೆ ತೀವ್ರಗೊಳಿ¸ Àಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಯಾವದೇ ಸುಳಿವು ಇನ್ನು ಲಭಿಸಿಲ್ಲವೆಂದು ಮಾಹಿತಿ ಲಭಿಸಿದೆ.
ಕ್ರಮಕ್ಕೆ ಆಗ್ರಹ
ತಮ್ಮ ತೋಟದಲ್ಲಿ ಕಾಣಿಸಿಕೊಂಡಿರುವ ನಕ್ಸಲರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಮಾಲೀಕರು ಹಾಗೂ ನಿವೃತ್ತ ಸೈನ್ಯಾಧಿಕಾರಿ ಮುತ್ತಣ್ಣ, ಈ ಬಗ್ಗೆ ಸರಕಾರ ಎಚ್ಚೆತ್ತುಕೊಂಡು ಗಡಿಭಾಗ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಸದಾ ಕಣ್ಗಾವಲು ಇರಿಸಬೇಕೆಂದು ಆಗ್ರಹಪಡಿಸಿದ್ದಾರೆ. ಅಲ್ಲದೆ ಕೇರಳ- ಕೊಡಗು ಹಾಗೂ ನಕ್ಸಲ್ ಪೀಡಿತ ಪ್ರದೇಶಗಳ ಹಾದಿಯಲ್ಲಿ ನಿರಂತರ ಶೋಧ ಅಗತ್ಯವೆಂದು ಸಲಹೆ ನೀಡಿದ್ದಾರೆ.
-ಮಾಹಿತಿ: ಪ್ರಭಾಕರ್,
ಚಿತ್ರ: ದುಗ್ಗಳ